ಕಾರವಾರ: ಈಗಾಗಲೇ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದು ಯಂತ್ರಗಳು ಸ್ಟ್ರಾಂಗ್ ರೂಮಿನಲ್ಲಿ ಭದ್ರವಾಗಿದ್ದು, ಜೂ. ೪ರಂದು ಮತಎಣಿಕೆಗೆ ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ. ಈ ಬಾರಿಯ ಮತಎಣಿಕೆ ಕಾರ್ಯದಲ್ಲಿ ಒಟ್ಟೂ ೪೯೬ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ.
ತರಬೇತಿ: ಮತ ಎಣಿಕೆ ಮಾಡುವ ಸಿಬ್ಬಂದಿಗೆ ೨ ಹಂತದಲ್ಲಿ ತರಬೇತಿ ಕೂಡಾ ಆಯೋಜಿಸಲಾಗಿದ್ದು, ಮೊದಲ ಹಂತ ಮೇ ೨೮ರಂದು ಕುಮಟಾ ಹಾಲಕ್ಕಿ ಒಕ್ಕಲಿಗರ ಸಭಾಭವನ ಹಾಗೂ ಜೂ. ೩ರಂದು ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ನಡೆಯಲಿದೆ. ಬಾಳಿಗಾ ಕಾಲೇಜಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಸ್ಟ್ರಾಂಗ್ ರೂಮ್ ವ್ಯವಸ್ಥೆ ಮಾಡಲಾಗಿದ್ದು, ಜೂ. ೪ರಂದು ಅಲ್ಲಿಯೇ ಮತ ಎಣಿಕೆ ನಡೆಯಲಿದೆ.
ಮತ ಎಣಿಕೆಯ ದಿನ ವಿವಿಧ ಪಕ್ಷಗಳ ಸಾವಿರಾರು ಕಾರ್ಯಕರ್ತರು ಕುಮಟಾದಲ್ಲಿ ಸೇರುತ್ತಾರೆ. ಮತ ಎಣಿಕಾ ಕೇಂದ್ರದ ಸುತ್ತ ನಿಷೇಧಾಜ್ಞೆ ಇರುವುದರಿಂದ ಕುಮಟಾದ ಹೆಗಡೆ ಸರ್ಕಲ್ ವರೆಗೆ ಮಾತ್ರ ಸಾರ್ವಜನಿಕರಿಗೆ, ಕಾರ್ಯಕರ್ತರಿಗೆ ಪ್ರವೇಶಕ್ಕೆ ಅವಕಾಶ ಇರುತ್ತದೆ. ನೂರಾರು ಪೊಲೀಸರು ಮತ ಎಣಿಕಾ ಕೇಂದ್ರದ ಸುತ್ತ ಬಂದೋಬಸ್ತ್ ಒದಗಿಸಿರುತ್ತಾರೆ.ನೇರ ಪೈಪೋಟಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟೂ ೧೩ ಅಭ್ಯರ್ಥಿಗಳಿದ್ದು, ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ ಹಾಗೂ ಬಿಜೆಪಿ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ನೇರ ಪೈಪೋಟಿಯಿದೆ. ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಎನ್ನುವ ಕುತೂಹಲ ಜನರಲ್ಲಿ ಸಾಕಷ್ಟಿದೆ.