ಮಕ್ಕಳಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡುವ ತಾಯಿ : ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

KannadaprabhaNewsNetwork |  
Published : Mar 10, 2025, 01:32 AM ISTUpdated : Mar 10, 2025, 10:50 AM IST
ಕಾರ್ಯಕ್ರಮವನ್ನು ವಿಪ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಕ್ಕಳಿಗಾಗಿ ತಾಯಿಯು ಸರ್ವಸ್ವವನ್ನೇ ತ್ಯಾಗ ಮಾಡುತ್ತಾಳೆ. ಅದೇ ತ್ಯಾಗವನ್ನು ಇಳಿ ವಯಸ್ಸಿನಲ್ಲಿ ತಾಯಿಯ ಮೇಲೆ ಅಷ್ಟೇ ಕಾಳಜಿಯಿಂದ ಮಕ್ಕಳು ನೋಡಿಕೊಳ್ಳಬೇಕು ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹುಬ್ಬಳ್ಳಿ: ಮಕ್ಕಳಿಗಾಗಿ ತಾಯಿಯು ಸರ್ವಸ್ವವನ್ನೇ ತ್ಯಾಗ ಮಾಡುತ್ತಾಳೆ. ಅದೇ ತ್ಯಾಗವನ್ನು ಇಳಿ ವಯಸ್ಸಿನಲ್ಲಿ ತಾಯಿಯ ಮೇಲೆ ಅಷ್ಟೇ ಕಾಳಜಿಯಿಂದ ಮಕ್ಕಳು ನೋಡಿಕೊಳ್ಳಬೇಕು ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಅವರು ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅವ್ವ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಗುವಿಗೆ ಜೀವ ನೀಡಲು ತಾಯಿ ಸಾವು-ಬದುಕಿನ ನಡುವೆ ಹೋರಾಡುತ್ತಾಳೆ. ತಾಯಿ ದೇವರಾಗಬಹುದು. ಆದರೆ, ದೇವರು ತಾಯಿ ಆಗಲಾರ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನೆ, ಕೆಲಸಕ್ಕೆ ಸೀಮಿತವಾಗಿದ್ದೇವೆ. ಪ್ರೀತಿ, ಸ್ನೇಹ, ಆತ್ಮೀಯತೆ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಾಯಿ-ತಂದೆಯ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಅವರನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದರು.

ಎಲ್ಲವನ್ನೂ ಸಹಿಸಿಕೊಳ್ಳುವ ಭೂಮಿಯಂತೆ, ಎಲ್ಲೋ ಹುಟ್ಟಿ- ಹರಿದು ಎಲ್ಲರಿಗೂ ಒಳಿತು ಮಾಡುವ ನದಿಯಂತೆ ಮಹಿಳೆಯರೂ ಶ್ರೇಷ್ಠ ಎನಿಸಿದ್ದಾರೆ. ಅದಕ್ಕಾಗಿಯೇ ಭೂಮಿ, ನದಿಗಳನ್ನು ಹೆಣ್ಣಿನ ಹೆಸರಿನಿಂದ ಕರೆಯುತ್ತೇವೆ. ಮಹಿಳಾ ದಿನಾಚರಣೆ ಶ್ರೇಷ್ಠವಾದುದು ಎಂದರು.

ಈ ವೇಳೆ, ಶತಾಯುಷಿ ಯಲ್ಲಮ್ಮ ಗುರಪ್ಪ ಶಿರಕೋಳ, ಹಿಂದೂಸ್ಥಾನಿ ಸಂಗೀತ ಗಾಯಕಿ ಪೂರ್ಣಿಮಾ ಮುಕ್ಕುಂದಿ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಲಾಯಿತು.

ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ತಾಲೂಕು ಘಟಕದ ಅಧ್ಯಕ್ಷೆ ವಿದ್ಯಾ ವಂಟಮುರಿ, ಕೆ.ಎಸ್. ಕೌಜಲಗಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಸ್. ಹುದ್ದಾರ, ಹುಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮುರಿ, ಸುನೀಲ್ ಸೇರಿದಂತೆ ಹಲವರಿದ್ದರು.

ಬಳಿಕ ವಿವಿಧ ಸಂಘ- ಸಂಸ್ಥೆಗಳು, ಮಹಿಳಾ ಮಂಡಳಗಳು ಮತ್ತು ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು, ಶ್ರೀ ಲಕ್ಷ್ಮಣರಾವ್ ಪೈಕೋಟಿ ಲ್ಯಾಮಿಂಗ್ಟನ್ ಪ್ರಾಥಮಿಕ ಶಾಲೆ ಹಾಗೂ ಬಾಲಕಿಯರ ಪ್ರೌಢಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ