ಪ್ರಹ್ಲಾರೆಡ್ಡಿ ಮಾದಿನಾಳ
ಕನಕಗಿರಿಯ ಪದವಿ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜುಗಳ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಕೊಪ್ಪಳ ತಾಲೂಕಿನ ಹಿಟ್ನಾಳದ ಸ.ಪ್ರ.ದ. ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿ ನಾಗವೇಣಿ ದೇವಣ್ಣ ದ್ಯಾಮನೂರ ಇಂತಹದೊಂದು ಸಾಧನೆ ಮಾಡಿ, ಗಮನ ಸೆಳೆದಿದ್ದಾರೆ.
ವಿವಾಹವಾದ ಬಳಿಕ ಮನೆಯಲ್ಲಿ ಗೃಹಣಿ ಅಥವಾ ಕೆಲಸಕ್ಕೆ ಹೋಗುವುದು ಸಾಮಾನ್ಯ. ಆದರೆ ಈ ವಿದ್ಯಾರ್ಥಿನಿ ಮದುವೆಯಾಗಿ ಮೂರು ವರ್ಷವಾದರೂ ಓದುವ ಹಂಬಲದಿಂದ ಹಿಟ್ನಾಳ್ ಸರ್ಕಾರಿ ಪದವಿ ಕಾಲೇಜಿಗೆ ಕಳೆದ ಎರಡು ವರ್ಷಗಳ ಹಿಂದೆ ದಾಖಲಾಗಿದ್ದರು. ಪ್ರಾಥಮಿಕ ಹಂತದಲ್ಲಿರುವಾಗಲೇ ರನ್ನಿಂಗ್ ರೇಸ್‌ನಲ್ಲಿ ಆಸಕ್ತಿ ಹೊಂದಿದ್ದ ನಾಗವೇಣಿ ಮೂರು ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. ಪ್ರೌಢಶಾಲೆ ಹಂತದಲ್ಲಿ ಕೊರೋನಾ ಹಿನ್ನೆಲೆ ಸ್ಪರ್ಧೆಗಳಿಂದ ಅನಿವಾರ್ಯವಾಗಿ ವಂಚಿತರಾದರು. ಪಿಯುಸಿ ಹಂತದಲ್ಲಿಯೂ ಎರಡು ಬಾರಿಯೂ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದ್ದರು. ಈಗ ಕೊಪ್ಪಳ ವಿಶ್ವ ವಿದ್ಯಾಲಯ ಮಟ್ಟದ ಗುಡ್ಡಗಾಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಸೈ ಎನಿಸಿದ್ದಾರೆ.ಅ. 29ರ ರಾತ್ರಿಯೇ ಕನಕಗಿರಿಗೆ ತನ್ನ ಒಂದು ವರ್ಷದ ಮಗುವಿನ ಜತೆ ಬಂದಿದ್ದ ನಾಗವೇಣಿ, ಕ್ರೀಡಾಕೂಟದಲ್ಲಿ ಭಾಗಿಯಾದ ಎಲ್ಲರೂ ಪ್ರೋತ್ಸಾಹಿಸುತ್ತಿದ್ದರು. ಅ. 30ರಂದು ಬೆಳ್ಳಂಬೆಳಗ್ಗೆ ಶುರುವಾದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು, ಪ್ರಥಮ ಸ್ಥಾನ ಪಡೆದರು. ಕಾಲೇಜು ಆವರಣದಲ್ಲಿ ಅಂತರ್ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದಲೂ ಅಭಿನಂದನೆಗಳ ಮಹಾಪೂರವೇ ಹರಿಯಿತು. ಸ್ಪರ್ಧೆ ಮುಕ್ತಾಯದ ನಂತರ ನಡೆದ ಕಾರ್ಯಕ್ರಮದಲ್ಲಿ ಪಾರಿತೋಷಕ ಹಾಗೂ ಪ್ರಶಸ್ತಿಪತ್ರ ವಿತರಿಸಿ, ಗೌರವಿಸಲಾಯಿತು.
ಹಿಟ್ನಾಳದ ವಿದ್ಯಾರ್ಥಿನಿ ನಾಗವೇಣಿ ಒಂದು ವರ್ಷದ ಮಗುವಿನ ತಾಯಿಯಾದರೂ ಕ್ರೀಡೆಯಲ್ಲಿ ಸಾಧಿಸಬೇಕೆನ್ನುವ ಹಂಬಲದಿಂದ ಕನಕಗಿರಿಗೆ ಬಂದಿದ್ದಳು. ಸತತ ಪ್ರಯತ್ನ, ಪರಿಶ್ರಮದಿಂದ ನಾಗವೇಣಿ ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನಕ್ಕೆ ಭಾಜವಾದಳು. ಈ ಸಾಧನೆ ವಿಶ್ವವಿದ್ಯಾಲಯವೇ ಪ್ರಶಂಸೆ ವ್ಯಕ್ತಪಡಿಸಿದ್ದು, ಹೊಸ ದಾಖಲೆಯಾಗಿದೆ ಎಂದು ಕನಕಗಿರಿ ಡಿಗ್ರಿ ಕಾಲೇಜು ಪ್ರಾಂಶುಪಾಲ ಬಜರಂಗಬಲಿ ಹೇಳಿದರು.