ಲಾರಿ ಮುಷ್ಕರ: ಜಿಲ್ಲಾದ್ಯಂತ 5 ಸಾವಿರಕ್ಕೂ ಅಧಿಕ ಲಾರಿಗಳು ಸ್ತಬ್ಧ

KannadaprabhaNewsNetwork | Published : Apr 16, 2025 12:46 AM

ಸಾರಾಂಶ

ಬೆಳಗಾವಿ ಜಿಲ್ಲೆ ನಿಪ್ಪಾಣಿ, ಬೆಂಗಳೂರಿನ ಅತ್ತಿಬೆಲೆ ಚೆಕ್ ಪೋಸ್ಟ್‌ಗಳ ಹಗಲು ದರೋಡೆ, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯವ್ಯಾಪಿ ಕರೆ ಮೇರೆಗೆ ನಡೆದ ಲಾರಿ ಮುಷ್ಕರಕ್ಕೆ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಲಾರಿಗಳು ನಿಂತಲ್ಲೇ ನಿಂತಿವೆ. ಲಾರಿ ಮಾಲೀಕರು, ಚಾಲಕರು ಸಂಘದ ನೇತೃತ್ವದ ಹೋರಾಟಕ್ಕೆ ಸಾಥ್ ನೀಡಿದ್ದಾರೆ.

- 1ನೇ ದಿನವೇ ಜನಜೀವನ ಮೇಲೂ ವ್ಯತಿರಿಕ್ತ ಪರಿಣಾಮ, ಬೆಲೆ ಏರಿಕೆ ಆತಂಕ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಳಗಾವಿ ಜಿಲ್ಲೆ ನಿಪ್ಪಾಣಿ, ಬೆಂಗಳೂರಿನ ಅತ್ತಿಬೆಲೆ ಚೆಕ್ ಪೋಸ್ಟ್‌ಗಳ ಹಗಲು ದರೋಡೆ, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯವ್ಯಾಪಿ ಕರೆ ಮೇರೆಗೆ ನಡೆದ ಲಾರಿ ಮುಷ್ಕರಕ್ಕೆ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಲಾರಿಗಳು ನಿಂತಲ್ಲೇ ನಿಂತಿವೆ. ಲಾರಿ ಮಾಲೀಕರು, ಚಾಲಕರು ಸಂಘದ ನೇತೃತ್ವದ ಹೋರಾಟಕ್ಕೆ ಸಾಥ್ ನೀಡಿದ್ದಾರೆ.

ದಾವಣಗೆರೆ ನಗರ, ಹರಿಹರ, ಮಲೇಬೆನ್ನೂರು, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು ಸೇರಿದಂತೆ ಜಿಲ್ಲಾದ್ಯಂತ ನಗರ, ಪಟ್ಟಣ, ಹಳ್ಳಿ ಎಲ್ಲೆಲ್ಲಿ ಲಾರಿಗಳು ಇದ್ದವೋ ಅಲ್ಲಲ್ಲಿಯೇ ನಿಂತಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಂದೇ ಒಂದು ಲೋಡ್‌, ಅನ್‌ ಲೋಡ್‌ ನಡೆಯದೇ ಸರಕು ಸಾಗಣೆ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ.

ಅಕ್ಕಿ ಗಿರಣಿ, ಎಂ-ಸ್ಯಾಂಡ್‌, ಕ್ವಾರಿ ಲಾರಿ, ಟಿಪ್ಪರ್ ಲಾರಿ, ಸರಕು ಸಾಗಣೆ ಲಾರಿ ಸೇರಿದಂತೆ ಎಲ್ಲ ಸೇವೆಗಳ ಲಾರಿಗಳನ್ನು ಮಾಲೀಕರು, ಚಾಲಕರು ನಿಲ್ಲಿಸಿದ್ದಾರೆ. ರಾಜ್ಯವನ್ನು ಬಿಟ್ಟು ಹೊರ ರಾಜ್ಯಗಳಿಗೆ ಹೋಗಿದ್ದ ಲಾರಿಗಳು ಗಡಿ ಜಿಲ್ಲೆಗಳಲ್ಲೇ ಬಂದು ನಿಂತಿವೆ. ಜಿಲ್ಲಾ ಲಾರಿ ಮಾಲೀಕರ ಮತ್ತು ಚಾಲಕರು, ಏಜೆಂಟರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಯಶಸ್ವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಚೆಕ್‌ ಪೋಸ್ಟ್‌ಗಳಲ್ಲಿ ಲಾರಿ ಮಾಲೀಕರು, ಚಾಲಕರಿಗೆ ಆಗುತ್ತಿರುವ ದೌರ್ಜನ್ಯ, ಹಗಲು ದರೋಡೆ ನಿಲ್ಲಬೇಕು, ಡೀಸೆಲ್ ಬೆಲೆ ಇಳಿಸಬೇಕೆಂಬುದೇ ಪ್ರಮುಖ ಬೇಡಿಕೆಯಾಗಿದೆ.

ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲಾದ್ಯಂತ 5 ಸಾವಿರಕ್ಕೂ ಅಧಿಕ ಲಾರಿಗಳು ಮುಷ್ಕರಕ್ಕೆ ತೊಡಗಿರುವ ಬೆನ್ನಲ್ಲೇ ಮೊದಲ ದಿನವೇ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಮಂಗಳವಾರ ಇಡೀ ದಿನ, ಸಂಜೆ, ತಡರಾತ್ರಿ, ನಸುಕಿನ ವೇಳೆಗೆ ಬರಬೇಕಾಗಿದ್ದ ಆಹಾರ ಪದಾರ್ಥ, ಹಣ್ಣು, ತರಕಾರಿ, ಸೊಪ್ಪು, ಔಷಧಿ, ಮಾತ್ರೆ, ಅಗತ್ಯ ವಸ್ತುಗಳ ಸಾಗಾಟವೂ ಸ್ಥಗಿತವಾಗಿದೆ.

ಮೊದಲ ದಿನವೇ ಸರ್ಕಾರಕ್ಕೆ ಲಾರಿ ಮುಷ್ಕರದ ಕಾವು ಬಡಿದಿದೆ. ಆದರೂ, ಬುಧವಾರದಿಂದ ಲಾರಿ ಮಾಲೀಕರು, ಚಾಲಕರು, ಏಜೆಂಟರ ಸಂಘದ ಹೋರಾಟದ ಕಾವು ಮೊದಲು ಸರ್ಕಾರಕ್ಕೆ ತಾಗುವುದು ಸ್ಪಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ.

- - -

(ಬಾಕ್ಸ್‌) * ಪ್ರಮುಖ ಬೇಡಿಕೆಗಳು - ನಿಪ್ಪಾಣಿ ಮತ್ತು ಅತ್ತಿಬೆಲೆ ಚೆಕ್ ಪೋಸ್ಟ್‌ಗಳಲ್ಲಿ ಲಾರಿ ಮಾಲೀಕರು, ಚಾಲಕರ ಸುಲಿಗೆಯನ್ನು ನಿಲ್ಲಿಸಬೇಕು.

- ರಾಜ್ಯಾದ್ಯಂತ ಆನ್ ಲೈನ್ ಮೂಲಕ ಜಿಎಸ್‌, ಸೇಲ್‌ ಟ್ಯಾಕ್ಸ್ ವಿವರ ಬಂದಿದ್ದರೂ, ತಪಾಸಣೆ ಹೆಸರಿನಲ್ಲಿ ಸಂಬಂಧಿಸಿದ ಇಲಾಖೆಗಳು ನಡೆಸುವ ಸುಲಿಗೆ ಕೊನೆಗಾಣಬೇಕು

- ಲಾರಿಗಳ ಎಫ್‌ಸಿ ಮಾಡಲು ಸಹ ಲಂಚಕ್ಕಾಗಿ ಪೀಡಿಸುವುದನ್ನು ಮೊದಲು ನಿಲ್ಲಿಸಬೇಕು.

- ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸದಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ₹5 ಹೆಚ್ಚಿಸಿದ್ದು ಸರಿಯಲ್ಲ

- ಡೀಸೆಲ್, ಪೆಟ್ರೋಲ್ ದರ ಸಹ ಇಳಿಸಬೇಕು

- - -

Share this article