ತಿಪಟೂರಿನಲ್ಲಿ ಗಾರ್ಮೆಂಟ್ ಬಸ್ ಡಿಕ್ಕಿಯಾಗಿ ತಾಯಿ, ಮಗಳು ಸಾವು

KannadaprabhaNewsNetwork | Published : Sep 10, 2024 1:40 AM

ಸಾರಾಂಶ

ತಿಪಟೂರು ತಾಲೂಕಿನ ರಾಮಶೆಟ್ಟಿಹಳ್ಳಿ ಗ್ರಾಮದ ಬಳಿ ಎನ್.ಎಚ್.೨೦೬ರ ಬೈಪಾಸ್‌ನಲ್ಲಿ ಸೋಮವಾರ ಖಾಸಗಿ ಬಟ್ಟೆ ಕಾರ್ಖಾನೆಯ ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ರಾಮಶೆಟ್ಟಿಹಳ್ಳಿ ಗ್ರಾಮದ ಬಳಿ ಎನ್.ಎಚ್.೨೦೬ರ ಬೈಪಾಸ್‌ನಲ್ಲಿ ಖಾಸಗಿ ಬಟ್ಟೆ ಕಾರ್ಖಾನೆಯ ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟರೆ ಮತ್ತೋರ್ವ ಪಾದಚಾರಿಗೆ ತೀವ್ರ ಗಾಯಗಳಾಗಿರುವ ಘಟನೆ ಸೋಮವಾರ ನಡೆದಿದೆ. ರಾಮಶೆಟ್ಟಿಹಳ್ಳಿ ಗ್ರಾಮದ ಕಮಲಮ್ಮ (42), ವೀಣಾ (16) ಮೃತಪಟ್ಟ ದುರ್ದೈವಿಗಳು. ತಾಯಿ ಕಮಲಮ್ಮ ತನ್ನ ಮಗಳನ್ನು ಹಳೇಪಾಳ್ಯ ಸರ್ಕಾರಿ ಪ್ರೌಢಶಾಲೆಗೆ (10ನೇ ತರಗತಿ) ಬಿಡಲು ಹೋಗುವ ಸಂದರ್ಭದಲ್ಲಿ ಬೈಪಾಸ್ ರಸ್ತೆ ದಾಟುವಾಗ ಈ ಅವಘಡ ಸಂಭವಿಸಿದೆ. ಇವರ ಜೊತೆಯಲ್ಲೇ ಮತ್ತೋರ್ವ ಪಾದಚಾರಿ ಮುದ್ದಯ್ಯ (50) ಎಂಬುವವರು ಇದೇ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಇದೇ ಬಸ್ ಇವರಿಗೂ ಡಿಕ್ಕಿ ಹೊಡೆದಿದ್ದು ಇವರ ಕಾಲು ಹಾಗೂ ತಲೆಗೂ ಸಹ ತೀವ್ರ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯಲಾಗಿದೆ. ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ತಾಯಿ ಮಗಳ ಸಾವಿನಿಂದ ಆಕ್ರೋಶಗೊಂಡ ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅವೈಜ್ಞಾನಿಕ ರಸ್ತೆ ನಿರ್ಮಿಸಿರುವ ಹೈವೇ ಅಧಿಕಾರಿಗಳು ಬರುವವರೆಗೂ ಶವಗಳನ್ನು ಎತ್ತಲು ಬಿಡುವುದಿಲ್ಲ ಎಂದು ನೂರಾರು ಜನರು ಸ್ಥಳದಲ್ಲಿ ಪೊಲೀಸರ ಜೊತೆ ವಾಗ್ವಾದ, ಪ್ರತಿಭಟನೆ ನಡೆಸಿ ಪಟ್ಟುಹಿಡಿದರು. ಸದಾ ಕಾಲ ಈ ರಸ್ತೆಯಲ್ಲಿ ಒಂದಲ್ಲೊಂದು ಅಪಘಾತಗಳು ಸಂಭವಿಸುತ್ತಿದ್ದು, ಈಗಾಗಲೇ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಕೂಡಲೆ ಇಲ್ಲಿ ವೈಜ್ಞಾನಿಕವಾಗಿ ಅಂಡರ್ ಪಾಸ್ ನಿರ್ಮಿಸಿಕೊಡಬೇಕೆಂದು ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಉಪವಿಭಾಗಾಧಿಕಾರಿ ಸಪ್ತಶ್ರೀ, ಡಿವೈಎಸ್‌ಪಿ ವಿನಾಯಕ ಶೆಟಗೇರಿ, ತಹಸೀಲ್ದಾರ್ ಪವನ್‌ಕುಮಾರ್, ಗ್ರಾಮಾಂತರ ಠಾಣೆಯ ವೃತ್ತನಿರೀಕ್ಷಕ ಸಿದ್ದರಾಮೇಶ್ವರ ಮತ್ತಿತರರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article