ಮಾತೃ ಭಾಷೆ ನಮಗೆಲ್ಲ ಅತ್ಯವಶ್ಯಕ: ಶಾಸಕ ಡಾ. ಮಂತರ್ ಗೌಡ

KannadaprabhaNewsNetwork |  
Published : Sep 25, 2024, 01:05 AM IST
ನೂತನ ಎಲ್‌ಕೆಜಿ ತರಗತಿ  ಕೊಠಡಿಗಳನ್ನು ಶಾಸಕ ಡಾ. ಮಂತರ್ ಗೌಡ  ಉದ್ಘಾಟನೆ | Kannada Prabha

ಸಾರಾಂಶ

ಎಲ್‌ಕೆಜಿ ನೂತನ ಕೊಠಡಿಗಳನ್ನು ಶಾಸಕ ಡಾ. ಮಂತರ್‌ ಗೌಡ ಉದ್ಘಾಟಿಸಿದರು .ತಾ. ಪಂ. ಮಾಜಿ ಅಧ್ಯಕ್ಷ ಎಸ್‌.ಎಂ. ಡಿಸಿಲ್ವ ಮಾತನಾಡಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನೇರುಗಳಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಂಕುರಂ ಹಿರಿಯ ವಿದಾರ್ಥಿಗಳ ಎಜುಕೇಷನ್ ಟ್ರಸ್ಟ್ ವತಿಯಿಂದ ಪ್ರಾರಂಭಿಸಲು ಉದ್ದೇಶಿಸಿರುವ ನೂತನ ಎಲ್‌ಕೆಜಿ ತರಗತಿ ನೂತನ ಕೊಠಡಿಗಳನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು, ಮಾತೃ ಭಾಷೆ ನಮಗೆಲ್ಲ ಅತ್ಯಾವಶ್ಯಕವಾದರೂ, ಬದುಕಿಗಾಗಿ ಆಂಗ್ಲಭಾಷೆ ಇಂದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾದ್ಯಮ ಶಾಲೆಗಳಿಗೆ ಸೇರಿಸಿ ಶಿಕ್ಷಣ ಕೊಡಿಸುತ್ತಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿಯೂ ಎಲ್ಲ ಸವಲತ್ತಿನೊಂದಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಪೋಷಕರು ಮತ್ತೊಮ್ಮೆ ಚಿಂತಿಸಿ, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಹೇಳಿದರು.

ಯಾವುದೇ ಗ್ರಾಮಗಳಲಿ ಸ್ಥಳೀಯರ ನೆರವಿಲ್ಲದೆ, ಸರ್ಕಾರಿ ಶಾಲೆಗಳು ಮುಂದುವರೆಯಲು ಸಾಧ್ಯವಿಲ್ಲ. ಶಾಲೆಯ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಉಳಿಸಲು ಲಕ್ಷಾಂತರ ರು. ಸಂಗ್ರಹಿಸಿ, ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣವನ್ನು ಸ್ಥಳೀಯರಿಗೆ ಕೊಡಲು ಮುಂದಾಗಿರುವುದು ಶ್ಲಾಘನೀಯ. ಮುಂದಿನ ಯೋಜನೆಗಳನ್ನು ರೂಪಿಸಿಕೊಂಡು ಶಿಕ್ಷಣ ಮುಂದುವರೆಸಿದಲ್ಲಿ ಮಾತ್ರ, ಅದರ ಪ್ರಯೋಜನವನ್ನು ಪಡೆಯಬಹುದು. ಶಿಕ್ಷಕರು ಬದಲಾದ ಪಠ್ಯದಂತೆಯೇ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮುಂದಿನ ದಿನಗಳಲಿ ಶಾಲೆಗೆ ಉಳಿಕೆ ಕೊಠಡಿ ನಿರ್ಮಾಣಕ್ಕೆ ಶಾಸಕರ ನಿಧಿ ಮತ್ತು ಯುಕೆಜಿ ತರಗತಿಗೆ ಬೇಕಾದ ಬೆಂಚು ಮತ್ತು ಡೆಸ್ಕ್ಗಳಿಗೆ ಸ್ವಂತ ಹಣವನ್ನು ನೀಡಲಾಗುವುದು ಎಂದು ಹೇಳಿದರು.

ತಾಪಂ ಮಾಜಿ ಅಧ್ಯಕ್ಷ ಎಸ್.ಎಂ.ಡಿಸಿಲ್ವ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಕಲಿಯಲು ಪಟ್ಟಣದತ್ತ ತೆರಳಿದ ಹಿನ್ನೆಲೆಯಲ್ಲಿ ಸಾಕಷ್ಟು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿ ನಮ್ಮ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ತರಗತಿ ಪ್ರಾರಂಭಿಸಲು ಚಿಂತನೆ ನಡೆಸಿ ಎಲ್‌ಕೆಜಿ ಪ್ರಾರಂಭಿಸಲಾಗಿದೆ. ಇದಕ್ಕಾಗಿ ಹಳೆಯ ವಿದ್ಯಾರ್ಥಿಗಳ ನೆರವಿನಿಂದ 15 ಲಕ್ಷ ರು.ದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಗ್ರಾಮೀಣ ಭಾಗವಾಗಿರುವುದರಿಂದ 4 ಲಕ್ಷ ರು. ವೆಚ್ಚದಲ್ಲಿ ಶಾಲಾ ಬಸ್ ಖರೀದಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮೂರಿನ ಶಾಲೆಯನ್ನು ಉಳಿಸಿ ಬೆಳೆಸಲು ಎಲ್ಲ ಹಳೆಯ ವಿದ್ಯಾರ್ಥಿಗಳೂ ಪಣತೊಟ್ಟಿದ್ದು, ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭ ದಾನಿಗಳಾದ ಮಾಜಿ ಸೈನಿಕ ಗಣೇಶ್, ಮುರಳೀಧರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರೋಹಿತ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಕುರಂ ಟ್ರಸ್ಟ್ ಅಧ್ಯಕ್ಷ ವೈ.ಪಿ. ಬೋಜೇಗೌಡ ವಹಿಸಿದ್ದರು.

ವೇದಿಕೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಕೆ. ವಿನೋದ್‌ಕುಮಾರ್, ಸದಸ್ಯ ಅಜತ್, ಗಿರೀಶ್ ಮಲ್ಲಪ್ಪ, ಬಿಇಓ ಭಾಗ್ಯಮ್ಮ, ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಎ.ಡಿ. ಪಾರ್ವತಿ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎಚ್.ಬಿ. ದಿಲೀಪ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ರೂಪಾ ಸತೀಶ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಸ್ತಿಲಾ ಡಿಸಿಲ್ವ ಇದ್ದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ