ಸಂಸ್ಕಾರವಂತರಾಗಿ ಮುನ್ನಡೆಯಿರಿ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork |  
Published : Jan 16, 2026, 01:30 AM IST
ನೂತನ ಹವ್ಯಕ ಭವನದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸ್ವರ್ಣವಲ್ಲೀ ಶ್ರೀಗಳು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. | Kannada Prabha

ಸಾರಾಂಶ

ಎಲ್ಲ ಸಮಾಜಕ್ಕೂ, ದೇಶಕ್ಕೂ, ವಿಶ್ವಕ್ಕೂ ಆದರ್ಶವಾದ ಸಮಾಜ ನಮ್ಮದಾಗಿದೆ.

ನೂತನ ಹವ್ಯಕ ಭವನದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಮಹಾಸ್ವಾಮಿಗಳುಕನ್ನಡಪ್ರಭ ವಾರ್ತೆ ಯಲ್ಲಾಪುರ

ಹವ್ಯಕರಾದ ನಾವು ವಿದೇಶಿ ಸಂಸ್ಕೃತಿಯ ಹಿಂದೆ ಹೋಗದೇ ಸಂಖ್ಯೆ, ಸಂಘಟನೆ, ಸಂಸ್ಕಾರ ಈ ಮೂರು "ಸ "ಕಾರಗಳನ್ನು ಸಾಕಾರಗೊಳಿಸಬೇಕು. ಆದರೆ ಇಂದು ವಿಕಾರಗೊಳ್ಳುತ್ತಿವೆ. ಎಲ್ಲ ಸಮಾಜಕ್ಕೂ, ದೇಶಕ್ಕೂ, ವಿಶ್ವಕ್ಕೂ ಆದರ್ಶವಾದ ಸಮಾಜ ನಮ್ಮದಾಗಿದೆ. ಎಲ್ಲ ಸಮುದಾಯವನ್ನು ಒಟ್ಟಿಗೆ ಕರೆದೊಯ್ಯುವ ಸಂಸ್ಕಾರವನ್ನು ನಾವು ಹೊಂದಿದ್ದೇವೆ ಎಂದು ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

ಪಟ್ಟಣದ ಕಾಳಮ್ಮನಗರದಲ್ಲಿ ನೂತನ ಹವ್ಯಕ ಭವನದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ, ಗೋಪೂಜೆ, ಹವ್ಯಕ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.

ಹವ್ಯ-ಕವ್ಯದ ಮಹತ್ವವನ್ನು ಅರಿತು ಹವ್ಯಕರು ಹವ್ಯಕರಾಗಿಯೇ ಉಳಿಯುವ ಅಗತ್ಯವಿದೆ. ಅದಕ್ಕೆ ನಿರಂತರವಾದ ಅನುಷ್ಠಾನ, ಧರ್ಮಾಚರಣೆ ಮಾಡಬೇಕು. ಹವ್ಯಕರು ತಮ್ಮ ಸಂಸ್ಕಾರವನ್ನು ಉಳಿಸಿಕೊಂಡಾಗ ಮಾತ್ರ ಉತ್ತಮ ಸಮಾಜ, ರಾಷ್ಟ್ರ ಒಳಿತಿಗೆ ಕಾರಣವಾಗುತ್ತದೆ. ಹವ್ಯಕರ ಬುದ್ಧಿವಂತಿಕೆಯನ್ನು ಕೇವಲ ಟೀಕೆ, ಟಿಪ್ಪಣೆಯಲ್ಲಿ ಕಳೆಯದೇ ಎಲ್ಲರೂ ಕೈಜೋಡಿಸಬೇಕು.

ಹಳ್ಳಿಯಲ್ಲಿ ಮಾತ್ರ ಸರಿಯಾದ ಸಂಸ್ಕಾರದ ನೆಲೆ ಸಾಧ್ಯ. ಹವ್ಯಕರು ತಮ್ಮ ಕೃಷಿ ಭೂಮಿಯನ್ನು ಯಾರಿಗೋ ಮಾರಾಟ ಮಾಡಿ ನಗರದತ್ತ ವಾಲುವುದು ಸಲ್ಲ. ಅನಗತ್ಯವಾಗಿ ಕೃಷಿಯ ನೆಲೆಯನ್ನು ಕಳೆದುಕೊಳ್ಳಬಾರದು. ಇಂದು ಹವ್ಯಕರು ನಮ್ಮ ಪರಂಪರೆ, ಮೌಲ್ಯದಿಂದ ದೂರವಾಗುತ್ತಿದ್ದಾರೆ. ಬಹುತೇಕ ಹವ್ಯಕರು ದೇವ, ಋಷಿ, ಪಿತೃ ತರ್ಪಣ ನೀಡುವುದನ್ನು ಬಿಟ್ಟಿದ್ದಾರೆ. ಅಲ್ಲದೇ, ಕಲ್ಯಾಣ ಮಂಟಪದಲ್ಲಿ ನಡೆಯುವ ವಿವಾಹ, ಉಪನಯನ, ಅಶಾಸ್ತ್ರೀಯವಾಗಿ ನಡೆಯುತ್ತಿದೆ. ಅದು ಇಲ್ಲಿಂದಲೇ ಶಾಸ್ತ್ರೋಕ್ತವಾಗಿ ನಡೆಸುವಂತೆ ಸಂಕಲ್ಪ ಮಾಡಿ. ಬ್ರಾಹ್ಮಣರಿರುವುದು ದೇಶಕ್ಕಾಗಿ, ಅದನ್ನು ಅರ್ಥ ಮಾಡಿಕೊಂಡು ಸಂಸ್ಕಾರವಂತರಾಗಿ ಮುನ್ನಡೆಯಬೇಕು ಎಂದರು.

ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಸರ್ಕಾರದಿಂದ ಹವ್ಯಕ ಭವನಕ್ಕೆ ₹೫೫ ಲಕ್ಷ ಅನುದಾನ ಮಂಜೂರಿ ಮಾಡಿಸಿದ್ದೇನೆ. ಕಟ್ಟಡಕ್ಕೆ ನನ್ನ ಕುಟುಂಬದ ತನು, ಮನ, ಧನ ನೆರವು ಸದಾ ಇರುತ್ತದೆ. ಸಂಘಟನೆಯ ಜೊತೆಯಲ್ಲಿ ನಾನು ಸದಾ ಇರುತ್ತೇನೆ. ಈ ಸ್ಥಳದ ಮಂಜೂರಾತಿ ಸಮಯದಲ್ಲಿ ದಿ.ಉಮೇಶ ಭಟ್ಟರಿಂದ ಹಿಡಿದು ಅನೇಕರ ಕೊಡುಗೆ ಸ್ಮರಿಸಲೇಬೇಕು ಎಂದರು.

ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಎಲ್ಲರೂ ಒಂದಾಗಿ ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕು ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಂಖ್ಯೆಯಲ್ಲಿ ಕಡಿಮೆ ಇದ್ದರೂ, ಸಂಸ್ಕೃತಿ, ಸಂಸ್ಕಾರವೇ ನಮ್ಮ ಶಕ್ತಿ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಮಾಜದ ಘನತೆಯನ್ನು ಕಾಪಿಟ್ಟುಕೊಂಡು ಹೋಗಬೇಕಾಗಿದೆ ಎಂದರು.

ವಿದ್ವಾನ್ ನಾಗೇಂದ್ರ ಭಟ್ಟ ಹಿತ್ಲಳ್ಳಿ, ವಿದ್ವಾನ್ ತಿಮ್ಮಣ್ಣ ಭಟ್ಟ ಬಾಲೀಗದ್ದೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವೇ.ಮೂ. ಮಂಜುನಾಥ ಭಟ್ಟ ಮತ್ತು ನಾರಾಯಣ ಭಟ್ಟರ ನೇತೃತ್ವದಲ್ಲಿ ೭೦ಕ್ಕೂ ಹೆಚ್ಚು ಪುರೋಹಿತರು ವಿವಿಧ ಧಾರ್ಮಿಕ ಕಾರ್ಯಕ್ರಮ, ಹೋಮ-ಹವನಾದಿ, ಜಪತಪ ನಡೆಸಿದರು. ಮಾತೆಯರು ಭಗವದ್ಗೀತೆ, ರಾಮತಾರಕ ಜಪ, ಶಾಂಕರ ಸ್ತೋತ್ರ ಮೊದಲಾದವುಗಳು ಪಾರಾಯಣ ನಡೆಸಿಕೊಟ್ಟರು. ಈ ಸಮಾವೇಶದಲ್ಲಿ ೫೦೦೦ಕ್ಕೂ ಹೆಚ್ಚಿನ ಹವ್ಯಕರು ಭಾಗವಹಿಸಿದ್ದರು.

ವೈದಿಕರು ವೇದಘೋಷ ಪಠಿಸಿದರು. ಪಲ್ಲವಿ ಭಟ್ಟ ಶಿವ ಸ್ತುತಿ ಹಾಡಿದರು. ವಿದುಷಿ ವಾಣಿ ಹೆಗಡೆ ಮುಕ್ತಾ ಶಂಕರ ರಚಿಸಿದ ಗಣೇಶ ಸ್ತುತಿಯನ್ನು ಕೊನೆಯಲ್ಲಿ ಹಾಡಿದರು. ಹವ್ಯಕ ಭವನ ಕಟ್ಟಡ ಸಮಿತಿ ಅಧ್ಯಕ್ಷ ಮಾರುತಿ ಘಟ್ಟಿ ಸ್ವಾಗತಿಸಿದರು. ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರವಿ ಭಟ್ಟ ಬರಗದ್ದೆ ನಿರ್ವಹಿಸಿದರು. ಕಟ್ಟಡ ಸಮಿತಿ ಉಪಾಧ್ಯಕ್ಷ ನಾಗರಾಜ ಕವಡಿಕೆರೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನದ ಸತ್ಯ ರೂಪಿತವಾಗಲು ನಡೆ ನುಡಿ ಶುದ್ಧಿಯಾಗಿರಲಿ
ಮಾರಕ ಯೋಜನೆಗೆ ಬಿಜೆಪಿ ಅವಕಾಶ ನೀಡುವುದಿಲ್ಲ: ಎನ್‌.ಎಸ್‌. ಹೆಗಡೆ ಕರ್ಕಿ