ಕನ್ನಡಪ್ರಭ ವಾರ್ತೆ ಮಾಲೂರು
ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಅಮೃತ. ಹೀಗಾಗಿ ಈ ಸ್ತನಪಾನಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಹಾಗೂ ತಾಯಂದಿರನ್ನು ಹಾಲುಣಿಸಲು ಪ್ರೇರೇಪಿಸಲು ವಿಶ್ವ ಸ್ತನಪಾನ ಸಪ್ತಾಹವನ್ನು ಪ್ರತಿ ವರ್ಷ ಆಗಸ್ಟ್ ೧ ರಿಂದ ಆಗಸ್ಟ್ ೭ರ ವರೆಗೆ ಆಚರಿಸಲಾಗುತ್ತದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ್ ಬಾಬು ಹೇಳಿದರು.ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಯಿಯ ಎದೆಹಾಲು ಅಮೃತಕ್ಕೆ ಸಮ. ಹುಟ್ಟಿದ ಮಗುವು ಆರೋಗ್ಯಯುತವಾಗಿ ಬೆಳೆಯಲು ತಾಯಿಯ ಎದೆಹಾಲು ಅತ್ಯಂತ ಅವಶ್ಯಕವಾಗಿದೆ. ಹುಟ್ಟಿದ ಮಗುವಿಗೆ ಎದೆ ಹಾಲು ಕುಡಿಸುವುದು ಕೂಡ ಸ್ವಾಭಾವಿಕ ಕ್ರಿಯೆಯಾಗಿದೆ. ಮಗುವಿನ ಬೆಳವಣಿಗೆಗೆ ಬೇಕಾಗುವ ಪೌಷ್ಟಿಕಾಂಶ ಮತ್ತು ಕಾರ್ಬೋಹೈಡ್ರೇಟ್‌ಗಳು ಎದೆ ಹಾಲಿನಲ್ಲಿ ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಶಿಶುಗಳಿಂದ ಹಿಡಿದು ಎರಡು ಮೂರು ವರ್ಷದ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸ್ತನಪಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ ಇಂದಿನ ಮಹಿಳೆಯರು ಕೆಲಸಕ್ಕೆ ಹೋಗುವುದರಿಂದ ಅಥವಾ ಸೌಂದರ್ಯವು ಮಾಸುತ್ತದೆ ಎನ್ನುವ ಕಾರಣದಿಂದಾಗಿ ಮಗುವಿಗೆ ಹಾಲುಣಿಸಲು ಹಿಂದೇಟು ಹಾಕುತ್ತಾರೆ. ಆದರೆ ಎದೆಹಾಲು ಉಣಿಸುವ ಪ್ರಕ್ರಿಯೆಯಿಂದ ತಾಯಿ ಹಾಗೂ ಮಗುವಿನ ಬಂಧವು ಹೆಚ್ಚಾಗುತ್ತದೆ. ಹೀಗಾಗಿ ಎದೆಹಾಲಿನ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ವಿಶ್ವ ಸ್ತನಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ ಎಂದರು.
೧೯೯೧ರಲ್ಲಿ ವರ್ಲ್ಡ್ ಅಲೈಯನ್ಸ್ ಫಾರ್ ಭ್ರೀಸ್ಟ್ ಫೀಡಿಕ್ಷನ್ ಅನ್ನು ರಚಿಸಲಾಯಿತು. ಆರಂಭದಲ್ಲಿ ವರ್ಷಕ್ಕೆ ಒಂದು ದಿನ ಸ್ತನಪಾನ ದಿನವನ್ನು ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಈ ವಿಷಯವು ಮಹತ್ವವಾಗಿರುವುದರಿಂದ ಒಂದು ವಾರಗಳ ಕಾಲ ಈ ಜಾಗೃತಿ ಕಾರ್ಯವನ್ನು ಆಚರಿಸಲು ನಿರ್ಧರಿಸಲಾಯಿತು. ಇದಕ್ಕೆ ವಿಶ್ವ ಸ್ತನಪಾನ ಸಪ್ತಾಹ ಎಂದು ಹೆಸರಿಡಲಾಯಿತು. ವಿಶ್ವ ಸ್ತನಪಾನ ಸಪ್ತಾಹವನ್ನು ಮೊದಲ ಬಾರಿಗೆ ೧೯೯೨ರಲ್ಲಿ ಆಯೋಜಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಆಗಸ್ಟ್ ೧ ರಿಂದ ಆಗಸ್ಟ್ ೭ರ ವರೆಗೆ ಒಂದು ವಾರಗಳ ತನಕ ವಿಶ್ವ ಸ್ತನಪಾನ ಸಪ್ತಾಹ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ ಎಂದು ತಿಳಿಸಿದರು.ಸ್ತ್ರೀ ರೋಗ ಮತ್ತು ಮಕ್ಕಳ ಪ್ರಸೂತಿ ವೈದ್ಯ ಡಾ.ಹರೀಶ್ ಮಾತನಾಡಿ, ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು ಮುಖ್ಯವಾಗಿರುವುದರಿಂದ ತಾಯಂದಿರ ಸ್ತನಪಾನದ ಪ್ರಾಮುಖ್ಯತೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರಪಂಚದಾದ್ಯಂತ ಮಹಿಳೆಯರಿಗೆ ತಮ್ಮ ಶಿಶುಗಳಿಗೆ ನಿರ್ದಿಷ್ಟ ಅವಧಿಯವರೆಗೆ ಹಾಲುಣಿಸಲು ಪ್ರೋತ್ಸಾಹಿಸುವ ಉದ್ದೇಶವನ್ನು ಈ ದಿನವೂ ಹೊಂದಿದೆ. ಅದಲ್ಲದೇ ಈ ಸಪ್ತಾಹದಲ್ಲಿ ತಾಯಿಯ ಎದೆಹಾಲಿನ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಮಗುವಿನ ಬೆಳವಣಿಗೆಗೆ ತಾಯಿಯ ಹಾಲು ಎಷ್ಟು ಮುಖ್ಯ ಎನ್ನುವ ಬಗ್ಗೆ ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮಗುವಿಗೆ ೬ ತಿಂಗಳ ಪೂರ್ಣವಾಗುವವರೆಗೂ ತಾಯಿಯ ಎದೆ ಹಾಲು ಬಿಟ್ಟು ಬೇರೆ ಯಾವ ಆಹಾರವನ್ನೂ ಮಗುವಿಗೆ ನೀಡಬಾರದು ೬ ತಿಂಗಳು ತುಂಬಿದ ನಂತರ ಪೂರಕ ಆಹಾರವನ್ನು ನೀಡಬೇಕು. ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಲಸಿಕೆ ಮತ್ತು ಚುಚ್ಚುಮದ್ದನ್ನು ಹಾಕಿಸಬೇಕು. ಮಗು ಹುಟ್ಟಿದ ೩೦ ನಿಮಿಷದ ಒಳಗೆ ತಾಯಿ ಎದೆ ಹಾಲನ್ನು ಉಣಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್, ಡಾ. ಸಂಗೀತಾ, ಪ್ರಭಾರಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸರಸ್ವತಮ್ಮ, ಆರ್‌ಕೆಎಸ್‌ಕೆ ಸಂಯೋಜಕಿ ಸುಮತಿ.ಎಂ, ಆರ್ ಸರಸ್ವತಮ್ಮ, ತಾಯಂದಿರು - ಗರ್ಭಿಣಿ ಮಹಿಳೆಯರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು. ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.