ತಾಯಿ ಇಲ್ಲದ ಕೊರಗು ನೀಗಿಸಿದ್ದ ಅಮ್ಮ ಚನ್ನಮ್ಮ; ಸಿಎಸ್‌ಪಿ ಕಣ್ಣೀರು

KannadaprabhaNewsNetwork |  
Published : Jul 20, 2026, 12:15 AM IST
(ಸಿ.ಎಸ್.ಪುಟ್ಟರಾಜು- ಅವರ ಹೆಸರಿನಲ್ಲೇ ಫೋಟೋ ಇದೆ) | Kannada Prabha

ಸಾರಾಂಶ

ನಾನು ಸಣ್ಣ ವಯಸ್ಸಿನ ಹುಡುಗನಾಗಿದ್ದಾಗಲೇ ನನ್ನ ತಾಯಿ ತೀರಿ ಹೋದರು. ನನ್ನಲ್ಲಿ ತಾಯಿ ಇಲ್ಲದ ಕೊರಗು ನೀಗಿಸಿದ್ದವರು ಚನ್ನಮ್ಮನವರು ಎಂದು ಭಾವುಕರಾದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು.

ಕನ್ನಡಪ್ರಭ ವಾರ್ತೆ ಮಂಡ್ಯ

ನಾನು ಸಣ್ಣ ವಯಸ್ಸಿನ ಹುಡುಗನಾಗಿದ್ದಾಗಲೇ ನನ್ನ ತಾಯಿ ತೀರಿ ಹೋದರು. ನನ್ನಲ್ಲಿ ತಾಯಿ ಇಲ್ಲದ ಕೊರಗು ನೀಗಿಸಿದ್ದವರು ಚನ್ನಮ್ಮನವರು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭಾವುಕರಾಗಿ ಹೇಳಿದ್ದಾರೆ.

ತಾಯಿ ಪ್ರೀತಿ, ವಾತ್ಸಲ್ಯ ಎನ್ನುವ ಮಾತುಗಳು ಬಂದಾಗ ನನ್ನ ಮನಸ್ಸಿನ ಮುಂದೆ ಚನ್ನಮ್ಮ ಅಮ್ಮನವರ ಚಿತ್ರವೇ ತೆರೆದುಕೊಳ್ಳುತ್ತದೆ. ಎಚ್.ಡಿ.ದೇವೇಗೌಡರನ್ನು ನಾನು ಅಪ್ಪಾಜಿ ಎಂದೇ ಕರೆಯುತ್ತೇನೆ. ಅದೇ ರೀತಿ ಚೆನ್ನಮ್ಮ ಅವರನ್ನು ನಾನು ಅಮ್ಮಾ ಎಂದೇ ಕರೆಯುತ್ತಿದ್ದೆ. ಸ್ವಂತ ಮಗನ ರೀತಿಯಲ್ಲಿ ನನ್ನನ್ನು ನೋಡುತ್ತಿದ್ದರು. ನನ್ನ ಕಂಡ ಕೂಡಲೇ ಮಕ್ಕಳ ರೀತಿಯಲ್ಲೇ ಕಷ್ಟ, ಸುಖಗಳನ್ನು ವಿಚಾರಿಸುತ್ತಿದ್ದರು. ಈಗ ಅವರಿಲ್ಲ ಎನ್ನುವುದನ್ನು ನನ್ನಿಂದ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಕ್ಷಾತ್ ನನ್ನ ಸ್ವಂತ ತಾಯಿಯೇ ತೀರಿಹೋಗಿರುವ ನೋವು ನನ್ನನ್ನು ಕಾಡುತ್ತಿದೆ ಎಂದು ತಿಳಿಸಿದ್ದಾರೆ.

ದೇವೇಗೌಡರ ರಾಜಕೀಯದ ಯಶಸ್ವಿಯ ಹಾದಿಯಲ್ಲಿ ಚನ್ನಮ್ಮ ಅಮ್ಮನವರ ಪಾತ್ರ ಬಹಳ ದೊಡ್ಡದು. ಅಷ್ಟೇ ಅಲ್ಲ, ಮಕ್ಕಳು, ಮೊಮ್ಮಕ್ಕಳ ರಾಜಕೀಯ ಯಶಸ್ವಿಗಾಗಿ ಅವರು ನಿತ್ಯವೂ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಬರೀ ಮಕ್ಕಳು, ಮೊಮ್ಮಕ್ಕಳು ಅಷ್ಟೇ ಅಲ್ಲ. ನನ್ನಂತಹ ಅಸಂಖ್ಯಾತ ಮಾನಸ ಪುತ್ರರನ್ನು ಅವರು ಸಲಹುತಿದ್ದರು. ನನ್ನ ಪಾಲಿಗಂತೂ ಅವರು ಪ್ರೀತಿಯ ಅಮ್ಮನಾಗಿದ್ದರು. ರೇವಣ್ಣ, ಕುಮಾರಣ್ಣ ಬೇರೆ ಅಲ್ಲ, ನಾನು ಬೇರೆ ಅಲ್ಲ ಎಂಬ ಭಾವನೆಯಿಂದ ಅವರು ನೋಡುತ್ತಿದ್ದರು ಎಂದಿದ್ದಾರೆ.

ದೇವೇಗೌಡ ಅಪ್ಪಾಜಿ ಅವರ ಮನೆಗೆ ಭೇಟಿ ನೀಡಿದಾಗಲೆಲ್ಲಾ ನನ್ನನ್ನು ನೋಡಿ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಮನೆಗೆ ಮಗ ಬಂದ ಎಂಬ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಈಗ ಅವರಿಲ್ಲದ ಮನೆಯನ್ನು ನೆನಪು ಮಾಡಿಕೊಂಡರೆ ದುಖಃ ಉಮ್ಮಳಿಸಿ ಬರುತ್ತದೆ. ಅವರನ್ನು ಕಳೆದುಕೊಂಡ ನಾನು ಈಗ ನಿಜವಾಗಿ ಅನಾಥನಾಗಿದ್ದೇನೆ ಎಂಬ ಭಾವನೆ ಕಾಡುತ್ತಿದೆ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಜಿಟಲ್ ಯುಗದಲ್ಲಿ ರೋಚಕತೆ ಬೇಕಿದೆಯೇ ಹೊರತು ಸತ್ಯವಲ್ಲ: ವೈ.ಎಸ್.ವಿ.ದತ್ತ
ಶೀಘ್ರ ರೇಲ್ವೆ ಸಚಿವರ ಭೇಟಿ ಮಾಡುವೆ: ಕೋಟಾ ಶ್ರೀನಿವಾಸ ಪೂಜಾರಿ