ಅನೈತಿಕತೆಗೆ ಅಡ್ಡಿಯಾದ ಮಗಳ ಕೊಂದ ತಾಯಿ

KannadaprabhaNewsNetwork |  
Published : Jun 07, 2026, 03:45 AM ISTUpdated : Jun 07, 2026, 12:01 PM IST
Crime news

ಸಾರಾಂಶ

ತನ್ನ ಸ್ವೇಚ್ಛಾಚಾರದ ಬದುಕಿಗೆ ಅಡ್ಡಿಯಾಗಿದ್ದಾಳೆಂದು ಐದು ವರ್ಷದ ಮಗಳನ್ನು ಪ್ರಿಯಕರನ  ಜತೆ ಕೊಂದು ತಾಯಿ ಪರಾರಿಯಾಗಿರುವ ಘಟನೆ ಮೂರು ತಿಂಗಳ ಬಳಿಕ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.

  ಬೆಂಗಳೂರು :  ತನ್ನ ಸ್ವೇಚ್ಛಾಚಾರದ ಬದುಕಿಗೆ ಅಡ್ಡಿಯಾಗಿದ್ದಾಳೆಂದು ಐದು ವರ್ಷದ ಮಗಳನ್ನು ಪ್ರಿಯಕರನ ಜತೆ ಕೊಂದು ತಾಯಿ ಪರಾರಿಯಾಗಿರುವ ಘಟನೆ ಮೂರು ತಿಂಗಳ ಬಳಿಕ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.

ಚಿಕ್ಕ ಬನಹಳ್ಳಿ ನಿವಾಸಿ ವೆನ್ನಲಾ (5) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ತಾಯಿಯ ಪ್ರಿಯಕರ ಮೋಹನ್‌ ಬಂಧನವಾಗಿದ್ದು, ತಪ್ಪಿಸಿಕೊಂಡಿರುವ ತಾಯಿ ಪ್ರಿಯಾಂಕ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ತನ್ನ ಮಗುವಿನ ಸಾವಿನ ಬಗ್ಗೆ ಶಂಕೆಗೊಂಡ ತಂದೆ ಪ್ರವೀಣ್, ಮಗಳ ಮರಣೋತ್ತರ ಪರೀಕ್ಷಾ ವರದಿಯನ್ನು ವಿದೇಶದಲ್ಲಿ ವೈದ್ಯೆ ಆಗಿರುವ ಸೋದರಿಗೆ ಕಳುಹಿಸಿ ಪರಾರ್ಮಶಿಸಿದರು. ಮಗಳ ಸಾವು ಸಹಜವಲ್ಲ ಎಂದು ಸೋದರಿ ಅಭಿಪ್ರಾಯಪಟ್ಟ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಗುಟ್ಟೂರಿನಲ್ಲಿ ಪ್ರವೀಣ್ ಖಾಸಗಿ ಶಾಲೆ ನಡೆಸುತ್ತಿದ್ದು, ಅಲ್ಲಿಯೇ ನೆಲೆಸಿದ್ದಾರೆ. 2007ರಲ್ಲಿ ಹೊಸಕೋಟೆ ತಾಲೂಕಿನ ಪ್ರಿಯಾಂಕ ಜತೆ ಪ್ರವೀಣ್ ವಿವಾಹವಾಗಿದ್ದು, ಈ ದಂಪತಿಗೆ ಇಶಿಕಾ ಹಾಗೂ ವೆನ್ನೆಲಾ ಎಂಬ ಹೆಣ್ಣು ಮಕ್ಕಳಿದ್ದಾರೆ. ಕೆಲ ವರ್ಷಗಳಿಂದ ಅವರ ದಾಂಪತ್ಯ ಜೀವನ ಜಗಳವಾಗಿ ಹಳಿ ತಪ್ಪಿತ್ತು.

ಕಾಲೇಜು ಸಹಪಾಠಿ ಜತೆ ಸಂಪರ್ಕ:

ಹೊಸಕೋಟೆಯಿಂದ ಶಿಡ್ಲಘಟ್ಟಕ್ಕೆ ಹೋಗುವ ರಸ್ತೆಯಲ್ಲಿ ಪ್ರಿಯಾಂಕ ಕುಟುಂಬದವರಿಗೆ ಸೇರಿದ ಕೋಟ್ಯಾಂತರ ರು. ಮೌಲ್ಯದ 50 ಎಕರೆ ಭೂಮಿ ಇದೆ. ಈ ಜಮೀನು ವ್ಯಾಜ್ಯ ವಿಚಾರವಾಗಿ ಕಳೆದ ವರ್ಷ ನವೆಂಬರ್‌ನಲ್ಲಿ ಆಕೆ ಬೆಂಗಳೂರಿಗೆ ಹೋಗಿದ್ದಳು. ಆಗ ರಿಯಲ್ ಎಸ್ಟೇಟ್ ಏಜೆಂಟ್ ಮೂಲಕ ಪ್ರಿಯಾಂಕಳಿಗೆ ಆಕೆಯ ಕಾಲೇಜು ಸಹಪಾಠಿ ಮೋಹನ್ ಸಂಪರ್ಕ ಬೆಳದಿದೆ. ಹಳೇ ಸ್ನೇಹಿತ ಸಿಕ್ಕಿದ ಬಳಿಕ ತನ್ನ ಪತ್ನಿ ವರ್ತನೆಯಲ್ಲಿ ಬದಲಾವಣೆ ಆಯಿತು ಎಂದು ಪ್ರವೀಣ್ ದೂರಿನಲ್ಲಿ ಆರೋಪಿಸಿದ್ದಾರೆ.

ಬಿರಿಯಾನಿ ತಿಂದು ಸಾವು ಎಂದಳು:

ನನ್ನ ಜತೆ ಹಿರಿಯ ಮಗಳು, ಕಿರಿಯ ಮಗಳು ಪತ್ನಿ ಜತೆ ವಾಸವಾಗಿದ್ದರು. ಮಾ.25ರಂದು ನನಗೆ ಪ್ರಿಯಾಂಕ ಸೋದರ ರಾಘವೇಂದ್ರ ಕರೆ ಮಾಡಿ, ತಕ್ಷಣವೇ ವೈದೇಹಿ ಆಸ್ಪತ್ರೆಗೆ ಬನ್ನಿ ಎಂದರು. ಆಸ್ಪತ್ರೆಗೆ ತೆರಳಿದಾಗ ನನ್ನ ಮಗಳ ಸಾವಿನ ವಿಚಾರ ಗೊತ್ತಾಯಿತು. ಮಾ.24 ರಂದು ರಾತ್ರಿ ಬಿರಿಯಾನಿ ತರಿಸಿ ತಿನ್ನಿಸಿದ್ದೇ. ಬೆಳಗ್ಗೆ ನೋಡಿದರೆ ಮಗಳು ಮೃತಪಟ್ಟಿದ್ದಾಳೆ ಎಂದು ಪ್ರಿಯಾಂಕ ಹೇಳಿದಳು. ಇದಕ್ಕೂ ಮುನ್ನ ಐಸ್ಕ್ರಿಮ್‌ ತಿನ್ನಿಸಿ ಕಾರಿನಲ್ಲಿ ಎಸಿ ಹಾಕಿ ಆಕೆಯನ್ನು ಮಲಗಿಸಿದ್ದೆ. ಅಲ್ಲಿಂದ ಮರಳಿದ ಬಂದಾಗಲು ಮಗಳು ಎಚ್ಚರವಾಗಿರಲಿಲ್ಲ. ಬೆಳಿಗ್ಗೆ ನೋಡಿದಾಗ ಮಗಳು ಸಾವನ್ನಪ್ಪಿದ್ದಳು ಎಂದು ಸೋದರನಿಗೆ ಪ್ರಿಯಾಂಕ ಹೇಳಿದ್ದರು. ಹೀಗೆ ಗೊಂದಲಕಾರಿ ಹೇಳಿಕೆಯನ್ನು ಆಕೆ ನೀಡಿದ್ದು ಶಂಕೆ ಮೂಡಿತ್ತು.

ಮರಣೋತ್ತರ ವರದಿ ಹೇಳಿ ಸತ್ಯ

ಮಗಳ ಮೃತದೇಹ ಪರೀಕ್ಷಾ ವರದಿಯನ್ನು ಇಂಗ್ಲೆಂಡ್‌ನಲ್ಲಿ ಮಕ್ಕಳ ತಜ್ಞೆಯಾಗಿರುವ ನನ್ನ ಅಕ್ಕ ಡಾ.ಪೂರ್ಣಿಮಾ ಪಾಂಡೆಗೆ ಕಳುಹಿಸಿದೆ. ಆ ವರದಿ ಪರಾರ್ಮಶಿಸಿದ ಸೋದರಿ, ಮಗುವಿಗೆ ಏನೋ ಮಾಡಿದ್ದು, ಠಾಣೆಗೆ ಹೋಗಿ ದೂರು ನೀಡುವಂತೆ ಸಲಹೆ ನೀಡಿದರು. ಅದರಂತೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಮೋಹನ್ ಜತೆಗಿನ ಮೋಜಿನ ಜೀವನಕ್ಕೆ ಮತ್ತು ಖಾಸಗಿ ಕ್ಷಣಗಳಿಗೆ ಅಡ್ಡಿಯಾಗಿದ್ದಾಳೆಂದು ನನ್ನ ಮಗಳ ಹೊಟ್ಟೆಗೆ ಒದ್ದು, ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಪ್ರವೀಣ್ ಆರೋಪಿಸಿದ್ದಾರೆ.

ವಿವಾಹಿತ ಗೆಳೆಯನ ಜೊತೆ ಮತ್ತೆ ಲವ್‌

ಹೊಸಕೋಟೆಯಲ್ಲಿ ಕಾಲೇಜು ಓದುವಾಗ ಪ್ರಿಯಾಂಕಳಿಗೆ ಮೋಹನ್ ಸ್ನೇಹವಾಗಿತ್ತು. ಕಾಲೇಜು ಮುಗಿದ ಬಳಿಕ ಪ್ರವೀಣ್ ಜತೆ ಆಕೆಯ ವಿವಾಹವಾಯಿತು. ಇತ್ತ ಮೋಹನ್‌ ಸಹ ಮದುವೆಯಾಗಿದ್ದು, ಆತನಿಗೂ ಮೂವರು ಮಕ್ಕಳಿದ್ದಾರೆ. ತಮ್ಮ ಮೊದಲ ಸಂಗಾತಿಗಳ ಜತೆ ವಿವಾಹ ವಿಚ್ಛೇದನ ಪಡೆಯದೆ ಇಬ್ಬರು ಲಿವಿಂಗ್ ಟುಗೆದರ್‌ನಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮಗು ಕಪ್ಪು ಎಂದು ದೂಷಣೆ

ತನ್ನ ಮಗಳು ಕಪ್ಪಾಗಿದ್ದಾಳೆ ಎಂದು ಪ್ರಿಯಾಂಕಳಿಗೆ ಅಸಮಾಧಾನವಿತ್ತು. ಇದೇ ಕಾರಣಕ್ಕೆ ಮಗಳನ್ನು ಆಕೆ ಕೊಂದಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಪ್ರವೀಣ್ ನೀಡಿರುವ ದೂರಿನಲ್ಲಿ ಕಪ್ಪು ಬಣ್ಣದ ಪ್ರಸ್ತಾಪವಿಲ್ಲ. ಆರೋಪಿ ಬಂಧನ ಬಳಿಕ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತನೊಂದಿಗೆ ಯಾವಾಗಲೂ ಮೊಬೈಲ್‌ನಲ್ಲಿ ಪ್ರಿಯಾಂಕ ಹೆಚ್ಚಾಗಿ ಮಾತನಾಡುತ್ತಿದ್ದಳು. ತನ್ನ ಸ್ನೇಹಿತನನ್ನು ಭೇಟಿಯಾಗಿ ಬಂದ ದಿನವೇ ‘ಈ ದಿನ ನನಗೆ ತುಂಬಾ ಖುಷಿಯಾಗಿದೆ, ನನ್ನ ಹಳೇ ಫ್ರೆಂಡ್ ಹಾಗೂ ನನ್ನ ಹಳೇ ಲವರ್ ಮೋಹನ್ ಸಿಕ್ಕಿದ್ದ. ಈಗ ಆತ ಸಾವಿರ ಕೋಟಿ ಆಸ್ತಿಯನ್ನು ಹೊಂದಿದ್ದಾನೆ. ನಮ್ಮ ಜಮೀನು ಕೆಲಸವನ್ನು ಅವನೇ ನೋಡಿಕೊಳ್ಳುತ್ತಿದ್ದಾನೆ’ ಎಂದಿದ್ದಳು. ಕಳೆದ ಡಿ.27ರಂದು ಏಕಾಂಗಿ ಪ್ರವಾಸ ಹೋಗಿ ಬರುವುದಾಗಿ ಸುಳ್ಳು ಹೇಳಿ ಮೋಹನ್ ಜತೆ ಕಾಶಿಗೆ ಹೋಗಿದ್ದಳು ಎಂದು ತಿಳಿಸಿದ್ದಾನೆ.

ದುಬೈನಲ್ಲಿ ಗಿಫ್ಟ್‌, ಕಾಶಿಯಲ್ಲಿ ಹನಿಮೂನ್‌:

2026 ಹೊಸ ವರ್ಷಾಚರಣೆ ನಿಮಿತ್ತ ದುಬೈಗೆ ಪ್ರಿಯಾಂಕ ಸೋದರ ರಾಘವೇಂದ್ರ ಹೋದಾಗಲೂ ಸಹ ಮೋಹನ್ ಜತೆ ದುಬೈಗೆ ಆಕೆ ಹೋಗಿದ್ದಳು. ಅಲ್ಲಿ ಆಕೆಗೆ ಐಫೋನ್, ಚಿನ್ನದ ಸರ ಸೇರಿ ದುಬಾರಿ ಗಿಪ್ಟ್ ಅನ್ನು ಆತ ಕೊಟ್ಟಿದ್ದ. ಇದಕ್ಕೆ ಆಕ್ಷೇಪಿಸಿ ಸೋದರಿ ಜತೆ ರಾಘವೇಂದ್ರ ಗಲಾಟೆ ಮಾಡಿದ್ದರು. ದುಬೈನಿಂದ ಮರಳಿದ ಬಳಿಕ ಮೋಹನ್ ಸ್ನೇಹದ ಬಗ್ಗೆ ಪತ್ನಿಯನ್ನು ಪ್ರಶ್ನಿಸಿದೆ. ಅದಕ್ಕೆ ‘ಹೌದು ನಾವಿಬ್ಬರು ಕಾಶಿಯಲ್ಲಿ ಮದುವೆಯಾಗಿದ್ದು, ಅಲ್ಲೇ ಹನಿಮೂನ್ ಸಹ ಮುಗಿಸಿದ್ದೇವೆ ಎಂದು ಉತ್ತರಿಸಿದ್ದಳು. ಇದಾದ ಬಳಿಕ ವಿಚ್ಛೇದನಕ್ಕೆ ಪ್ರಿಯಾಂಕ ನಿರ್ಧರಿಸಿದ್ದಳು. ಡಿವೋರ್ಸ ಪೇಪರಿಗೆ ಸಹಿ ಹಾಕು ಇಲ್ಲದಿದ್ದರೇ ನಿನಗೆ ಇಬ್ಬರು ಮಕ್ಕಳನ್ನು ನೋಡಲು ಬಿಡುವುದಿಲ್ಲ ಹಾಗೂ ನಿನ್ನನ್ನು ಸುಮ್ಮನೇ ಮೋಹನ್ ಬಿಡುವುದಿಲ್ಲ ಎಂದು ಬೆದರಿಸಿ ಸಹಿ ಪಡೆದಳು. ಅಂದಿನಿಂದ ಪ್ರತ್ಯೇಕವಾಗಿ ಸೀಗೇಹಳ್ಳಿಯಲ್ಲಿರುವ ಸೈಕಾನ್ ಮೈಥಿ ವಿಲ್ಲಾದಲ್ಲಿ ಮೋಹನ್ ಜತೆ ಪ್ರಿಯಾಂಕ ವಾಸವಾಗಿದ್ದಳು ಎಂದು ಪ್ರವೀಣ್ ಆರೋಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಎನ್‌ಸಿಸಿ ಕೆಡೆಟ್‌ಗಳಿಗೆ ತಿಂಗಳ ಕಾಲ ನಗರದಲ್ಲಿ ತರಬೇತಿ
ರಸ್ತೆ, ಸೇತುವೆಗಳ ದುರಸ್ತಿಗೆ ₹131 ಕೋಟಿ ಅನುದಾನ