ಗಿರೀಶ್ ಗರಗಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಭೂಪ್ರದೇಶದ ಶೇ.25ರಷ್ಟಿರುವ ಅರಣ್ಯ ಪ್ರದೇಶ ಕಾಯಲು ಸಮರ್ಪಕ ಸಿಬ್ಬಂದಿಯೇ ಇಲ್ಲ. ಅದರಲ್ಲೂ ಅರಣ್ಯ ಇಲಾಖೆಗೆ ಮಂಜೂರಾದ ಹುದ್ದೆಗಳ ಪೈಕಿ ಶೇ.40ಕ್ಕೂ ಹೆಚ್ಚಿನ ಹುದ್ದೆಗಳಿಗೆ ಕಾಯಂ ಸಿಬ್ಬಂದಿ ಇಲ್ಲ. ಹೀಗಾಗಿಯೇ ವರ್ಷದಿಂದ ವರ್ಷಕ್ಕೆ ವನ್ಯಜೀವಿಗಳ ಕಳ್ಳಬೇಟೆ, ಅರಣ್ಯ ಭೂಮಿ ಒತ್ತುವರಿ ಹೆಚ್ಚುವಂತಾಗಿದೆ.ಭೌಗೋಳಿಕವಾಗಿ ಕರ್ನಾಟಕವು 1.91 ಲಕ್ಷ ಚದರ ಕಿ.ಮೀ. ವಿಸ್ತೀರ್ಣದ ಭೂಪ್ರದೇಶ ಹೊಂದಿದೆ. ಅದರಲ್ಲಿ 40,649 ಚದರ ಕಿಮೀ ವಿಸ್ತೀರ್ಣದ ಅರಣ್ಯ ಪ್ರದೇಶವಿದೆ. ಅದರಲ್ಲಿ ಸದ್ಯ 2 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿದೆ. ಅಲ್ಲದೆ ಪ್ರತಿವರ್ಷ ರಾಜ್ಯದಲ್ಲಿ 100ಕ್ಕೂ ಹೆಚ್ಚಿನ ಕಳ್ಳಬೇಟೆ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಅರಣ್ಯ ಇಲಾಖೆ ಸಿಬ್ಬಂದಿಗೆ ದೊರೆತ ಮಾಹಿತಿಯನ್ನಾಧರಿಸಿ ಪತ್ತೆಯಾಗುವ ಪ್ರಕರಣಗಳಾದರೆ, ಸಿಬ್ಬಂದಿ ಕೊರತೆ ಕಾರಣದಿಂದಾಗಿ ಇನ್ನೂ ಹಲವು ಕಳ್ಳಬೇಟೆ ಪ್ರಕರಣಗಳು ತಿಳಿಯದೇ ಇರುವಂತಾಗಿದೆ. ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಅಗತ್ಯವಿರುವ ಗ್ರೂಪ್ ಸಿ ಮತ್ತು ಡಿ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ಕೊರತೆ ಸಾಕಷ್ಟಿದೆ. ಇದರಿಂದಾಗಿ ಅರಣ್ಯ ಸಂರಕ್ಷಣೆ ಸೇರಿದಂತೆ ಇಲಾಖೆಯ ಕಾರ್ಯಗಳು ಸಮರ್ಪಕವಾಗಿ ಆಗದಂತಾಗಿದೆ.ರಾಜ್ಯದಲ್ಲಿ 5 ಹುಲಿ ಸಂರಕ್ಷಿತಾರಣ್ಯ ಸೇರಿದಂತೆ 36 ವನ್ಯಜೀವಿ ಅಭಯಾರಣ್ಯ, 17 ಸಂರಕ್ಷಿತಾರಣ್ಯ ಹಾಗೂ 1 ಸಮುದಾಯ ಮೀಸಲು ಅರಣ್ಯವಿದೆ. ಒಟ್ಟಾರೆ ರಾಜ್ಯದಲ್ಲಿ 40,649.30 ಚದರ ಕಿ.ಮೀ. ವಿಸ್ತೀರ್ಣದ ಅರಣ್ಯ ಪ್ರದೇಶವಿದೆ. ಈ ಅರಣ್ಯಗಳ ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ಸರ್ಕಾರ 14,766 ಹುದ್ದೆಗಳನ್ನು ಮಂಜೂರು ಮಾಡಿದೆ. ಅದರಲ್ಲಿ ಸದ್ಯ 8,551 ಹುದ್ದೆ ಭರ್ತಿ ಮಾಡಲಾಗಿದ್ದು, 6,215 ಹುದ್ದೆಗಳು ಖಾಲಿಯಿವೆ. ಅವುಗಳಲ್ಲಿ ಅರ್ಧದಷ್ಟಕ್ಕೆ ದಿನಗೂಲಿ ನೌಕರರನ್ನು ನೇಮಿಸಲಾಗಿದೆ. ಉಳಿದಂತೆ ಖಾಲಿ ಇರುವ ಹುದ್ದೆಗಳಲ್ಲಿ 3 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿಯೇ ಕೆಲಸ ಮಾಡುತ್ತಾರೆ.ಅರಣ್ಯ ಸಂರಕ್ಷಣೆ ಸೇರಿದಂತೆ ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚಾಗಿ ತಿರುಗಾಡಿ ಕೆಲಸ ಮಾಡುವವರಲ್ಲಿ ಅರಣ್ಯ ರಕ್ಷಕರು (ಫಾರೆಸ್ಟ್ ಗಾರ್ಡ್), ಅರಣ್ಯ ವೀಕ್ಷಕರು (ಫಾರೆಸ್ಟ್ ವಾಚರ್)ಗಳ ಸಂಖ್ಯೆಯೇ ಹೆಚ್ಚು. ಅರಣ್ಯ ಇಲಾಖೆಗೆ ಮಂಜೂರಾಗಿರುವ 14,766 ಹುದ್ದೆಗಳ ಪೈಕಿ, 5,494 ಅರಣ್ಯ ರಕ್ಷಕ ಹುದ್ದೆಗಳಾಗಿವೆ. ಅದರಲ್ಲಿ 2,913 ಹುದ್ದೆಗಳಿಗೆ ಮಾತ್ರ ಅರಣ್ಯ ರಕ್ಷಕರ ನೇಮಕವಾಗಿದೆ. ಉಳಿದಂತೆ 2,581 ಹುದ್ದೆಗಳಿಗೆ ಕಾಯಂ ಸಿಬ್ಬಂದಿ ನೇಮಕ ಮಾಡಿಕೊಂಡಿಲ್ಲ. ಅದರ ಜತೆಗೆ ಅರಣ್ಯ ವೀಕ್ಷಕ ಹುದ್ದೆ 1,892 ಮಂಜೂರಾಗಿದ್ದು, ಅದರಲ್ಲಿ ಈವರೆಗೆ 241 ಹುದ್ದೆಗಳಿಗೆ ಮಾತ್ರ ಕಾಯಂ ಸಿಬ್ಬಂದಿ ನೇಮಿಸಲಾಗಿದೆ. ಉಳಿದಂತೆ ಇನ್ನೂ 1,651 ಹುದ್ದೆಗಳು ಭರ್ತಿಯಾಗಬೇಕಿದೆ.ಕಾಯಂ ಹುದ್ದೆ ಭರ್ತಿ ಮಾಡಲಾಗದ ಕಡೆಗಳಲ್ಲಿ ದಿನಗೂಲಿ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಸದ್ಯ ಅರಣ್ಯ ಇಲಾಖೆಯಲ್ಲಿ 6,215 ಹುದ್ದೆಗಳು ಖಾಲಿಯಿವೆ. ಅದರಲ್ಲಿ 2022-23ರ ವೇಳೆಗೆ ಅರಣ್ಯ ಇಲಾಖೆಯು 2,839 ಹುದ್ದೆಗಳಿಗೆ ದಿನಗೂಲಿ ಆಧಾರದಲ್ಲಿ ಸಿಬ್ಬಂದಿ ನೇಮಿಸಿಕೊಂಡಿದೆ. ಅಂದರೆ ಇನ್ನೂ 3,376 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ದಿನಗೂಲಿ ಆಧಾರದಲ್ಲಿ ನೇಮಿಸಲಾದ ಸಿಬ್ಬಂದಿ ಪೈಕಿ ಡಿ ವರ್ಗದ 2,471 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ.