‘ಬುಕರ್‌’ ಬಾನು, ಭಾಸ್ತಿಗೆ ₹10 ಲಕ್ಷ ಪುರಸ್ಕಾರ : ಮುಖ್ಯಮಂತ್ರಿ

KannadaprabhaNewsNetwork |  
Published : Jun 03, 2025, 01:50 AM ISTUpdated : Jun 03, 2025, 04:57 AM IST
Felistation at Vidhanasoudha 35 | Kannada Prabha

ಸಾರಾಂಶ

ಕನ್ನಡಕ್ಕೆ ಅಂತಾರಾಷ್ಟ್ರೀಯ ಮಟ್ಟದ ಬುಕರ್‌ ಪ್ರಶಸ್ತಿ ತಂದು ಕೊಟ್ಟ ಸಾಹಿತಿ ಬಾನು ಮುಷ್ತಾಕ್‌ ಮತ್ತು ದೀಪಾ ಭಾಸ್ತಿ ಅವರಿಗೆ ರಾಜ್ಯ ಸರ್ಕಾರದಿಂದ ತಲಾ ₹10 ಲಕ್ಷ ಪುರಸ್ಕಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

 ಬೆಂಗಳೂರು : ಕನ್ನಡಕ್ಕೆ ಅಂತಾರಾಷ್ಟ್ರೀಯ ಮಟ್ಟದ ಬುಕರ್‌ ಪ್ರಶಸ್ತಿ ತಂದು ಕೊಟ್ಟ ಸಾಹಿತಿ ಬಾನು ಮುಷ್ತಾಕ್‌ ಮತ್ತು ದೀಪಾ ಭಾಸ್ತಿ ಅವರಿಗೆ ರಾಜ್ಯ ಸರ್ಕಾರದಿಂದ ತಲಾ ₹10 ಲಕ್ಷ ಪುರಸ್ಕಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬುಕರ್‌ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ಬುಕರ್‌ ಪ್ರಶಸ್ತಿ ಒದಗಿಸಿಕೊಡುವ ಮೂಲಕ ಬಾನು ಮುಷ್ತಾಕ್‌ ನಮ್ಮ ಭಾಷೆಯ ಕೀರ್ತಿ ಹೆಚ್ಚಿಸಿದ್ದಾರೆ. ಇದು ಇಡೀ ಕನ್ನಡ ಜಗತ್ತಿನ ಹೆಮ್ಮೆ. ತಮ್ಮ ಕಥೆಗಳ ಮೂಲಕ ಮತ್ತು ಅನುವಾದದಿಂದ ಕೀರ್ತಿ ತಂದ ಬಾನು ಮುಷ್ತಾಕ್‌, ದೀಪಾ ಭಾಸ್ತಿ ಅವರು ಅಭಿನಂದನಾರ್ಹರು ಎಂದರು.

ಪತ್ರಕರ್ತೆಯಾಗಿ ಬರೆಯುತ್ತಲೇ, ವಕೀಲೆಯಾಗಿ ಬಡವರ ಪರ ವಕಾಲತ್ತು ವಹಿಸುತ್ತಾ ಬಂದ ಬಾನು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿರುವುದೇ ಅವರ ಬರವಣಿಗೆಗಳಲ್ಲಿ ಸಮಾಜಮುಖಿ ಸತ್ವ ಇದೆ ಎನ್ನುವುದಕ್ಕೆ ಸಾಕ್ಷಿ. ಬಾನು ಅವರ ಕತೆಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಪ್ರಕಟಿಸಲು ಸರ್ಕಾರದ ನೆರವು ನೀಡಲಾಗುವುದು ಎಂದು ತಿಳಿಸಿದರು.

ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು. ಮುಸ್ಲಿಂ ಸಮುದಾಯದ ಹೆಣ್ಣು‌ಮಕ್ಕಳ ಧ್ವನಿಯಾಗಿ ಮೌಢ್ಯ ವಿರೋಧಿಸಿ ಬರೆಯುವ ಪ್ರಗತಿಪರ ಎದೆಗಾರಿಕೆ ಬಾನು ಅವರಲ್ಲಿದೆ. ಸಾಹಿತ್ಯದ ಮೂಲಕ ಮಾನವೀಯ ಸಂದೇಶ ನೀಡುವ ಜವಾಬ್ದಾರಿಯನ್ನು ಬಾನು ಮುಷ್ತಾಕ್ ಅವರು ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರು ವಿಶ್ವಮಟ್ಟದಲ್ಲಿ ಕನ್ನಡದ ರಾಯಭಾರಿಗಳಾಗಿ ಬೆಳಗಿದ್ದಾರೆ. ಬುಕರ್ ಪ್ರಶಸ್ತಿ ಗೆದ್ದು ಕನ್ನಡದ ಜ್ಯೋತಿಯನ್ನು ಬೆಳಗಿಸಿದ್ದಾರೆ. ಸಪ್ತ ಸಾಗರದ ಆಚೆ ಕನ್ನಡ ಡಿಂಡಿಮ ಕೇಳಿಸುತ್ತಿದೆ. ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ ಇಬ್ಬರೂ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ತುಂಬು ಹೃದಯದ ಕೃತಜ್ಞತೆಗಳು ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ ಮಾತನಾಡಿದರು. ವಸತಿ ಸಚಿವ ಜಮೀರ್ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್‌ಅಹ್ಮದ್, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ರಿಜ್ವಾನ್ ಅರ್ಷದ್, ಕನ್ನಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಉಪಸ್ಥಿತರಿದ್ದರು.

ಕನ್ನಡಿಗರು ಸೌಹಾರ್ದರು

ಕನ್ನಡಿಗರು ಅಸಹಿಷ್ಣುಗಳು ಎಂಬ ಭಾವನೆ ಉತ್ತರ ಭಾರತೀಯರಲ್ಲಿ ಬೇರೂರಿದ್ದು ಈ ಕುರಿತು ನಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಉತ್ತರ ಭಾರತದ ಅನೇಕ ಪತ್ರಕರ್ತರು ತಮ್ಮನ್ನು ಸಂದರ್ಶಿಸಿದಾಗ ನಾನು ಹಿಂದಿಯಲ್ಲಿ ಮಾತನಾಡಿದೆ. ಆಗ ನಿಮ್ಮನ್ನು ಕನ್ನಡಿಗರು ಒಪ್ಪುವರೇ ಎಂದೆಲ್ಲಾ ಅನುಮಾನ ವ್ಯಕ್ತಪಡಿಸಿದರು. ಕನ್ನಡಿಗರು, ಕರ್ನಾಟಕದವರು ಅಸಹಿಷ್ಣುಗಳು ಎಂಬ ಭಾವನೆ ಕಂಡು ಬೇಸರವಾಯಿತು. ಕನ್ನಡ ಅತ್ಯಂತ ಸೌಹಾರ್ದ ಭಾಷೆ, ಕನ್ನಡಿಗರು ಸೌಹಾರ್ದರು ಎಂಬ ನಮ್ಮ ನಿಜ ನಿಲುವನ್ನು ಉತ್ತರ ಭಾರತೀಯರಿಗೆ ಮನವರಿಕೆ ಮಾಡಿಕೊಡುವುದು ಅತ್ಯಂತ ಅವಶ್ಯಕವಾಗಿದೆ.

PREV
Read more Articles on

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...