ಮಳೆಹಾನಿ ಪ್ರದೇಶಗಳಿಗೆ ಎ.ಎಸ್.ಪೊನ್ನಣ್ಣ ಭೇಟಿ, ಪರಿಶೀಲನೆ

KannadaprabhaNewsNetwork |  
Published : Jun 03, 2025, 01:45 AM IST
ಚಿತ್ರ : 1ಎಂಡಿಕೆ1 : ಮಳೆಹಾನಿ ಪ್ರದೇಶಗಳಿಗೆ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಪರಿಶೀಲಿಸಿದರು.  | Kannada Prabha

ಸಾರಾಂಶ

ವಿರಾಜಪೇಟೆ ಶಾಸಕ ಎ.ಎಸ್‌. ಪೊನ್ನಣ್ಣ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಳೆ ಹಾನಿ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿ ವೀಕ್ಷಿಸಿದರು.

ವಿರಾಜಪೇಟೆ ತಾಲೂಕಿನ ಬೆಟೋಳಿ ಗ್ರಾಮ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತಡೆಗೋಡೆ ಪರಿಶೀಲಿಸಿದರು. ಕಳೆದ ವಾರ ಸುರಿದ ಧಾರಾಕಾರ ಮಳೆಗೆ ಎತ್ತರದ ತಡೆಗೋಡೆ ಕುಸಿದಿದ್ದು, ಸಂಬಂಧಪಟ್ಟ ಎಂಜಿನಿಯರಿಂಗ್ ವಿಭಾಗದವರು ಸರಿಪಡಿಸುವಂತೆ ಶಾಸಕರು ನಿರ್ದೇಶನ ನೀಡಿದರು.

ಈಗಾಗಲೇ ನಿರ್ಮಿಸಿರುವ ಸುತ್ತುಗೋಡೆ ಮತ್ತಷ್ಟು ಬೀಳುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಬೇಕು. ಯಾರಿಗೂ ತೊಂದರೆ ಆಗದಂತೆ ಮುನ್ನೆಚ್ಚರ ವಹಿಸಬೇಕು ಎಂದು ಎ.ಎಸ್.ಪೊನ್ನಣ್ಣ ಸೂಚಿಸಿದರು.

ಬಳಿಕ ಆರ್ಜಿ ಗ್ರಾಮದ ಅನ್ವರುಲ್ ಹುಧಾ ಶಾಲೆಯ ಬಳಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ ಶಾಸಕರು, ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು. ಮುಂದಿನ‌ ದಿನಗಳಲ್ಲಿ ಹೆಚ್ಚಿನ‌ ಮಳೆಯಾಗುವ ಸಾಧ್ಯತೆ ಇರುವುದರಿಂದ ಕಾಮಗಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಎಂಜಿನಿಯರ್‌ಗೆ ಸೂಚಿಸಿದರು.

ನಂತರ ವಿರಾಜಪೇಟೆ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ಭವನದ ಹತ್ತಿರದಲ್ಲಿ ತಡೆಗೋಡೆ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು.‌

ಅಂಬೇಡ್ಕರ್ ಭವನಕ್ಕೆ ತೆರಳುವ ದಾರಿಯಲ್ಲಿಯೇ ಮಣ್ಣು ಬಿದ್ದಿದ್ದು, ಇದನ್ನು ತೆಗೆಯಬೇಕು. ಇಲ್ಲಿನ ಕಾಮಗಾರಿ ನಿರ್ವಹಣೆಗೆ ಈ ಹಿಂದೆ ಏಜೆನ್ಸಿ ಅವರಿಗೆ ನೇರವಾಗಿ 10 ಲಕ್ಷ ರು. ಅನುದಾನ ಬಿಡುಗಡೆ ಆಗಿದೆ. ಈ ಬಗ್ಗೆ ಮಾಹಿತಿ ಒದಗಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚಿಸಿದರು.

ಶಾಸಕರ‌ ಅನುದಾನದಡಿ ಅಂಬೇಡ್ಕರ್ ಭವನ‌ ನಿರ್ಮಾಣದ ಇಂಟರ್‌ಲಾಕ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರು. ಬಿಡುಗಡೆಯಾಗಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ವಿವರಿಸಿದರು.

ಅಂಬೇಡ್ಕರ್ ಭವನ ನಿರ್ವಹಣೆ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ತಹಸೀಲ್ದಾರರು ಮತ್ತು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದರು.

ಬಳಿಕ ವಿರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದಲ್ಲಿ ಮಳೆಯಿಂದ ಹಾನಿಯಾಗಿರುವ ಗೌರಮ್ಮ ಅವರ ಮನೆ ಪರಿಶೀಲಿಸಿದರು.

ಮನೆ ಸಂಪೂರ್ಣ ಹಾನಿಯಾಗಿರುವುದರಿಂದ ಸರ್ಕಾರದ ನಿರ್ದೇಶನದಂತೆ 1.20 ಲಕ್ಷ ರು. ಪರಿಹಾರದ ಹಣ ಕೂಡಲೇ ನೀಡುವಂತೆ ತಹಸೀಲ್ದಾರರಿಗೆ ಶಾಸಕರು ಸೂಚಿಸಿದರು.

ಇದೇ ಸಂದರ್ಭದಲ್ಲಿ ಕುಟುಂಬದವರಿಗೆ ಧೈರ್ಯ ತುಂಬಿದ ಶಾಸಕರು, ವೈಯಕ್ತಿಕವಾಗಿ ಆರ್ಥಿಕ ಸಹಕಾರ ನೀಡಿದರು. ಬಳಿಕ ಮೈತಾಡಿಯಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಸೇತುವೆ ಕಾಮಗಾರಿ ವೀಕ್ಷಿಸಿದರು. ನಂತರ ಸಿದ್ದಾಪುರಕ್ಕೆ ತೆರಳಿದ ಶಾಸಕರು, ಅಲ್ಲಿನ ರಸ್ತೆ ಕಾಮಗಾರಿ ಪರಿಶೀಲಿಸಿ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

ಡಿಸೆಂಬರ್‌ನಲ್ಲೇ ಕಾಮಗಾರಿ ಆರಂಭವಾದರೂ ಸಹ ಇಂದಿಗೂ ಪೂರ್ಣಗೊಳ್ಳದಿರುವುದಕ್ಕೆ ಸ್ಥಳದಲ್ಲಿಯೇ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚರಂಡಿ ನಿರ್ಮಾಣಕ್ಕೆ ಗುಂಡಿ ತೆಗೆಯಲಾಗಿದೆ. ಆದರೆ ಕಾಮಗಾರಿ ಕೈಗೊಂಡಿಲ್ಲ, ನಾಗರಿಕರು ಓಡಾಡುವುದು ಹೇಗೆ ಎಂದು ಸಿಟ್ಟಾದ‌ ಶಾಸಕರು, ಎರಡು‌ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆಂದು ಕಾಮಗಾರಿ ಪಡೆದು, 5 ತಿಂಗಳಾದರೂ ಕೆಲಸ ಪೂರ್ಣಗೊಳಿಸದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ತಹಸೀಲ್ದಾರರಾದ ಅನಂತ ಶಂಕರ, ತಾ.ಪಂ. ಇಒ ಅಪ್ಪಣ್ಣ, ಸೆಸ್ಕ್ ಎಂಜಿನಿಯರ್ ಸುರೇಶ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಲಿಂಗರಾಜು, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಕುಮಾರ ಸ್ವಾಮಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸುಗ್ಗಿ ಸಂಕ್ರಾಂತಿ
ಕೆರೂರು ಗ್ರಾಮಸ್ಥರಿಂದ ರಸ್ತೆ ಅತಿಕ್ರಮಣ ತೆರವಿಗೆ ಗಡುವ ನಿಗದಿ