ಚಳ್ಳಕೆರೆ: ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ದೇವರೆಡ್ಡಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮಲ್ಲಸಮುದ್ರ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಬೇಲಿಗೆ ಬೆಂಕಿಬಿದ್ದು ಇಬ್ಬರು ಮಕ್ಕಳು, ತಾಯಿ ಸಜೀವ ದಹನವಾದ ಘಟನೆ ನಡೆದಿದೆ.
ಗ್ರಾಮದ ಲಾರಿಚಾಲಕ ತಿಪ್ಪೇಸ್ವಾಮಿಯ ಪತ್ನಿ ತಲಾರಿಮಾರಕ್ಕ(೨೪) ಆಕೆಯ ಮಕ್ಕಳಾದ ಟಿ.ನಯನ್(೪), ಹರ್ಷವರ್ಧನ್(೨) ಮೃತಪಟ್ಟವರಾಗಿದ್ದು, ಮನೆಯ ಪಕ್ಕದ ಕಣದ ಬೇಲಿಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ, ಮಾರಕ್ಕನೇ ಕಣದ ಬೇಲಿಗೆ ಬೆಂಕಿ ಹಚ್ಚಿ ತನ್ನ ಇಬ್ಬರೂ ಮಕ್ಕಳನ್ನು ಬೆಂಕಿಗೆ ತಳ್ಳಿ ತಾನು ಸಹ ಬೆಂಕಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೌಟುಂಬಿಕ ಸಮಸ್ಯೆ ಇದಕ್ಕೆ ಕಾರಣ ಎನ್ನಲಾಗಿದೆ. ಮಾರಕ್ಕ ವಾಸವಿದ್ದ ಕೆಲವೇ ಅಡಿಗಳ ದೂರದಲ್ಲಿ ಈ ಘಟನೆ ನಡೆದಿದೆ. ಪತಿ, ಲಾರಿ ಚಾಲಕ ತಿಪ್ಪೇಸ್ವಾಮಿ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಬಂದುನೋಡುವಷ್ಟರಲ್ಲಿ ಮೂವರು ದಹನವಾಗಿರುವುದು ಕಂಡುಬಂದಿದೆ. ಉಪವಿಭಾಗದ ಡಿವೈಎಸ್ಪಿ ಟಿ.ಬಿ.ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಳಕು ಪಿಎಸ್‌ಐ ಅಶ್ವಿನಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.