ಮೈಸೂರು: ಭಾರತದ ಆರ್ಥಿಕತೆಯ ಗಾತ್ರಕ್ಕೂ ಇಲ್ಲಿನ ಜನಜೀವನ ವೃದ್ಧಿಗೂ ಸಂಬಂಧ ಇಲ್ಲ ಎಂದು ಟಾಟಾ ಇನ್ಸ್ ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ (ಟಿಐಎಸ್ಎಸ್) ಪ್ರಾಧ್ಯಾಪಕ ಡಾ.ಆರ್.ರಾಮಕುಮಾರ್ ತಿಳಿಸಿದರು.
ಭಾರತ ಹೊಸ ಉದಾರೀಕರಣಕ್ಕೆ ತೆರೆದುಕೊಳ್ಳತ್ತಿದ್ದು, ಸರ್ಕಾರ ಸರ್ಕಾರಿ ಹೂಡಿಕೆ ಹಾಗೂ ಸಾಮಾಜಿಕ ಹೊಣೆಗಾರಿಕೆಯಿಂದ ಹಿಂದೆ ಸರಿಯುತ್ತಿದೆ. ಕ್ರೋನಿಂಗ್ ಕ್ಯಾಪಿಟಲಿಸಂಗೆ ಭಾರತ ತೆರೆದುಕೊಳ್ಳುತ್ತಿದೆ. ಕೆಲವೇ ಕಂಪನಿಗಳು ಹಿಡಿತ ಸಾಧಿಸುತ್ತಿದೆ. ಭಾರತ ಸಂಪತ್ತಿನ ಅಸಮಾನ ಹಂಚಿಕೆಯಲ್ಲಿ ನಂ.1 ಸ್ಥಾನದಲ್ಲಿದೆ ಎಂದರು.
ಬಡತನ ನಿರ್ಮೂಲನೆ ಸಾಧ್ಯವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ವಾಸ್ತವದಲ್ಲಿ ಬಡತನ ರೇಖೆಯ ಮೌಲ್ಯವನ್ನೇ ಇಳಿಸಲಾಗುತ್ತಿದೆ. ಭಾರತದ ಶೇ.25 ಜನರು ಬಡತನ ರೇಖೆಗಿಂತ ಕೆಳಗೆ ಇದ್ದಾರೆ. 8 ಕೋಟಿ ಉದ್ಯೋಗ ಸೃಷ್ಟಿ ಆಗಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಭಾರತದ ಕೃಷಿ ಕ್ಷೇತ್ರದ ಮಹಿಳೆಯರನ್ನು ಇದಕ್ಕೆ ಸೇರಿಸಲಾಗಿದೆ. ಇದು ಉದ್ಯೋಗ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.ಸಾರ್ವಜನಿಕ ಸಂಸ್ಥೆಗಳು, ಸಾಮಾಜಿಕ ಭದ್ರತಾ ಯೋಜನೆಗಳನ್ನು ಇಳಿಸಲಾಗುತ್ತಿದೆ. ಕೋವಿಡ್ ನಲ್ಲಿ 4 ಲಕ್ಷ ಸತ್ತಿದ್ದಾರೆ ಸರ್ಕಾರ ಹೇಳಿದರೆ, 40 ಲಕ್ಷ ಸತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳುತ್ತಿದೆ. ಇದನ್ನೇ ಮಾತನಾಡಿದರೆ ದೇಶವಿರೋಧಿ ಎನ್ನುತ್ತಾರೆ. ಈಗ ಸರ್ಕಾರವೇ 21 ಲಕ್ಷ ಜನ ಸತ್ತಿರುವುದಾಗಿ ಒಪ್ಪಿಕೊಂಡಿದೆ. ಹೀಗೆ ಸತ್ತವರ ಜೀವಕ್ಕೆ ಬೆಲೆ ಇಲ್ಲವೇ ಎಂದು ಅವರು ಕಿಡಿಕಾರಿದರು.
ನೋಟು ಅಮಾನ್ಯೀಕರಣ ಭಾರತದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡಿದ್ದು, ಕೈಗಾರಿಕೆಗಳನ್ನು ಮುಳುಗಿಸಿದೆ. ಜಿಎಸ್‌ಟಿ ಏರಿಸಿದ ಸರ್ಕಾರ ಕಾರ್ಪೋರೇಟ್ ತೆರಿಗೆಯನ್ನು ಮಾತ್ರ ಇಳಿಸುತ್ತಲೇ ಇದೆ. ಜನರನ್ನು ವಿಭಜಿಸಿ ಆಳಲಾಗುತ್ತಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆದು ಆರ್ಥಿಕ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದರು.ಒಂದು ಭಾರತ ಹೆಸರಿನಲ್ಲಿ ಇಲ್ಲಿನ ವೈವಿಧ್ಯತೆಯನ್ನು, ಒಕ್ಕೂಟ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ. ನಾಗರಿಕರನ್ನು ಯಂತ್ರಗಳಂತೆ ಬಳಸುವ ಕಾಲ ಬರಲಿದೆ. ಪ್ರಶ್ನಿಸುವವರ ಮೇಲೆ ಇಡಿ, ಸಿಬಿಐ ಅಂತಹ ಸಂಸ್ಥೆಗಳು ಮುಗಿಬೀಳುತ್ತಿವೆ. ಹೀಗಾಗಿ, ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ಭಾರತದ ಉಳಿವಿಗೆ ಹೋರಾಟದ ಅಗತ್ಯವಿದೆ ಎಂದು ಹೇಳಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ವಿಶ್ರಾಂತ ಕುಲಪತಿ ಪ್ರೊ. ಸಬೀಹಾ ಭೂಮಿಗೌಡ ಮಾತನಾಡಿ, ಸಮಾಜದ ಪ್ರತಿಯೊಬ್ಬರಿಗೂ ಘನತೆಯ ಬದುಕು ನಡೆಸಲು ಸಾರ್ವತ್ರಿಕ ಪಿಂಚಣಿ ಪಡೆಯಲು ಬಲದವಾದ ಚಳವಳಿ ಹುಟ್ಟು ಹಾಕಬೇಕಿದೆ ಎಂದರು.ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸಂಘದ 500 ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು, ಜೂ.4 ರಂದು ಸಮ್ಮೇಳನ ಸಮಾರೋಪಗೊಳ್ಳಲಿದೆ.
ಅಖಿಲ ಭಾರತ ವಿಮಾ ನೌಕರರ ಸಂಘದ ರಾಷ್ಟ್ರೀಯ ಅಧ್ಯಕ್ಷ ವಿ. ರಮೇಶ್, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಿಶ್ರಾ, ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘದ ಅಧ್ಯಕ್ಷ ಸತನ್ ಜಿಬ್ ದಾಸ್, ಪ್ರದಾನ ಕಾರ್ಯದರ್ಶಿ ಎಂ. ಕುನ್ಹಿ ಕೃಷ್ಣನ್, ಪದಾಧಿಕಾರಿಗಳಾದ ಶ್ರೀಧರ್, ಸಿ.ಆರ್. ಕೃಷ್ಣಮೂರ್ತಿ, ಬಲರಾಮ್, ಮಹದೇವಯ್ಯ, ರಾಜೇಂದ್ರ, ಉಮಾಪತಿ ಇತರರಿದ್ದರು.----
ಕೋಟ್...........ದೇಶದಲ್ಲಿನ ಎಲ್ಲಾ ಹಿರಿಯ ನಾಗರಿಕರಿಗೆ ಸಾರ್ವತ್ರಿಕ ಪಿಂಚಣಿ ಹಾಗೂ ಆರೋಗ್ಯ ವಿಮೆಯ ಅಗತ್ಯವಿದೆ. ಆದರೆ ಆರೋಗ್ಯ ವಿಮೆ ಯೋಜನೆಗಳಿಂದ ಹಿರಿಯರನ್ನು ಹೊರಗೆ ಇಟ್ಟಿರುವುದು ಸರಿಯಲ್ಲ. ಎಲ್ಲರಿಗೂ ಕಡ್ಡಾಯವಾಗಿ ಈ ಸೇವೆಗಳು ವಿಸ್ತರಣೆ ಆಗಬೇಕಿದೆ.
-ಡಾ.ಆರ್.ರಾಮಕುಮಾರ್, ಪ್ರಾಧ್ಯಾಪಕ, ಟಿಐಎಸ್ಎಸ್