ಕನ್ನಡಪ್ರಭ ವಾರ್ತೆ ಮಂಡ್ಯರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ಒಂದು ವರ್ಷದಲ್ಲಿ ದೇಶದ ಬಹುತೇಕ ರಾಜ್ಯಗಳ ಮಕ್ಕಳು ವಿನೂತನ ರೀತಿಯ ಶಿಕ್ಷಣ ಕಲಿಕೆಯಲ್ಲಿ ತೊಡಗಿದ್ದರೆ, ರಾಜ್ಯದ ಮಕ್ಕಳಿಗೆ ಕಾಂಗ್ರೆಸ್ ಸರ್ಕಾರ ೧೩ ವರ್ಷದ ಹಳೆಯ ಪಠ್ಯಪುಸ್ತಕಗಳನ್ನೇ ಕಲಿಯುವಂತೆ ಮಾಡಿ ಅವರ ಶೈಕ್ಷಣಿಕ ಭವಿಷ್ಯವನ್ನೇ ಹಾಳುಮಾಡುತ್ತಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ, ಹಂಪಿ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಪ್ರೊ.ಜಿ.ಸಿ.ರಾಜಣ್ಣ ತಿಳಿಸಿದ್ದಾರೆ.
ಅಧಿಕಾರಕ್ಕೆ ಬಂದ ತಕ್ಷಣವೇ ರಾಜಕೀಯ ಅಹಂಕಾರದ ಒತ್ತಡಕ್ಕೆ ಒಳಪಟ್ಟು ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣದಲ್ಲಿ ಆಗುವ ವ್ಯತಿರಿಕ್ತ ಪರಿಣಾಮ ಯೋಚಿಸದೆ ತರಾತುರಿಯಲ್ಲಿ ಪಠ್ಯ ಪರಿಷ್ಕರಣೆ ನಡೆಸಿತು. ಪಠ್ಯಗಳನ್ನು ಬದಲಾಯಿಸಿರುವುದಕ್ಕೆ ಸ್ಪಷ್ಟತೆಯನ್ನೂ ಸರ್ಕಾರ ನೀಡಿಲ್ಲ. ರಾಜಕೀಯ ಪಕ್ಷ ಯಾವುದೇ ಆಗಿರಲಿ ಬದಲಾವಣೆಯನ್ನು ಕಂಡ ಪಠ್ಯಗಳನ್ನು ಬದಲಾಯಿಸುವುದರ ಹಿನ್ನಲೆ ಹಾಗೂ ಕಾರಣವನ್ನು ನೀಡುವ ಜವಾಬ್ದಾರಿ ಸಂವಿಧಾನಿಕವಾಗಿ ರಚಿತಗೊಂಡ ಸರ್ಕಾರದ ಕರ್ತವ್ಯ ಎಂದಿದ್ದಾರೆ.
ಕೇವಲ ೯ ತಿಂಗಳಲ್ಲಿ ಅಂತಹದೇ ಮತ್ತೊಂದು ಪ್ರಯತ್ನ ಸರ್ಕಾರ ನಡೆಸಿದೆ. ಆಯ್ದ ಕೆಲವು ಎಡಪಂಥೀಯ ವಿಚಾರಧಾರೆಯ ಸದಸ್ಯರ ನಿಲುವನ್ನೇ ಸಾರ್ವಜನಿಕವಾಗಿ ಪ್ರಕಟಿಸಿ ಚರ್ಚಿಸದೇ ಶಾಲೆಗಳಲ್ಲಿ ಅಳವಡಿಸಿ, ನಂತರ ಅದು ಟೀಕೆಗೆ ಒಳಪಟ್ಟ ನಂತರ ಹಿಂಪಡೆಯುವುದೇಕೆ. ಮುದ್ರಣ ಹಾಗೂ ಇನ್ನಿತರ ಸಮಿತಿಯ ಕಾರ್ಯದ ಖರ್ಚನ್ನು ಕಳೆದ ವರ್ಷವೇ ಭರಿಸಿರುವ ಸರ್ಕಾರ, ಅಧಿಕಾರವಿದೆ ಎಂಬ ಕಾರಣಕ್ಕೆ ತಾವೇ ಮಾಡಿಸಿದ ಕೆಲಸಕ್ಕೆ ಮತ್ತೊಮ್ಮೆ ಖರ್ಚು ಮಾಡಲು ಹೊರಟಿರುವುದು ದುಂದುವೆಚ್ಚವಲ್ಲವೇ ಎಂದು ಪ್ರಶ್ನಿಸಿದ್ದಾರೆ.ಈಗ ಮಕ್ಕಳ ಕೈಯಲ್ಲಿರುವ ಪಠ್ಯ ಪುಸ್ತಕಗಳು ೧೩ ವರ್ಷ ಹಳೆಯದ್ದಾಗಿವೆ. ಪ್ರಸ್ತುತ ಶೈಕ್ಷಣಿಕ ಬೆಳವಣಿಗೆಗೆ ಅನುಗುಣವಾಗಿ ಸಿದ್ಧಗೊಂಡಿರುವ ನೂತನ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಎನ್‌ಸಿಎಫ್ ೨೦೨೩ರ ಬದಲಿಗೆ ಎನ್‌ಸಿಎಫ್ ೨೦೦೫ರ ಹಿನ್ನೆಲೆಯಲ್ಲಿಯೇ ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತಿರುವ ಔಚಿತ್ಯವಾದರೂ ಏನು. ದೇಶದ ಅಭಿವೃದ್ಧಿ ದೃಷ್ಟಿಯಿಂದ ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಿದ್ಧಪಡಿಸುವ ಬದಲು ರಾಜ್ಯ ಸರ್ಕಾರಿ ಪಠ್ಯಕ್ರಮ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿರುವ ಈ ರಾಜ್ಯ ಸರ್ಕಾರ ಶಿಕ್ಷಣವನ್ನೂ ರಿವರ್ಸ್‌ಗೇರ್‌ನಲ್ಲಿ ಕೊಂಡೊಯ್ಯುತ್ತಿದೆ ಎಂದು ದೂರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ಇಂದಿನ ಸರ್ಕಾರ ಕರ್ನಾಟಕದಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ಕೇವಲ ಶೈಕ್ಷಣಿಕ ಅಭ್ಯಾಸವಲ್ಲ, ಸತ್ಯ, ಏಕತೆ ಮತ್ತು ಪ್ರಜಾಪ್ರಭುತ್ವದ ಮೇಲಿನ ಉದ್ದೇಶಪೂರ್ವಕ ದಾಳಿ ಎನ್ನುವ ಯೋಚನೆಯನ್ನು ಬದಿಗಿಟ್ಟು ಶಿಕ್ಷಣದ ಪಾವಿತ್ರ್ಯತೆ ಮತ್ತು ನಮ್ಮ ರಾಷ್ಟ್ರದ ಸಮಗ್ರತೆಯನ್ನು ಕಾಪಾಡಲಿ ಎನ್ನುವುದು ನಮ್ಮ ಆಶಯ ಎಂದು ಹೇಳಿದ್ದಾರೆ.