)
ಕುಂದಾಪುರ : ಎಂಟು ಶಾಲಾ ಮಕ್ಕಳ ಸಾವಿಗೆ ಕಾರಣವಾಗಿದ್ದ ಮೊವಾಡಿ ರಸ್ತೆ ಅಪಘಾತ ಪ್ರಕರಣಕ್ಕೆ 10 ವರ್ಷಗಳ ಬಳಿಕ ನ್ಯಾಯಾಲಯ ಅಂತಿಮ ತೀರ್ಪು ನೀಡಿದೆ. ರಾಷ್ಟ್ರೀಯ ಹೆದ್ದಾರಿ 66ರ ಮೊವಾಡಿ ಡಾನ್ ಬಾಸ್ಕೋ ಶಾಲಾ ಕ್ರಾಸ್ ಬಳಿ 2016ರಲ್ಲಿ ಸಂಭವಿಸಿದ್ದ ಅಪಘಾತ ಪ್ರಕರಣದಲ್ಲಿ ಆರೋಪಿ ಖಾಸಗಿ ಬಸ್ ಚಾಲಕ ಮಂಜುನಾಥ ತ್ರಾಸಿ ಅವರಿಗೆ 1 ವರ್ಷ 17 ದಿನಗಳ ಸಾಧಾರಣ ಜೈಲು ಶಿಕ್ಷೆ ಹಾಗೂ 12,500 ರು. ದಂಡ ವಿಧಿಸಿ ಕುಂದಾಪುರದ ಮೂರನೇ ಹೆಚ್ಚುವರಿ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಣಿಕಂಠ ಎಂ.ಎಸ್. ಅವರು ಈ ತೀರ್ಪು ಪ್ರಕಟಿಸಿದ್ದಾರೆ.
ಅಪಘಾತದಲ್ಲಿ ಓಮ್ನಿಯಲ್ಲಿದ್ದ ಅನನ್ಯ ಡಿಸಿಲ್ವಾ, ನಿಖಿತ್ ಡಿಸಿಲ್ವಾ, ರಾಯಸ್ಟನ್ ಲೋಬೋ, ಕ್ಲೇರಿಸಾ, ಅನ್ಸಿಟಾ ಓಲೇವಿರಾ, ಆಲ್ವಿಟಾ ಓಲೇವಿರಾ, ಬೆಲ್ವಿನ್ ಡಯಾಸ್ ಹಾಗೂ ಕೆಲಿಸ್ಟಾ ಮೃತಪಟ್ಟಿದ್ದರು. ಇನ್ನು ಕೆಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ವೃತ್ತ ನಿರೀಕ್ಷಕ ಸುದರ್ಶನ ಹಾಗೂ ನಂತರ ರಾಘವ ಎಸ್. ಪಡೀಲ್ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ ಅವರು ವಾದ ಮಂಡಿಸಿದ್ದರು.