ಹೆಣ್ಣು ಹುಟ್ಟಿದರೆ ಮೂಗು ಮುರಿಯೋರು ಇನ್ನೂ ಇದ್ದಾರೆ

KannadaprabhaNewsNetwork | Published : Mar 20, 2024 1:17 AM

ಸಾರಾಂಶ

ಇಂದು ಗಂಡು-ಹೆಣ್ಣು ಸಮಾನರು ಎಂದುಕೊಂಡಿದ್ದೇವೆ. ಆದರೆ, ವಾಸ್ತವದಲ್ಲಿ ಹೆಣ್ಣುಮಗುವಿನ ಜನನ ಆಗಿದೆ ಎಂದ ಕೂಡಲೇ ಮೂಗು ಮುರಿಯುವವರು ಇನ್ನೂ ಇದ್ದಾರೆ. ಇಂಥ ಮನಸ್ಥಿತಿ ದೂರವಾಗಾಗಲೇ ನಿಜವಾಗಿಯೂ ಹೆಣ್ಣಿಗೆ ಸಮಾನತೆ ಸಿಗುತ್ತದೆ ಎಂದು ಆನವಟ್ಟಿಯ ಸರ್ಕಾರಿ ಆಸ್ಪತ್ರೆ ಪ್ರಸೂತಿತಜ್ಞೆ ಸುಪ್ರಿಯಾ ಆನವಟ್ಟಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಆನವಟ್ಟಿ

ಇಂದು ಗಂಡು-ಹೆಣ್ಣು ಸಮಾನರು ಎಂದುಕೊಂಡಿದ್ದೇವೆ. ಆದರೆ, ವಾಸ್ತವದಲ್ಲಿ ಹೆಣ್ಣುಮಗುವಿನ ಜನನ ಆಗಿದೆ ಎಂದ ಕೂಡಲೇ ಮೂಗು ಮುರಿಯುವವರು ಇನ್ನೂ ಇದ್ದಾರೆ. ಇಂಥ ಮನಸ್ಥಿತಿ ದೂರವಾಗಾಗಲೇ ನಿಜವಾಗಿಯೂ ಹೆಣ್ಣಿಗೆ ಸಮಾನತೆ ಸಿಗುತ್ತದೆ ಎಂದು ಆನವಟ್ಟಿಯ ಸರ್ಕಾರಿ ಆಸ್ಪತ್ರೆ ಪ್ರಸೂತಿತಜ್ಞೆ ಸುಪ್ರಿಯಾ ಅಭಿಪ್ರಾಯಿಸಿದರು.

ಆನವಟ್ಟಿಯ ವೀರಶೈವ ಸಮುದಾಯ ಭವನದಲ್ಲಿ ಮಂಗಳವಾರ ತಾಲೂಕು ಹಾಗೂ ಜಿಲ್ಲಾ ವೀರಶೈವ ಮಹಿಳಾ ಘಟಕದ ಆಶ್ರಯದ ಮಹಿಳಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರದ ಸಾಧಕಿಯರಿಗೆ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಹೆಣ್ಣುಮಕ್ಕಳಿಗೆ ಮದುವೆ ಮಾಡಿದರೇ ಮುಗಿಯಿತು ಎಂಬ ತಾತ್ಸರದ ಭಾವನೆ ಬಿಟ್ಟು, ಅವಳಿಗೆ ಉನ್ನತ ಶಿಕ್ಷಣ ಕಲಿಸಬೇಕು. ಆಸಕ್ತಿ ಇರುವ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಕೆಲವರು 18 ವಯಸ್ಸು ಆಗುವುದರೊಳಗೆ ಮದುವೆ ಮಾಡುತ್ತಾರೆ. ಸಮಾಜ ಅರಿತುಕೊಳ್ಳುವ ಮೊದಲೇ ಸಂಸಾರ ನೌಕೆಗೆ ಹೆಣ್ಣುಮಕ್ಕಳನ್ನು ನೂಕಿದರೇ ಹೇಗೆ ಜೀವನ ನಡೆಸುತ್ತಾರೆ. ಪೋಷಕರು ಮಗಳ ಮನಸ್ಥಿತಿಯನ್ನು ಅರಿಯುವ ಜೊತೆಗೆ ಕಾನೂನನ್ನು ಪರಿಪಾಲಿಸಬೇಕು ಎಂದರು.

ಕವಿಯತ್ರಿ ರೇಣುಕಮ್ಮ ಗೌಳಿ ಅವರು 12ನೇ ಶತಮಾನದಿಂದ ಇಂದಿನವರೆಗೂ ವಿವಿಧ ರೂಪದಲ್ಲಿ ಹೆಣ್ಣಿನ ಮಹತ್ವ ಕುರಿತು ಉಪನ್ಯಾಸ ಹಾಗೂ ಕವನಗಳನ್ನು ಹೇಳಿದರು.

ಜಡೆ ಮಠದ ಡಾ. ಮಹಾಂತ ಸ್ವಾಮೀಜಿ ಹಾಗೂ ಜಡೆ ಹಿರೇಮಠದ ಘನಬಸವ ಅಮರೇಶ್ವರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ಹೆರಿಗೆಗಾಗಿ, ಗರ್ಭಿಣಿಯರು ದೂರದ ತಾಲೂಕುಗಳಿಗೆ ಹೋಗಬೇಕಾಗಿತ್ತು. ಅದನ್ನು ತಪ್ಪಿಸಿ ಆನವಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಜೇರಿನ್ ವ್ಯವಸ್ಥೆ ಕಲ್ಪಿಸಿಕೊಂಡು, ತಿಂಗಳಿಗೆ ಅಂದಾಜು 25 ಹೆರಿಗೆ ಮಾಡಿಸುವ ಮೂಲಕ ಗ್ರಾಮೀಣ ಮಹಿಳೆಯರಿಗೆ ವರವಾಗಿರುವ ಪ್ರಸೂತಿ ತಜ್ಞೆ ಸುಪ್ರಿಯಾ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, ಹೆಡ್ ನರ್ಸ್ ಸುನೀತಾ ಡಿಸೋಜಾ, ಗಣಿತ ಶಿಕ್ಷಕಿ ರೇಷ್ಮಾ ಕಿಣಿ, ಪೌರಕಾರ್ಮಿಕ ಮಹಿಳೆ ನಾಗಮ್ಮ ಅವರನ್ನು ಗೌರವಿಸಲಾಯಿತು.

ತಾಲೂಕು ಸಂಘದ ಅಧ್ಯಕ್ಷೆ ಮಮತಾ ಎಂ. ಪಾಟೀಲ್, ಉಪಾಧ್ಯಕ್ಷರಾದ ಕವಿತಾ, ಮಾಲಾ, ರೇಖಾ, ಜಿಲ್ಲಾ ಘಟಕದ ನಿರ್ದೇಶಕರಾದ ಸುಧಾ ಕುಬಸದ್, ಸುಮತಾ, ವಿಜಯಕುಮಾರಿ, ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ಕಾರ್ಯದರ್ಶಿಗಳಾದ ಚಂದ್ರಕಲಾ, ಸವಿತಾ, ಖಜಾಂಚಿಗಳಾದ ರೇಖಾ ಪಾಟೀಲ್, ಸದಸ್ಯರಾದ ರಾಜೇಶ್ವರಿ, ನೇತ್ರಾ, ಗೀತಾ, ಸುನೀತಾ, ಸವಿತಾ ಮುಖಂಡರಾದ ಗೀತಾ ಮಲ್ಲಿಕಾರ್ಜುನ್, ಡಾ. ಸಾವಿತ್ರಿ, ಲೋಲಾಕ್ಷಮ್ಮ, ಬಸಣ್ಣ ಭಾರಂಗಿ, ಚೌಟಿ ಚಂದ್ರಶೇಖರ್ ಪಾಟೀಲ್, ರವಿಶಂಕರ್ ಗೌಡ ಇದ್ದರು.

- - --19ಎಎನ್‌ಟಿ1ಇಪಿ:

ಆನವಟ್ಟಿ ವೀರಶೈವ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕಿಯರನ್ನು ಸನ್ಮಾನಿಸಲಾಯಿತು.

Share this article