ಮೂರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಆತ್ಮಹತ್ಯೆ

KannadaprabhaNewsNetwork |  
Published : Jun 19, 2025, 11:49 PM IST
ಕುರುಗೋಡು 01 02 03 | Kannada Prabha

ಸಾರಾಂಶ

ತನ್ನ ಮೂವರು ಹೆಣ್ಣುಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಧುಮುಕಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದಮ್ಮೂರು ಗ್ರಾಮದ ಜಮೀನೊಂದರಲ್ಲಿ ಮಂಗಳವಾರ ಜರುಗಿದ್ದು, ಬುಧವಾರ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಕುರುಗೋಡು

ತನ್ನ ಮೂವರು ಹೆಣ್ಣುಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಧುಮುಕಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದಮ್ಮೂರು ಗ್ರಾಮದ ಜಮೀನೊಂದರಲ್ಲಿ ಮಂಗಳವಾರ ಜರುಗಿದ್ದು, ಬುಧವಾರ ಬೆಳಕಿಗೆ ಬಂದಿದೆ.

ತಾಯಿ ಸಿದ್ದವ್ವ ಅಲಿಯಾಸ್ ಲಕ್ಷ್ಮಿ (೨೯) ಮಕ್ಕಳಾದ ಅಭಿಜ್ಞಾನ (೭) ಅವನಿ (೫) ಮತ್ತು ಆರಾಧ್ಯ (೩) ಮೃತರು.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹಸೂರ್ ಚಂಪಾ ಗ್ರಾಮದ ಸಂಚಾರಿ ಕುರಿಗಾಹಿ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ದಮ್ಮೂರು ಗ್ರಾಮದ ಜಮೀನಿನಲ್ಲಿ ಕುರಿಗಳೊಂದಿಗೆ ಹಲವು ದಿನಗಳಿಂದ ಬೀಡುಬಿಟ್ಟಿದ್ದರು.

ಮಂಗಳವಾರ ಬೆಳಗ್ಗೆ ತಾಯಿ ಮತ್ತು ಮೂವರು ಮಕ್ಕಳು ಕುರಿಗಳನ್ನು ಬಿಟ್ಟು ಕಾಣೆಯಾಗಿದ್ದರು. ಕುಟುಂಬದ ಸದಸ್ಯರು ಸಂಜೆಯವರೆಗೆ ಎಲ್ಲಕಡೆ ಹುಡುಕಿದ್ದಾರೆ. ಸಂಜೆ ಜಮೀನಿನಲ್ಲಿದ್ದ ಕೃಷಿ ಹೊಂಡದ ಬಳಿ ಹೋಗಿ ನೋಡಿದಾಗ ಮೃತದೇಹಗಳು ಪತ್ತೆಯಾಗಿವೆ.

ಕುರಿ ಗುಂಪಿನ ಹತ್ತಿರವಿದ್ದ ಮೃತಳ ಹಿರಿಯ ಮಗ ಅಭಿಷೇಕ್ (೯) ಬದುಕುಳಿದಿದ್ದಾನೆ.

ಬೆಳಗಾವಿ ಜಿಲ್ಲೆಯ ಹೊಸೂರ್ ಗ್ರಾಮದ ಸಿದ್ದವ್ವ ಜತೆ ಮಹಾರಾಷ್ಟ್ರದ ಚಂಪ ಹಸೂರ್ ಗ್ರಾಮದ ಸಂಜಯ್ ೧೦ ವರ್ಷಗಳ ಹಿಂದೆ ವಿವಾಹವಾಗಿದ್ದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ನವೀನ್ ಕುಮಾರ್, ಸಿಪಿಐ ವಿಶ್ವನಾಥ ಹಿರೇಗೌಡರ್ ಮತ್ತು ಪಿಎಸ್ಐ ಸುಪ್ರಿತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗಂಡನ ಕಿರುಕುಳ ಆತ್ಮಹತ್ಯೆಗೆ ಕಾರಣ ಎಂದು ಮೃತಳ ತಾಯಿ ರೇಣುಕಾ ದೂರು ನೀಡಿದ್ದು, ಗಂಡ ಸಂಜಯ್ (೩೨) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳ ಮುಖನಾದ್ರ ನೋಡಿ ಬದುಕಬೇಕಿತ್ತು

ನಿಮ್ಮ ಮಗಳು ಬ್ಯಾಡ ಅಂದಿದ್ರೆ ನಾವಾ ಕರಕೊಂಡು ಹೋಗಿ ಸಾಕ್ತಿದ್ವಿ. ದೈಹಿಕ, ಮಾನಸಿಕ ಹಿಂಸೆ ಕೊಟ್ಟು ಸಾಯಂಗ ಮಾಡ್ಯಾನ. ಮಕ್ಕಳ ಮುಖನಾದ್ರು ನೋಡಿ ತಾಳ್ಮೆ ತಗೋಬೇಕಿತ್ತು. ಅವರನ್ನೂ ಕರಕೊಂಡಿ ಹೋಗಿ ಸತ್ತಾಳ. ಈ ಸಾಯೋ ವಯಸ್ಸಿನಾಗ ನಮಗೆ ದೇವರು ಇಂಥ ನೋವು ತರಬಾರದಿತ್ತು ಎಂದು ಮೃತದೇಹಗಳ ಮುಂದೆ ಕುಳಿತ ಕುಟುಂಬದ ಯಜಮಾನರ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಮೃತಳ ತಾಯಿ ರೇಣುಕಾ ತನ್ನ ಮಗಳ ಮತ್ತು ಮೊಮ್ಮಕ್ಕಳ ಸಾವಿಗೆ ಅಳಿಯನ ದೈಹಿಕ ಮತ್ತು ಮಾನಸಿಕ ಕಿರುಕುಳ ಕಾರಣ ಎಂದು ದೂರು ನೀಡಿದ್ದಾರೆ. ಆರೋಪಿತ ಸಂಜಯ್‌ನನ್ನು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಸಿಪಿಐ ವಿಶ್ವನಾಥ ಹಿರೇಗೌಡರ್ ತಿಳಿಸಿದ್ದಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''