ಮುಂಡರಗಿ: ತಾಲೂಕಿನ ಸಿಂಗಟಾಲೂರು ಸುಕ್ಷೇತ್ರಕ್ಕೆ ಗುರುವಾರ ಸಾವಿರಾರು ಭಕ್ತರು ಆಗಮಿಸಿ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ನಂತರ ಗುಡ್ಡದ ಮೇಲಿರುವ ವೀರಭದ್ರೇಶ್ವರ ದೇವರ ದರ್ಶನ ಪಡೆದು ಸಂಕ್ರಾಂತಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.ಗುರುವಾರ ಬೆಳಗ್ಗೆಯಿಂದಲೇ ಸಿಂಗಟಾಲೂರು ಸುಕ್ಷೇತ್ರಕ್ಕೆ ಸಾರ್ವಜನಿಕರು ಟ್ರ್ಯಾಕ್ಟರ್, ಟಂಟಂ, ಕಾರು, ಜೀಪ್ ಹಾಗೂ ಮೋಟಾರ ಸೈಕಲ್‌ಗಳ ಮೂಲಕ ತಂಡೋಪ ತಂಡವಾಗಿ ಹರಿದು ಬಂದಿದ್ದು, ಸಾರಿಗೆ ಇಲಾಖೆಯಿಂದಲೂ ಸಿಂಗಟಾಲೂರು ಕ್ಷೇತ್ರಕ್ಕೆ ವಿಶೇಷ ಬಸ್ಸು ಗಳನ್ನು ಬಿಡಲಾಗಿತ್ತು.
ಪ್ರವಾಸಿಗರ ಸಂಖ್ಯೆ ಹೆಚ್ಚಳ: ಕ್ಷೇತ್ರಕ್ಕೆ ಗದಗ ಜಿಲ್ಲೆ ಸೇರಿದಂತೆ ಪಕ್ಕದ ಬಳ್ಳಾರಿ, ವಿಜಯನಗರ, ಹಾವೇರಿ, ಕೊಪ್ಪಳ, ಧಾರವಾಡ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಳೆದ 3 ವರ್ಷಗಳಿಂದ ಪ್ರಾರಂಭವಾದ ರಾಕ್ ಗಾರ್ಡನ್ ಮಾದರಿಯ ವೀರಭದ್ರೇಶ್ವರ ಉದ್ಯಾನವನ ಆಗಮಿಸಿದ ಭಕ್ತರಿಗೆ ಆಕರ್ಷಣೀಯ ಕೇಂದ್ರವಾಗಿದೆ.ಕೆಲವರು ತಾಲೂಕಿನ ಹಮ್ಮಿಗಿ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ ಹತ್ತಿರಕ್ಕೆ ತೆರಳಿ ಅಲ್ಲಿಯೇ ಸಂಕ್ರಾಂತಿ ಆಚರಿಸಿದರು. ಇನ್ನು ಕೆಲವರು ಕೊರ್ಲಹಳ್ಳಿ ಪಕ್ಕದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಆಚೆಯ ದಂಡೆಯಲ್ಲಿರುವ ಮದಲಗಟ್ಟಿ ಹನುಮಂತ ದೇವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಊಟ ಮಾಡಿದರು.
ದೇವಸ್ಥಾನದಿಂದಲೂ ಪ್ರಸಾದ ವ್ಯವಸ್ಥೆ: ವೀರಭದ್ರೇಶ್ವರ ದೇವಸ್ಥಾನದಲ್ಲಿ ವರ್ಷಪೂರ್ತಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಚಿತ ಪ್ರಸಾದ ವ್ಯವಸ್ಥೆಯನ್ನು ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಮಾಡಿದ್ದು, ಸಂಕ್ರಾಂತಿಯ ಅಂಗವಾಗಿ ಗುರುವಾರವೂ ಪ್ರಸಾದ ಮಾಡಲಾಗಿತ್ತು.ಪ್ರಶಸ್ತ ಸ್ಥಳ: ಸಂಕ್ರಾಂತಿ ಆಚರಣೆ ಹಾಗೂ ಪುಣ್ಯ ಸ್ಥಾನ ಮಾಡಲು ಸಿಂಗಟಾಲೂರು ಸುಕ್ಷೇತ್ರ ಅತ್ಯಂತ ಪ್ರಶಸ್ತವಾಗಿದೆ. ನಾವು ಕಳೆದ ಅನೇಕ ವರ್ಷಗಳಿಂದ ಸಂಕ್ರಾಂತಿ ವೇಳೆ ಸ್ನೇಹಿತರೊಂದಿಗೆ, ಕುಟುಂಬ ಸದಸ್ಯರೊಂದಿಗೆ ಸಿಂಗಟಾಲೂರು ಸುಕ್ಷೇತ್ರಕ್ಕೆ ಆಗಮಿಸುತ್ತೇವೆ. ಇಲ್ಲಿ ಇನ್ನಷ್ಟು ಕುಡಿಯುವ ನೀರು, ಮೂತ್ರಾಲಯ ಹಾಗೂ ಶೌಚಾಲಯದ ವ್ಯವಸ್ಥೆ ಆಗಬೇಕು ಎಂದು ಪ್ರವಾಸಿಗರಾದ ಎಸ್.ಪಿ. ಶಿವಲಿಂಗಪ್ಪಆಗ್ರಹಿಸಿದರು.