ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕೆ ಮತ್ತೆ ಸಣ್ಣದಾಗಿ ಹೋರಾಟದ ಕಿಡಿ ಶುರುವಾಗುತ್ತಿದೆ. ಅಲ್ಪಸಂಖ್ಯಾತ ಲಿಂಗಾಯತ ಮಾನ್ಯತೆಗಾಗಿ ಹೋರಾಟ ವೇದಿಕೆಯಡಿ ಹುಬ್ಬಳ್ಳಿಯಲ್ಲಿ ಲಿಂಗಾಯತ ಒಳಪಂಗಡಗಳ ಒಕ್ಕೂಟದಿಂದ ಕಾರ್ಯಕ್ರಮ ನಡೆದಿದೆ.
ಒಳಪಂಗಡಗಳು ಒಟ್ಟಾಗದ ಹೊರತು ಪ್ರತ್ಯೇಕ ಧರ್ಮದ ಸ್ಥಾನಮಾನ ಕಷ್ಟ ಎಂದು ಅಭಿಪ್ರಾಯ ಪಟ್ಟಿರುವ ಗಣ್ಯರು, ಒಳಪಂಗಡಗಳನ್ನು ಒಟ್ಟಾಗಿಸಿ ಹೋರಾಟಕ್ಕೆ ಅಣಿಗೊಳಿಸಬೇಕು. ಜತೆಗೆ ಪ್ರತ್ಯೇಕ ಧರ್ಮದ ಬಗ್ಗೆ ನಿರಾಸಕ್ತಿ ತೋರುವ ಲಿಂಗಾಯತ ಜನಪ್ರತಿನಿಧಿಗಳಿಗೆ ಮುಂದಿನ ಚುನಾವಣೆಯಲ್ಲಿ ಬಿಸಿ ಮುಟ್ಟಿಸುವ ಕೆಲಸವಾಗಬೇಕು ಎಂದು ಕರೆ ನೀಡಿರುವುದು ಕಾರ್ಯಕ್ರಮದ ವಿಶೇಷ.ಇಲ್ಲಿನ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಲಿಂಗಾಯತ ಒಳಪಂಗಡ ಒಕ್ಕೂಟದಿಂದ ಭಾನುವಾರ ಅಲ್ಪಸಂಖ್ಯಾತ ಲಿಂಗಾಯತ ಮಾನ್ಯತೆಗಾಗಿ ಹೋರಾಟ ವೇದಿಕೆಯಡಿ ಕಾರ್ಯಕ್ರಮ ನಡೆಸಲಾಯಿತು.
ಬಸವತತ್ವ ಚಿಂತಕ ಪ್ರೊ. ಸಂಜಯಕುಮಾರ ಮಾಕಲ ಮಾತನಾಡಿ, ಲಿಂಗಾಯತ ಒಳಪಂಗಡಗಳು ಒಟ್ಟಾಗದ ಹೊರತು ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗುವುದು ಕಷ್ಟ. ಒಟ್ಟಾಗಿ ಹೋರಾಟ ನಡೆಸಿದರೆ ಪ್ರತ್ಯೇಕ ಧರ್ಮದ ಜತೆ ಜತೆಗೆ ಅಲ್ಪಸಂಖ್ಯಾತ ಲಿಂಗಾಯತ ಮಾನ್ಯತೆ ಪಡೆಯಲು ಸಾಧ್ಯ ಎಂದು ಹೇಳಿದರು.ಲಿಂಗಾಯತ ಒಳಪಂಗಡಗಳಲ್ಲಿ ಒಗ್ಗಟ್ಟಿನ ಕೊರತೆ ಇದೆ. ಹಿಂದೂ ಎಂಬುದು ಧರ್ಮ ಅಲ್ಲ, ಅದು ಬದುಕುವ ಶೈಲಿ. ಲಿಂಗಾಯತ ಧರ್ಮ ಎಂದು ಶರಣರ ಕಾಲದಲ್ಲಿ, ರಾಜರ, ಬ್ರಿಟಿಷರ ಆಡಳಿತದ ಅವಧಿಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಸಾಕಷ್ಟು ಪುರಾವೆಗಳೂ ಇವೆ. ಕಸುಬಿನ ಆಧಾರದ ಮೇಲೆ ಲಿಂಗಾಯತದಲ್ಲಿ ಸಾಕಷ್ಟು ಒಳಪಂಗಡಗಳಾಗಿ ಮಾರ್ಪಟ್ಟಿವೆ. ಇವುಗಳನ್ನೂ ಒಟ್ಟುಗೂಡಿಸುವ ಮತ್ತು ಲಿಂಗಾಯತ ಧರ್ಮ ರಕ್ಷಿಸುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಲಿಂಗಾಯತರನ್ನು ಜಾಗ್ರತಗೊಳಿಸುವ, ಒಗ್ಗೂಡಿಸುವ ಸಭೆ, ಸಮಾರಂಭಗಳು ನಿರಂತರವಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಮಠಾಧೀಶರು ಮುಂಚೂಣಿಯಲ್ಲಿ ನಿಲ್ಲಬೇಕು ಎಂದರು.
ಲಿಂಗಾಯತ ಒಳಪಂಗಡ ಒಕ್ಕೂಟದ ಅಧ್ಯಕ್ಷ ಚಿಂತಾಮಣಿ ಸಿಂದಗಿ ಮಾತನಾಡಿ, ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಸಮುದಾಯವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಷಡ್ಯಂತ್ರದಿಂದಾಗಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುತ್ತಿಲ್ಲ ಎಂದರು.
ಲಿಂಗಾಯತ ಮುಖಂಡರಾದ ನೀಲಕಂಠ ಅಸೂಟಿ, ಡಿ.ಸಿ. ರಂಗರಡ್ಡಿ ಮಾತನಾಡಿದರು. ಇದೇ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಸಂವಾದ ನಡೆಯಿತು.ವಕೀಲ ವಿಜಯಕುಮಾರ ಶೀಲವಂತರ, ಲಿಂಗರಾಜನಗರದ ಮಹಿಳಾ ಮಂಡಳ ಅಧ್ಯಕ್ಷೆ ಲತಾ ಉಮ್ರಾಣಿ, ಪ್ರಮುಖರಾದ ಶಿವಣ್ಣ ಅಂಗಡಿ, ನಿಂಗನಗೌಡ ಮರಿಗೌಡ್ರ, ಪ್ರಕಾಶ ಭಾವಿಕಟ್ಟಿ, ಶಿವಯೋಗಪ್ಪ ಯಮ್ಮಿ, ಸರ್ವಮಂಗಳಾ ಕುದರಿ, ಮಲ್ಲಿಕಾರ್ಜುನ ಕುಂಬಾರ, ಮಲ್ಲಿಕಾರ್ಜುನ ನರವಣಿ, ರವೀಂದ್ರನಾಥಗೌಡ, ಸುರೇಶ ಬಣವಿ, ರವಿ ಕುಡುವಕ್ಕಲಿಗ, ಪ್ರಭು ಶೆಟ್ಟರ್, ಸದಾನಂದ ತೇರದಾಳ ಇದ್ದರು.
ಪ್ರತ್ಯೇಕ ಧರ್ಮದ ವಿಚಾರದಲ್ಲಿ ಜನಪ್ರತಿನಿಧಿಗಳ ನಿರಾಸಕ್ತಿ: ತೋಂಟದಾರ್ಯ ಶ್ರೀಲಿಂಗಾಯತ ಕೋಟಾದಲ್ಲಿ ಚುನಾವಣೆ ಟಿಕೆಟ್, ಸ್ಥಾನಮಾನಗಳನ್ನು ಜನಪ್ರತಿನಿಧಿಗಳು ಪಡೆಯುತ್ತಾರೆ. ಆದರೆ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಬಂದಾಗ ಮಾತ್ರ ನಿರಾಸಕ್ತಿ ತೋರುತ್ತಿದ್ದಾರೆ ಎಂದು ಡಂಬಳ, ಗದಗ ಎಡೆಯೂರ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಈ ರೀತಿ ನಿರ್ಲಕ್ಷ್ಯ ತೋರುವ ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.ಹಾಗೆಯೇ ಪ್ರತ್ಯೇಕ ಧರ್ಮದ ಮಾನ್ಯತೆಗೆ ಬೃಹತ್ ಹೋರಾಟ ರೂಪಿಸಬೇಕು. ಆ ಮೂಲಕ ಹೋರಾಟಕ್ಕೆ ಬೆಂಬಲಿಸುವ ನಾಯಕರನ್ನು ಮಾತ್ರ ಚುನಾವಣೆಯಲ್ಲಿ ಬೆಂಬಲಿಸುವ ಕೆಲಸ ಸಮುದಾಯದಿಂದ ಆಗಬೇಕು. ಧರ್ಮದ ಹೆಸರಿನಲ್ಲಿ ಕೋಮುವಾದ ಸೃಷ್ಟಿಸುವ ಕೆಲಸ ನಡೆದಿದ್ದು, ಅಂತಹ ಸಂಘಟನೆಯಲ್ಲಿ ಲಿಂಗಾಯತ ಯುವಕರು ಪಾಲ್ಗೊಳ್ಳದಂತೆ ನೋಡಿಕೊಳ್ಳಬೇಕು ಎಂದರು.