ಗದಗ: ತಾಯ್ತನ ಎನ್ನುವುದು ಹೆಣ್ಣಿನ ಜೀವನದ ಅತ್ಯಂತ ಮಹತ್ವದ ಘಟ್ಟ. ಗರ್ಭಾವಸ್ಥೆ ಹಾಗೂ ಮಗುವಿನ ಲಾಲನೆ-ಪಾಲನೆಯಲ್ಲಿ ಪೋಷಕರ ಪಾತ್ರ ಅತ್ಯಂತ ಹಿರಿದಾಗಿದ್ದು, ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುವುದು ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ ಎಂದು ಪ್ರಸೂತಿ ತಜ್ಞೆ ಡಾ. ಅಕ್ಷತಾ ಕವಳಿಕಾಯಿ ಹೇಳಿದರು.
ಕೇವಲ ಪ್ರಸೂತಿಯ ಸಮಯದಲ್ಲಿ ಮಾತ್ರ ಆಸ್ಪತ್ರೆಗೆ ತೆರಳುವುದು ಅತ್ಯಂತ ಅಪಾಯಕಾರಿ. ನಿರಂತರ ತಪಾಸಣೆಯಿಂದ ಗರ್ಭಿಣಿಯರಲ್ಲಿ ಕಂಡುಬರುವ ರಕ್ತಹೀನತೆ, ಕ್ಯಾಲ್ಸಿಯಂ ಕೊರತೆ ಹಾಗೂ ರಕ್ತದೊತ್ತಡದ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಗುಣಪಡಿಸಬಹುದು. ಗರ್ಭಿಣಿಯರು ನಿರಂತರ ದೈಹಿಕ ಚಟುವಟಿಕೆ, ವಾಯುವಿಹಾರ ಮಾಡುವುದರೊಂದಿಗೆ ಹಾಲು, ಹಣ್ಣು, ಮೊಳಕೆಕಾಳು, ಸೊಪ್ಪು ಹಾಗೂ ಹಸಿರು ತರಕಾರಿಗಳನ್ನೊಳಗೊಂಡ ಪೌಷ್ಟಿಕ ಆಹಾರ ಸೇವಿಸಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಆಕೆಗೆ ಆಹ್ಲಾದಕರ ಹಾಗೂ ಸಂತಸದ ವಾತಾವರಣ ನಿರ್ಮಿಸಿಕೊಡಬೇಕು ಎಂದು ಸಲಹೆ ನೀಡಿದರು.
ಶರಣತತ್ವ ಚಿಂತಕಿ ಗಿರಿಜಕ್ಕ ಧರ್ಮರಡ್ಡಿ ಮಾತನಾಡಿ, ಗರ್ಭಾವಸ್ಥೆಯು ಹೆಣ್ಣಿನಲ್ಲಿ ಸಹಜವಾಗಿಯೇ ವಾತ್ಸಲ್ಯ ಹಾಗೂ ಕಾಳಜಿಯನ್ನು ಮೂಡಿಸುತ್ತದೆ. ಮಗುವಿನ ಜನನದ ನಂತರ ಹಿರಿಯರ ಮತ್ತು ಅನುಭವಸ್ಥರ ಸೂಕ್ತ ಮಾರ್ಗದರ್ಶನ ಪಡೆದು ಮಗುವನ್ನು ಜತನದಿಂದ ಜೋಪಾನ ಮಾಡಬೇಕು ಎಂದರು.ಇದೇ ಸಂದರ್ಭದಲ್ಲಿ ಶರಣ ತತ್ವದ ಹಿನ್ನೆಲೆಯಲ್ಲಿ ಗರ್ಭಿಣಿಯರಾದ ಶಿಲ್ಪಾ ಬಡಿಗಣ್ಣವರ, ರಾಜೇಶ್ವರಿ ಶ್ರೀಗಣ್ಣವರ ಹಾಗೂ ಅಶ್ವಿನಿ ಚಳ್ಳಕೇರಿ ದಂಪತಿಗೆ ಸಾಮೂಹಿಕ ಸೀಮಂತ ನೆರವೇರಿಸಲಾಯಿತು. ವಾಣಿ ಗೋಧಿ ಹಾಗೂ ಸುಷ್ಮಾ ಬರಗುಂಡಿ ಕಾರ್ಯಕ್ರಮ ನಿರೂಪಿಸಿದರು. ಸಹನಾ ಆಲತಗಿ ವಚನ ಪ್ರಾರ್ಥನೆ ನೆರವೇರಿಸಿದರು. ಎಂ.ಬಿ. ಲಿಂಗಧಾಳ ಸ್ವಾಗತಿಸಿದರು. ಗೌರಕ್ಕ ಬಡಿಗಣ್ಣವರ ಶರಣು ಸಮರ್ಪಣೆ ಮಾಡಿದರು.