ಮಂಗಳೂರು: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ವತಿಯಿಂದ ನೋಮಿ ಯೋಜನೆಯ ಪ್ರಾಯೋಜಕತ್ವದಲ್ಲಿ ಹಾಗೂ ಕರ್ನಾಟಕ ನಗರ ಮತ್ತು ಗ್ರಾಮಾಭಿವೃದ್ಧಿ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ ಸಹಯೋಗದೊಂದಿಗೆ ‘ಸೌರಶಕ್ತಿ ಜೀವನೋಪಾಯ ಯೋಜನೆ ಮತ್ತು ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ’ ಕುರಿತ ಮಾಹಿತಿ ಕಾರ್ಯಕ್ರಮ ನಗರದ ಕಂಕನಾಡಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ನಡೆಯಿತು.

ದ.ಕ. ಅಧ್ಯಕ್ಷ ಹರೀಶ್ ಎ. ಅಧ್ಯಕ್ಷತೆ ವಹಿಸಿ ಮಾತನಾಡಿ, ಸೌರಶಕ್ತಿ ಆಧಾರಿತ ಜೀವನೋಪಾಯ ಕೌಶಲ್ಯಗಳು ಇಂದಿನ ಅಗತ್ಯವಾಗಿದ್ದು, ಯುವಕರು ಮತ್ತು ಸಾರ್ವಜನಿಕರು ಇದರ ಬಗ್ಗೆ ಅರಿವು ಪಡೆದು ಸ್ವಉದ್ಯೋಗದತ್ತ ಹೆಜ್ಜೆ ಇಡಬೇಕು. ಸ್ವಯಂಸೇವಾ ಸಂಸ್ಥೆಗಳು ಸೌರಶಕ್ತಿ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಶ್ರಮಿಸಬೇಕೆಂದು ಹೇಳಿದರು.

ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ಸೌರಶಕ್ತಿಯ ಮಹತ್ವ ಮತ್ತು ಸರ್ಕಾರದ ವಿವಿಧ ಯೋಜನೆಗಳ ಕುರಿತು ಸಮಗ್ರ ಮಾಹಿತಿ ಪಡೆದು, ಅದರ ಪ್ರಯೋಜನಗಳನ್ನು ತಳಮಟ್ಟದ ಸಮುದಾಯದ ಜನರಿಗೆ ತಲುಪಿಸುವಲ್ಲಿ ಎನ್‌ಜಿಒ ಸಿಬ್ಬಂದಿ ಸಕ್ರಿಯ ಪಾತ್ರ ವಹಿಸಬೇಕು ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿ ಸೆಲ್ಕೊ ಇಂಡಿಯಾದ ವ್ಯವಸ್ಥಾಪಕ ರವೀನಾ ಬಂಗೇರ, ಡಿಜಿಫ್ಲಿಕ್ ಸಂಸ್ಥೆಯ ಅಧಿಕಾರಿಗಳಾದ ಸತೀಶ್ ಕೆ. ನಾಯರಿ, ಸೂರಜ್ ಎಸ್. ಅವರು ಸೌರಶಕ್ತಿ ಆಧಾರಿತ ಜೀವನೋಪಾಯ ಅವಕಾಶಗಳು, ಸೌರ ವಿದ್ಯುತ್ ವ್ಯವಸ್ಥೆಗಳ ಬಳಕೆ ಹಾಗೂ ಸೂರ್ಯ ಘರ್ ಯೋಜನೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ವಾರ್ಡ್- ಕೆ ಸಂಸ್ಥೆಯ ಕೋಶಾಧಿಕಾರಿ ರೆನ್ನಿ ಪಿ. ಡಿಸೋಜ ಇದ್ದರು. ಡಾ. ಮಂಜುನಾಥ ಎಸ್. ಮೊಕಾಶಿ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಲಿಡಿಯಾ ಲೋಬೊ ವಂದಿಸಿದರು.