ಕನ್ನಡಪ್ರಭ ವಾರ್ತೆ ಬೀದರ್‌ಹತ್ತು ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಜನ ಸಾಮಾನ್ಯರ ಅಭ್ಯುದಯಕ್ಕೆ ಏನೇನು ಮಾಡಿದೆ ಎಂದು ಪ್ರಶ್ನಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಬಡವರ ಕಣ್ಣೀರು ಒರೆಸುವ ಮಾತೃಹೃದಯ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಹೇಳಿದರು.
ಈ ಹಿಂದೆ ರಾಜ್ಯದಲ್ಲಿ ನಾಲ್ಕು ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ಬಡವರಿಗಾಗಿ, ಬಡ ಮಹಿಳೆಯರಿಗಾಗಿ, ವಿದ್ಯಾವಂತ ಯುವಕರಿಗಾಗಿ ಯಾಕೆ ಕಾರ್ಯಕ್ರಮ ರೂಪಿಸಲಿಲ್ಲ ಎಂದು ಪ್ರಶ್ನಿಸಿ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಐದೂ ಭರವಸೆಗಳನ್ನು 10 ತಿಂಗಳ ಅವಧಿಯಲ್ಲಿಯೇ ಜಾರಿಗೊಳಿಸಲಾಗಿದೆ. ಬಡತನ ರೇಖೆ ಕೆಳಗಿನ ಜನರನ್ನು ಆರ್ಥಿಕವಾಗಿ ಸಶಕ್ತಗೊಳಿಸುವುದು ಗ್ಯಾರಂಟಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕೋವಿಡ್ ಕಾಲದಲ್ಲಿ ಬಿಜೆಪಿ ಸಂಸದ ಭಗವಂತ ಖೂಬಾ ಮೌನದ ಮೊರೆ ಹೋಗಿದ್ದರು. ಆದರೆ, ಸಾಗರ ಖಂಡ್ರೆ ಜನರ ಕಷ್ಟ ಕಡಿಮೆ ಮಾಡಲು ಶ್ರಮಿಸಿದ್ದರು. ಆಹಾರದ ಕಿಟ್ ವಿತರಿಸಿದ್ದರು. ಜನರನ್ನು ಭೇಟಿಯಾಗಿ ಧೈರ್ಯ ತುಂಬಿದ್ದರು. ಔಷಧೋಪಾಚಾರದ ವ್ಯವಸ್ಥೆ ಮಾಡಿದ್ದರು. ಜನರ ಮಧ್ಯೆ ಇದ್ದು ಕೆಲಸ ಮಾಡುವ ಸಾಗರ ಖಂಡ್ರೆ ಬೇಕೋ, ಜನ ಕಣ್ಣೀರು ಹಾಕುತ್ತಿದ್ದಾಗ ಮೌನದ ಮೊರೆ ಹೋಗುವ ಭಗವಂತ ಖೂಬಾ ಬೇಕೋ ಎನ್ನುವುದನ್ನು ನೀವೇ ತೀರ್ಮಾನಿಸಿ ಎಂದು ಕರೆ ನೀಡಿದರು.ಪೌರಾಡಳಿತ ಸಚಿವ ರಹೀಮ್ ಖಾನ್, ಬುಡಾ ಅದ್ಯಕ್ಷ ಬಸವರಾಜ ಜಾಬಶೆಟ್ಟಿ, ಬಡಾವಣೆಯ ಪ್ರಮುಖರಾದ ವಿಜಯಕುಮಾರ ಪಾಟೀಲ್, ಮಡಿವಾಳಪ್ಪ ಮಂಗಲಗಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಪಕ್ಷದ ಪದಾಧಿಕಾರಿಗಳು, ಬಡಾವಣೆಯ ಹಿರಿಯರು ಉಪಸ್ಥಿತರಿದ್ದರು.