ಪೊರಕೆಯಿಂದ ಪೋರ್ಚುನರ್‌ವರೆಗೆ ಸೇಸಪ್ಪಣ್ಣನ ದುಡಿಮೆಯ ಪಯಣ!

KannadaprabhaNewsNetwork |  
Published : Aug 23, 2026, 02:45 AM IST
ರಸ್ತೆ | Kannada Prabha

ಸಾರಾಂಶ

ಬೆಳಗಿನ ಐದು ಗಂಟೆ. ಬಿಸಿರೋಡಿನ ರಸ್ತೆಗಳು ಇನ್ನೂ ನಿದ್ರೆಯಲ್ಲಿವೆ. ನಗರದ ಬಹುತೇಕ ಮಂದಿ ತಮ್ಮ ದಿನಚರಿಯನ್ನು ಆರಂಭಿಸುವ ಮುನ್ನವೇ ಸೇಸಪ್ಪಣ್ಣ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಕೈಯಲ್ಲಿ ಪೊರಕೆ. ಮುಂದೆ ನಗರದ ರಸ್ತೆ. ಮನಸ್ಸಿನಲ್ಲಿ ಒಂದೇ ಸಂಕಲ್ಪ - ವಹಿಸಿಕೊಂಡ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು.

ಮೌನೇಶ ವಿಶ್ವಕರ್ಮಬಂಟ್ವಾಳ: ಬೆಳಗಿನ ಐದು ಗಂಟೆ. ಬಿಸಿರೋಡಿನ ರಸ್ತೆಗಳು ಇನ್ನೂ ನಿದ್ರೆಯಲ್ಲಿವೆ. ನಗರದ ಬಹುತೇಕ ಮಂದಿ ತಮ್ಮ ದಿನಚರಿಯನ್ನು ಆರಂಭಿಸುವ ಮುನ್ನವೇ ಸೇಸಪ್ಪಣ್ಣ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಕೈಯಲ್ಲಿ ಪೊರಕೆ. ಮುಂದೆ ನಗರದ ರಸ್ತೆ. ಮನಸ್ಸಿನಲ್ಲಿ ಒಂದೇ ಸಂಕಲ್ಪ - ವಹಿಸಿಕೊಂಡ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು.ಆದರೆ ಈ ದೃಶ್ಯಕ್ಕೆ ಮತ್ತೊಂದು ವಿಶೇಷತೆಯೂ ಇದೆ. ಪೌರ ಕಾರ್ಮಿಕನಾಗಿ ನಗರದ ಸ್ವಚ್ಛತೆಗಾಗಿ ದುಡಿಯುವ ಸೇಸಪ್ಪಣ್ಣ, ಕೆಲಸಕ್ಕೆ ಆಗಮಿಸುವುದು ಪೋರ್ಚುನರ್ ಕಾರಿನಲ್ಲಿ!

ಇದು ಕಾರಿನ ಕಥೆಯಲ್ಲ. ಇದು ₹50 ದಿನಗೂಲಿಯಿಂದ ಆರಂಭವಾದ ಬದುಕು, ನಿರಂತರ ದುಡಿಮೆಯ ಮೂಲಕ ತನ್ನದೇ ಆದ ನೆಲೆಯನ್ನು ಕಂಡುಕೊಂಡ ಕಥೆ.₹50ರಿಂದ ಆರಂಭವಾದ ಪಯಣ: 1996ರಲ್ಲಿ ಕೇವಲ ₹50 ದಿನಗೂಲಿಗೆ ಕೆಲಸ ಆರಂಭಿಸಿದ ಸೇಸಪ್ಪ, ನಂತರ ಕಾಯಂ ನೌಕರರಾದರು. ಕೇವಲ ಮೂರನೇ ತರಗತಿಯ ವಿದ್ಯಾಭ್ಯಾಸ ಹೊಂದಿದ್ದರೂ, ಬದುಕಿನ ಪಾಠಗಳನ್ನು ಅನುಭವದಿಂದ ಕಲಿತರು.ಜೀವನದ ಒಂದು ಹಂತದಲ್ಲಿ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಂದ ಕುಡಿತದ ಚಟಕ್ಕೆ ಒಳಗಾಗಿದ್ದರು. ಆದರೆ ಅದನ್ನು ತಮ್ಮ ಬದುಕಿನ ಅಂತಿಮ ಅಧ್ಯಾಯವಾಗಲು ಅವರು ಬಿಡಲಿಲ್ಲ.2005ರ ಬಳಿಕ ಬದುಕನ್ನು ಬದಲಿಸಿಕೊಳ್ಳುವ ದೃಢ ನಿರ್ಧಾರ ಕೈಗೊಂಡರು. ಆಗ ಎಸ್‌ಐ ಆಗಿದ್ದ ಬೆಳ್ಳಿಯಪ್ಪ ಅವರ ಮಾತು ಅವರಿಗೆ ಪ್ರೇರಣೆಯಾಯಿತು. ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿ, ದುಡಿಮೆಯ ದಾರಿಯಲ್ಲಿ ಹೊಸ ಬದುಕು ಆರಂಭಿಸಿದರು. ಅಲ್ಲಿಂದ ಸೇಸಪ್ಪರ ಜೀವನದ ದಿಕ್ಕೇ ಬದಲಾಯಿತು.ನಗರ ಎಚ್ಚರಗೊಳ್ಳುವ ಮುನ್ನವೇ ಸೇಸಪ್ಪರ ಕೆಲಸ ಆರಂಭ: ಪ್ರತಿದಿನ ಬೆಳಗ್ಗೆ 5 ಗಂಟೆಗೆ ಬಿಸಿರೋಡಿಗೆ ಆಗಮಿಸುವ ಸೇಸಪ್ಪರು, ಮಧ್ಯಾಹ್ನ 12 ಗಂಟೆಯವರೆಗೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಾರೆ. ರಸ್ತೆ ಗುಡಿಸುವುದರಿಂದ ಹಿಡಿದು ಇಲಾಖೆಯ ವಿವಿಧ ಜವಾಬ್ದಾರಿಗಳವರೆಗೆ ಅವರಿಗೆ ವಹಿಸಿದ ಕೆಲಸವನ್ನು ಅಲಕ್ಷಿಸುವುದಿಲ್ಲ.ಅಗತ್ಯವಿದ್ದಾಗ ತ್ಯಾಜ್ಯ ವಿಲೇವಾರಿ ವಾಹನದ ಚಾಲಕರ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಕೆಲಸ ಯಾವುದು ಎನ್ನುವುದಕ್ಕಿಂತ, ಅದನ್ನು ಎಷ್ಟು ಪ್ರಾಮಾಣಿಕವಾಗಿ ಮಾಡುತ್ತೇವೆ ಎನ್ನುವುದೇ ಮುಖ್ಯ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸುತ್ತಿದ್ದಾರೆ.ಪೊರಕೆ ಹಿಡಿದ ಕೈಯಲ್ಲೇ ಬದುಕಿನ ಚಕ್ರ ತಿರುಗಿತು: ಸೇಸಪ್ಪರ ವಿಶೇಷತೆ ಪೌರ ಕಾರ್ಮಿಕರ ಕೆಲಸದಲ್ಲಷ್ಟೇ ಇಲ್ಲ. ಮಧ್ಯಾಹ್ನದ ಬಳಿಕ ಹೈನುಗಾರಿಕೆ ಹಾಗೂ ಕೂಲಿ ಕೆಲಸದಲ್ಲೂ ತೊಡಗಿಸಿಕೊಳ್ಳುತ್ತಾರೆ. ದುಡಿಯಲು ಸಮಯವಿಲ್ಲ ಎನ್ನುವುದಕ್ಕಿಂತ, ದುಡಿಯುವ ಅವಕಾಶವನ್ನು ಹುಡುಕಿಕೊಳ್ಳುತ್ತಾರೆ. ಹೀಗಾಗಿ ಒಂದು ಕಾಲದಲ್ಲಿ ₹50 ದಿನಗೂಲಿಯಿಂದ ಆರಂಭವಾದ ಜೀವನ ಇಂದು ಸ್ವಂತ ಪೋರ್ಚುನರ್ ಕಾರಿನಲ್ಲಿ ಕರ್ತವ್ಯಕ್ಕೆ ಬರುವ ಮಟ್ಟಿಗೆ ಬೆಳೆದಿದೆ.ದುಡಿಮೆಯ ಜತೆಗೆ ದೈವದ ಮೇಲಿನ ನಂಬಿಕೆ: ಸೇಸಪ್ಪರ ಬದುಕಿನಲ್ಲಿ ದುಡಿಮೆಯಷ್ಟೇ ಅಲ್ಲ, ದೈವದ ಮೇಲಿನ ನಂಬಿಕೆಯೂ ಪ್ರಮುಖ ಸ್ಥಾನ ಪಡೆದಿದೆ.

ಪರವ ಸಮುದಾಯಕ್ಕೆ ಸೇರಿದ ಅವರ ತಂದೆ ದೈವದ ನರ್ತಕರಾಗಿದ್ದರು. ತಂದೆಯಿಂದ ಬಂದ ದೈವಾರಾಧನೆಯ ಪರಂಪರೆ ಇಂದಿಗೂ ಕುಟುಂಬದಲ್ಲಿ ಮುಂದುವರಿದಿದೆ.

ವಿಶೇಷವೆಂದರೆ, ಸೇಸಪ್ಪ ರವರ ಮಗ ದೈವದ ಸೇವೆಯನ್ನು ಮುಂದುವರಿಸಿಕೊಂಡು ದೈವದ ನರ್ತನ ಮಾಡುತ್ತಿದ್ದಾರೆ. ಹೀಗಾಗಿ ಸೇಸಪ್ಪರ ಕುಟುಂಬದ ಬದುಕಿನಲ್ಲಿ ಒಂದೆಡೆ ನಗರದ ಸ್ವಚ್ಛತೆಗಾಗಿ ನಡೆಯುವ ಸೇವೆ ಇದ್ದರೆ, ಮತ್ತೊಂದೆಡೆ ನೆಲದ ಸಂಸ್ಕೃತಿ ಮತ್ತು ದೈವಾರಾಧನೆಯ ಪರಂಪರೆಯನ್ನು ಮುಂದುವರಿಸುವ ಸೇವೆಯೂ ಇದೆ. ಇದು ಅವರ ಬದುಕಿಗೆ ಮತ್ತೊಂದು ಆಯಾಮ ನೀಡಿದೆ.

ಒಮ್ಮೆ ಹಟ್ಟಿಯಿಂದ ದನವೊಂದು ಕಳವಾದಾಗ, ದೈವದ ಮೊರೆ ಹೋದ ಅವರು ಕೆಲಕಾಲದ ಬಳಿಕ ಆ ದನವನ್ನು ಕದ್ದ ವ್ಯಕ್ತಿಯೇ ಮನೆಗೆ ಬಂದು ತಪ್ಪೊಪ್ಪಿಕೊಂಡ ಘಟನೆಯನ್ನು ಇಂದಿಗೂ ಸೇಸಪ್ಪಣ್ಣ ನೆನಪಿಸಿಕೊಳ್ಳುತ್ತಾರೆ.

ಕಷ್ಟದ ದಿನಗಳು ಕಲಿಸಿದ ಪಾಠ: ಸೇಸಪ್ಪರ ಬದುಕಿನಲ್ಲಿ ಮರೆಯಲಾಗದ ನೋವುಗಳೂ ಇವೆ. ತಂದೆ ನಿಧನರಾದಾಗ ಅಂತ್ಯಸಂಸ್ಕಾರ ನಡೆಸಲು ಕೈಯಲ್ಲಿ ಹಣವಿರಲಿಲ್ಲ. ನೆರವಿಗೆ ಜನರೂ ಇರಲಿಲ್ಲ. ಕೊನೆಗೆ ತಂದೆಯ ಮೃತದೇಹವನ್ನು ತಾವೇ ಹೊತ್ತು ನೇತ್ರಾವತಿ ನದಿ ತೀರಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಅವರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.

ಆ ನೋವಿನ ದಿನವೇ ಅವರಿಗೆ ಬದುಕಿನ ಮತ್ತೊಂದು ಸತ್ಯವನ್ನು ಕಲಿಸಿತು. ಕಷ್ಟದ ಸಮಯದಲ್ಲಿ ನಮ್ಮನ್ನು ನಿಲ್ಲಿಸುವುದು ನಮ್ಮೊಳಗಿನ ಧೈರ್ಯ ಮತ್ತು ಆತ್ಮವಿಶ್ವಾಸ.ಪೌರ ಕಾರ್ಮಿಕ ಎಂಬ ಹೆಮ್ಮೆ ಇರಲಿ: ಸೇಸಪ್ಪಣ್ಣನ ಕಥೆಯಲ್ಲಿ ವಿಶೇಷವಾಗಿ ಗಮನಿಸಬೇಕಾದದ್ದು ಅವರ ವೃತ್ತಿಯ ಬಗ್ಗೆ ಇರುವ ಗೌರವ. ಪೋರ್ಚುನರ್‌ನಲ್ಲಿ ಕೆಲಸಕ್ಕೆ ಬಂದರೂ ಕೈಯಲ್ಲಿ ಪೊರಕೆ ಹಿಡಿಯಲು ಅವರು ಹಿಂಜರಿಯುವುದಿಲ್ಲ. ಇದೇ ಅವರ ಬದುಕಿನ ದೊಡ್ಡ ಸಂದೇಶ.

ಪೊರಕೆ ಮತ್ತು ಪೋರ್ಚುನರ್—ಎರಡೂ ಅವರ ಬದುಕಿನ ಸಂಕೇತಈ ಎರಡು ಚಿತ್ರಗಳ ನಡುವೆ ಅವರ ಇಡೀ ಬದುಕಿನ ಕಥೆಯಿದೆ.

ಪೊರಕೆ—ಅವರ ವೃತ್ತಿಯ ಸಂಕೇತ.

ಪೋರ್ಚುನರ್—ಅವರ ಪರಿಶ್ರಮದಿಂದ ಬಂದ ಆತ್ಮವಿಶ್ವಾಸದ ಸಂಕೇತ.

ದೈವದ ಸೇವೆ—ಅವರ ಕುಟುಂಬದ ಪರಂಪರೆಯ ಸಂಕೇತ.

ಇವರಿಗಿದೆ ಕಾರ್ ಕ್ರೇಜಿ....

ಆರಂಭದಲ್ಲಿ ಸಣ್ಣ ಕಾರೊಂದನ್ನು ಖರೀದಿಸಿದ್ದ ಅವರು, ಬಳಿಕ ಆಲ್ಟೋ, ನಂತರ ಸ್ಕಾರ್ಪಿಯೋ ಕಾರನ್ನು ಹೊಂದಿದ್ದರು. ಪ್ರತಿಬಾರಿಯೂ ತಮ್ಮಲ್ಲಿದ್ದ ಹಳೆಯ ಕಾರನ್ನು ಬದಲಾಯಿಸಿ, ಅಗತ್ಯವಿದ್ದಷ್ಟು ಸಾಲ/ಲೋನ್ ಪಡೆದು ಹೊಸ ಕಾರನ್ನು ಖರೀದಿಸುತ್ತಾ ಬಂದಿದ್ದಾರೆ.

ಕಳೆದ ಕೆಲವು ತಿಂಗಳ ಹಿಂದೆ ತಮ್ಮಲ್ಲಿದ್ದ ಆಲ್ಟೋ ಮತ್ತು ಸ್ಕಾರ್ಪಿಯೋ ಎರಡೂ ಕಾರುಗಳನ್ನು ನೀಡಿ, ಅದರ ಜತೆಗೆ ಸಾಲ ಪಡೆದು ಫಾರ್ಚುನರ್ ಕಾರನ್ನು ಖರೀದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಲಸೌಕರ್ಯ ಅಭಿವೃದ್ಧಿ: ಆಯುಕ್ತರಿಂದ ವಿವಿಧೆಡೆ ಪರಿಶೀಲನೆ
ಅಧ್ಯಾಪಕರು ಹೊಸ ಜ್ಞಾನ, ತಂತ್ರಜ್ಞಾನ ಕಲಿಯಬೇಕು: ಆ್ಯಂಟನಿ ಪ್ರಕಾಶ್ ಮೊಂತೇರೊ