ಕನ್ನಡಪ್ರಭ ವಾರ್ತೆ ಯಾದಗಿರಿ
ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಿದೆ. ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗೆ ದುರಂಹಕಾರ ಹೆಚ್ಚಾಗಿದೆ, ಅವರ ದುರಂಹಕಾರದಿಂದಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಯಾದಗಿರಿಯಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೋಮವಾರ ಸಂಜೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತ, ನಾವು ಯಾವುದೇ ಸರ್ಕಾರವನ್ನು ಬೀಳಿಸೋಲ್ಲ, ಕಾಂಗ್ರೆಸ್‌ನಲ್ಲಿ ಶಾಸಕರ ಅಸಮಾಧಾನ ತುಂಬಿ ತುಳುಕುತ್ತಿದೆ. ರಾಜ್ಯ ಸರಕಾರ ಪತನ ಆಗುವುದು ಗ್ಯಾರಂಟಿ. ಕಾಂಗ್ರೆಸ್ ಶಾಸಕರ ಅಸಮಾಧಾನದಿಂದ ಸರಕಾರ ಪತನ ಆಗುತ್ತದೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ನಲ್ಲಿ ಶಾಸಕರು ಅತೃಪ್ತಿಯಾಗಿದ್ದರೆ ಅವರೇ ಬರುತ್ತಾರೆ ಎಂದ ಯತ್ನಾಳ್,ಕಾಂಗ್ರೆಸ್ ನಲ್ಲಿ ಅಭಿವೃದ್ಧಿ ಯೋಜನೆಗೆ ಹಣ ಬಿಡುಗಡೆ ಮಾಡದಿದ್ದಕ್ಕೆ ಕಾಂಗ್ರೆಸ್ ಶಾಸಕರು ಹತಾಶರಾಗಿದ್ದಾರೆ ಎಂದರು.
ಲೋಕಸಭಾ ಚುನಾವಣೆ ನಂತರ ಈ ದೇಶದಲ್ಲಿ ಎನಾಗುತ್ತದೆ ಯಾರಿಗೆ ಗೊತ್ತು ಎಂದ ಯತ್ನಾಳ್, ಬಿಜೆಪಿಯಲ್ಲಿ ಏನು ಆಗುತ್ತದೆಯೋ ಗೊತ್ತಿಲ್ಲ, ಆದರೆ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ನೆಲಕಚ್ಚಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಬರುತ್ತವೆ, ಆವಾಗ ಏನು ಬೇಕಾದರೂ ಈ ದೇಶದಲ್ಲಿ ಬದಲಾವಣೆ ಆಗಬಹುದು, ಕರ್ನಾಟಕದಲ್ಲೂ ಬದಲಾವಣೆ ಆಗಬಹುದು ಎಂದರು.ಕರ್ನಾಟಕದಲ್ಲಿ ಅಜೀತ್ ಪವಾರ್ ಈಗಾಗಲೇ ಹುಟ್ಟಿದ್ದಾರೆ, ತೊಟ್ಟಲಲ್ಲಿ ಹಾಕಿದ್ದೆವೆ ಅವರ ಹೆಸರು ಹೇಳಲ್ಲ. ಯಾರು ಅಜೀತ್ ಪವಾರ್, ಯಾರು ಏಕನಾಥ ಸಿಂಧೆ ಎಂದು ನಾಮಕರಣ ಮಾಡಿದ್ದೇವೆ, ಒಬ್ಬರಿಗೆ ಅಜೀತ್ ಪವಾರ್, ಒಬ್ಬರಿಗೆ ಏಕನಾಥ ಸಿಂಧೆವೆಂದು ಹೆಸರು ಇಟ್ಟಿದ್ದೇವೆ, ಅವರು ಇಷ್ಟರಲ್ಲಿಯೇ ಪ್ರೌಢಾವಸ್ಥೆಗೆ ಬರುತ್ತಾರೆ ಎಂದು ವ್ಯಂಗ್ಯವಾಡಿದರು.