ಚಿಕ್ಕಮಗಳೂರುಇನ್ನೇನು ಕೆಲವೇ ದಿನಗಳಲ್ಲಿ ಶಾಲೆಗಳು ಪುನರ್ ಆರಂಭಗೊಳ್ಳಲಿರುವ ಪ್ರಸಕ್ತ 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸುಮಾರು 80ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಶಿಕ್ಷಣ ಇಲಾಖೆ ಶಾಶ್ವತವಾಗಿ ಮುಚ್ಚಲು ಸಿದ್ಧತೆ ಮಾಡಿಕೊಂಡಿದೆ.
70 ರಿಂದ 80 ಸರ್ಕಾರಿ ಶಾಲೆಗಳು ಕೆಪಿಎಸ್ ಶಾಲೆಗಳಲ್ಲಿ ವಿಲೀನವಾಗುವ ಮೂಲಕ ಬಂದ್
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಇನ್ನೇನು ಕೆಲವೇ ದಿನಗಳಲ್ಲಿ ಶಾಲೆಗಳು ಪುನರ್ ಆರಂಭಗೊಳ್ಳಲಿರುವ ಪ್ರಸಕ್ತ 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸುಮಾರು 80ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಶಿಕ್ಷಣ ಇಲಾಖೆ ಶಾಶ್ವತವಾಗಿ ಮುಚ್ಚಲು ಸಿದ್ಧತೆ ಮಾಡಿಕೊಂಡಿದೆ.
ರಾಜ್ಯ ಸರ್ಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ 15 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) 2026-27ನೇ ಸಾಲಿನಲ್ಲಿ ಹೊಸದಾಗಿ ಆರಂಭಿಸಲು ಈಗಾಗಲೇ ಅನುಮತಿ ಸಿಕ್ಕಿದೆ. ಈ ಒಂದೊಂದು ಕೆಪಿಎಸ್ ಶಾಲೆಗಳಿಗೂ ಸುತ್ತಮುತ್ತಲ ಐದಾರು ಕಿ.ಮೀ. ವ್ಯಾಪ್ತಿಯ ಕನಿಷ್ಠ 5 ರಿಂದ ಗರಿಷ್ಠ 10 ಶಾಲೆಗಳ ವಿಲೀನಕ್ಕೆ ಸದ್ದಿಲ್ಲದೆ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಮುಂಬ ರುವ ಶೈಕ್ಷಣಿಕ ಸಾಲಿನಲ್ಲಿ ಕನಿಷ್ಠ 70 ರಿಂದ 80 ಸರ್ಕಾರಿ ಶಾಲೆಗಳು ಕೆಪಿಎಸ್ ಶಾಲೆಗಳಲ್ಲಿ ವಿಲೀನವಾಗುವ ಮೂಲಕ ಬಂದ್ ಆಗಲಿವೆ.
ಅಷ್ಟೇ ಅಲ್ಲದೇ ಈಗಾಗಲೇ ಜಿಲ್ಲೆಯಲ್ಲಿ ಎಷ್ಟು ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಪರಿವರ್ತನೆ ಮಾಡಬಹುದು. ಸಮೀಪದ ಎಷ್ಟು ಶಾಲೆಗಳನ್ನು ಕೆಪಿಎಸ್ ಶಾಲೆಗಳಿಗೆ ವಿಲೀನಗೊಳಿಸಬಹುದು ಎಂಬ ಬಗ್ಗೆ ಈಗಾಗಲೇ ನೀಲ ನಕ್ಷೆ ಸಿದ್ಧಪಡಿಸಿ ಕೊಳ್ಳಲಾಗಿದೆ. ಪ್ರಸಕ್ತ ವರ್ಷದಲ್ಲಿ ಒಂದಿಷ್ಟು ಸಂಖ್ಯೆ ಶಾಲೆಗಳು, ಮುಂದಿನ ವರ್ಷ ಮತ್ತಷ್ಟು ಶಾಲೆಗಳು ಹೀಗೆ, ಹಂತ ಹಂತ ವಾಗಿ ವಿಲೀನಗೊಳಿಸಲು ಮೊದಲ ಹಂತದ ತಯಾರಿ ಮಾಡಲಾಗಿದೆ ಎಂಬುದನ್ನು ಮೂಲಗಳು ತಿಳಿಸಿವೆ.
2025-26ರಲ್ಲಿ 21 ಶಾಲೆ ಬಂದ್‌ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 2025-26ನೇ ಸಾಲಿನಲ್ಲಿ ಬೀರೂರು ಬ್ಲಾಕ್‌ನ 3, ಚಿಕ್ಕಮಗಳೂರಿನ 9, ಕಡೂರಿನ 6, ಮೂಡಿಗೆರೆ ಹಾಗೂ ತರೀಕೆರೆ ಬ್ಲಾಕ್ ತಲಾ 2 ಶಾಲೆಯಂತೆ ಒಟ್ಟು 21 ಶಾಲೆಗಳನ್ನು ಅಧಿಕೃತವಾಗಿ ಬಂದ್ ಮಾಡಲಾಗಿದೆ. ಈ ಪೈಕಿ 19 ಶಾಲೆಗಳು 1 ರಿಂದ 5ನೇ ತರಗತಿ ಶಾಲೆಗಳಾಗಿವೆ. ಉಳಿದ ಎರಡು 1 ರಿಂದ 7ನೇ ತರಗತಿ ಶಾಲೆಗಳಾಗಿವೆ.
-- ಬಾಕ್ಸ್--
ಈವರೆಗೆ ಜಿಲ್ಲೆಯ 292 ಶಾಲೆ ಬಂದ್
ಈವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು 20 ರಿಂದ 25 ಶಾಲೆಳನ್ನು ಬಂದ್ ಮಾಡಲಾಗುತ್ತಿದ್ದು, ಈವರೆಗೆ ಬರೋಬ್ಬರಿ 292 ಶಾಲೆಗಳನ್ನು ಅಧಿಕೃತವಾಗಿ ಬಂದ್ ಮಾಡಲಾಗಿದೆ. ಈ ಪೈಕಿ ಮೂಡಿಗೆರೆ ತಾಲೂಕಿನಲ್ಲೆ ಅತಿ ಹೆಚ್ಚು 68 ಶಾಲೆಗಳನ್ನು ಬಂದ್ ಮಾಡಲಾಗಿದೆ. ಉಳಿದಂತೆ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯಲ್ಲಿ 52 ಶಾಲೆ, ಬೀರೂರು 26 ಶಾಲೆ, ಕಡೂರು 33 ಶಾಲೆ, ಕೊಪ್ಪ 29 ಶಾಲೆ, ಎನ್.ಆರ್,ಪುರ 26 ಶಾಲೆ, ಶೃಂಗೇರಿ 30 ಶಾಲೆ ಹಾಗೂ ತರೀಕೆರೆ ತಾಲೂಕಿನಲ್ಲಿ 28 ಶಾಲೆಗಳನ್ನು ಬಂದ್ ಮಾಡಲಾಗಿದೆ.
-- ಬಾಕ್ಸ್--ಕೆಲವೇ ಶಾಲೆ ಪುನಾರಂಭ
ಶಾಲೆಗಳು ಬಂದ್ ಮಾಡಿದ ಪೈಕಿ ಈವರೆಗೆ ಕೆಲವು ಶಾಲೆಗಳನ್ನು ಪುನರ್ ಆರಂಭಿಸುವುದಕ್ಕೂ ಕ್ರಮ ವಹಿಸಲಾಗಿದೆ. ಆದರೆ, ಆ ಸಂಖ್ಯೆ ಬಂದ್ ಆಗಿರುವ ಸಂಖ್ಯೆಗೆ ಹೋಲಿಕೆ ಮಾಡಿದರೆ ತೀರಾ ಕಡಿಮೆ ಇದೆ. 2021-22ರಲ್ಲಿ 10 ಶಾಲೆಗಳನ್ನು ಪುನರ್ ಆರಂಭಿಸಲಾಗಿದೆ. ಆ ನಂತರ ಆರಂಭಗೊಂಡ ಶಾಲೆಗಳ ವಿವರ ಲಭ್ಯವಿಲ್ಲ.---ಬಾಕ್ಸ್---
ಈಗಾಗಲೇ ಹುತ್ತಾರು ಕಿ.ಮೀ ವಿದ್ಯಾರ್ಥಿಗಳು ಓಡಾಟ
ಈಗಾಗಲೇ ಮಲೆನಾಡು ಭಾಗದ ಹಳ್ಳಿಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರುವುದಕ್ಕೆ ಹತ್ತಾರು ಕಿ.ಮೀ ದೂರ ಬಸ್, ಕಾಲ್ನಡಿಗೆ ಮೂಲಕ ಆಗಮಿಸುವ ಪರಿಸ್ಥಿತಿ ಇದೆ. ಕೆಪಿಎಸ್ ಶಾಲೆ ಹೆಸರಿನಲ್ಲಿ ಶಾಲೆಗಳನ್ನು ವಿಲೀನ ಮಾಡಿದರೆ ಆ ಮಕ್ಕಳಿಗೆ ಶಾಲೆ ಮತ್ತಷ್ಟು ದೂರವಾಗಲಿದೆ. ಆಗ ಆ ಮಗು ಶಾಲೆ ಬಿಡುವ ಸಾಧ್ಯತೆ ಇದೆ. ಕೆಪಿಎಸ್ ಶಾಲೆಗೆ ಮಕ್ಕಳು ಬರುವುದಕ್ಕೆ ಬಸ್ ವ್ಯವಸ್ಥೆ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಕೆಲವು ಪ್ರದೇಶಗಳಿಗೆ ಬಸ್ ಹೋಗಲು ರಸ್ತೆಗಳೇ ಇಲ್ಲ. ಬಸ್ ಇಲ್ಲದ ಹಳ್ಳಿಗಳಿಂದ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಆ ಮಕ್ಕಳ ಪರಿಸ್ಥಿತಿ ಏನು ಎಂದು ಚಿಕ್ಕಮಗಳೂರು ಎಐಡಿಎಸ್ಓ ಜಿಲ್ಲಾ ಸಂಚಾಲಕಿ ಚೈತ್ರಾ ಪ್ರಶ್ನಿಸಿದ್ದಾರೆ.
--ಕೋಟ್--
ಕನ್ನಡ ಮಾಧ್ಯಮ ಮಾತ್ರ ಇರುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಅಲ್ಲಿ ಮಾತ್ರ ಸಮಸ್ಯೆ ಎದುರಾಗುತ್ತಿದೆ. ವಿಲೀನ ಮಾಡುವ ಶಾಲೆಗಳಿಂದ ಮಕ್ಕಳು ಕೆಪಿಎಸ್ ಶಾಲೆಗೆ ಬರುವುದಕ್ಕೆ ಬಸ್ ವ್ಯವಸ್ಥೆ ಸಹ ಮಾಡಲಾಗುತ್ತದೆ. ಕೆಪಿಎಸ್ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಕ್ಕೆ ಸರ್ಕಾರ ಚಿಂತನೆ ಮಾಡಿದೆ.
- ತಿಮ್ಮರಾಜು, ಉಪ ನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ ಚಿಕ್ಕಮಗಳೂರು
ಫೋಟೋಚಿಕ್ಕಮಗಳೂರಿನ ಇಳೆಹೊಳೆಯ ಸರ್ಕಾರಿ ಶಾಲೆ ಮುಚ್ಚದಂತೆ ಪೋಷಕರು ಮತ್ತು ವಿದ್ಯಾರ್ಥಿಗಳು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.