ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಚಳವಳಿಗಳಿಂದ ಮಾತ್ರ ಸರ್ಕಾರದ ಧೋರಣೆ ಬದಲಿಸಲು ಸಾಧ್ಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಬಸವರಾಜಪ್ಪ ಹೇಳಿದರು.ನಗರದ ಎಟಿಎನ್‌ಸಿ ಕಾಲೇಜಿನಲ್ಲಿ ಪ್ರೆಂಡ್ಸ್ ಸೆಂಟರ್ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ತಲ್ಲಣಗಳ ಬಗ್ಗೆ ಅವರು ಮಾತನಾಡಿ, ಶಿವಮೊಗ್ಗದಲ್ಲಿ ಸಕ್ಕರೆ ಕಾರ್ಖಾನೆ ಧೋರಣೆ ವಿರುದ್ಧ ಹೋರಾಟ ಮಾಡುವ ಸಲುವಾಗಿ ಕಬ್ಬು ಬೆಳೆಗಾರರ ಸಂಘ ಕಟ್ಟಿ ಹೋರಾಟ ಮಾಡಿ ನಂತರ ರುದ್ರಪ್ಪನವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಕಟ್ಟಿ ಮುಂದೆ ಸುಂದರೇಶ್ ಹಾಗೂ ನಂಜುಂಡಸ್ವಾಮಿ ಹಾಗೂ ಕಡಿದಾಳ್ ಶಾಮಣ್ಣ ಮುಂತಾದವರ ನಾಯಕತ್ವದಲ್ಲಿ ರೈತರು 1980 ಅ.2ರಂದು ಶಿವಮೊಗ್ಗದಲ್ಲಿ 25000 ಜನ ಸೇರಿ ಜೈಲು ಬರೋ ಚಳುವಳಿ ಕೈಗೊಂಡು ದೊಡ್ಡ ಹೋರಾಟ ಕೈ ಗೊಳ್ಳಲಾಯಿತು ಎಂದು ತಿಳಿಸಿದರು.
ಮುಂದೆ ಸರ್ಕಾರ ರೈತರ ಜಮೀನುಗಳ ಪಂಪ್‌ಸೆಟ್‌ಗೆ ವಿದ್ಯುತ್ ಬಿಲ್ ತೆಗೆಯಲಾಯಿತು. ಆಗ ನಡೆದ ದಲಿತ ರೈತ ಮತ್ತು ಭಾಷಾ ಚಳವಳಿಗಳಿಂದಾಗಿ 33 ವರ್ಷಗಳಿಂದ ಇದ್ದ ಕಾಂಗ್ರೆಸ್ ಸರ್ಕಾರ ಬದಲಾಗಿ ಬೇರೆ ಪಕ್ಷ ಅಧಿಕಾರಕ್ಕೆ ಬಂತು. ಇಂದು ರೈತರು ವರ್ಷವೊಂದಕ್ಕೆ ₹30 ಲಕ್ಷ ಕೋಟಿ ಭೂಮಿಗೆ ಬಂಡವಾಳ ಹಾಕುತ್ತಾರೆ. ಪಂಪ್‌ಸೆಟ್‌ಗೆ ₹10 ಲಕ್ಷ ಕೋಟಿ ಬಂಡವಾಳ ಹಾಕುತ್ತಿದ್ದಾರೆ ಎಂದರು.ಸದ್ಯ ರಾಜ್ಯದಲ್ಲಿ ಹಾಲಿ ಉತ್ಪಾದನೆ ಹೆಚ್ಚಾಗಿದ್ದು, ಹೀಗಾಗಿ ಪಾಕೆಟ್ ಹಾಲಿಗೆ 50ಮೀ.ಲೀ. ಹೆಚ್ಚು ಹಾಲನ್ನು ಕೊಟ್ಟು ಅದಕ್ಕೆ ಹೆಚ್ಚುವರಿ 2ರು. ಪಡೆಯಲಾಗುತ್ತಿದೆ. ಇದನ್ನೇ ವಿರೋಧ ಪಕ್ಷಗಳು ಬೆಲೆ ಏರಿಕೆ ಎಂದು ಬೊಬ್ಬೆ ಹೊಡೆಯುತ್ತಿವೆ. ಅಂದರೆ ಈ ಹೆಚ್ಚುವರಿ ಹಾಲನ್ನು ಚೆಲ್ಲಬೇಕಾಗಿತ್ತೇ ಎಂದು ಪ್ರಶ್ನಿಸಿದರು.
ಮೊಬೈಲ್ ರಿಚಾರ್ಜ್ ಮಾಡುವುದಕ್ಕೆ ಏಕಾಏಕಿ 150 ಜಾಸ್ತಿ ಮಾಡಿದ್ದಾರೆ. ಎಲ್ಲಾ ಕೈಗಾರಿಕಾ ವಸ್ತುಗಳ ಬೆಲೆ ಏರಿದೆ. ಆದರೆ, ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ವಿರೋಧ ಪಕ್ಷಗಳ ಈ ರೀತಿ ವರ್ತನೆ ಸರಿ ಅಲ್ಲ. ಕೃಷಿ ಉದ್ಯೋಗ ಲಾಭದಾಯಕವಾಗಿಲ್ಲ. ರೈತ ಬೆಳೆದ ತರಕಾರಿ ಹಣ್ಣುಗಳನ್ನು ರಸ್ತೆಯಲ್ಲಿ ಹಾಕಿ ಮಾರಲಾಗುತ್ತದೆ. ಆದರೆ ಕಾರ್ಖಾನೆ ಉತ್ಪಾದಿಸಿದ ಚಪ್ಪಲಿ ಎಸಿ ರೂಂನಲ್ಲಿ ಮಾರಲಾಗುತ್ತದೆ ಎಂದರು.ಕೃಷಿ ಕಾಯ್ದೆಗಳು ರೈತರ ವಿರೋಧಿಯಾಗಿದ್ದು, ಜಮೀನುಗಳನ್ನು ಕೈಗಾರಿಕೆಯವರು ಕೊಂಡುಕೊಳ್ಳಲು ಅವಕಾಶ ಕೊಟ್ಟರೆ ಭೂಮಿ ಬರಡಾಗುತ್ತದೆ. ಅನ್ನಕ್ಕಾಗಿ ದೇಶ ವಿದೇಶಗಳ ಕಡೆ ಕೈ ಚಾಚಬೇಕಾಗುತ್ತದೆ. ರೈತರು ಸಮಗ್ರ ಸಾವಯವ ಕೃಷಿ ಮಾಡಬೇಕು. ಸರ್ವ ಬೆಳೆ ಬೆಳೆಯಬೇಕು. ಹೈನುಗಾರಿಕೆ ಹಾಗೂ ಕೋಳಿ ಕುರಿಗಳನ್ನು ಸಾಕಿ ರೈತ ಸ್ವಂತ ಕಾಲಮೇಲೆ ನಿಲ್ಲುವಂತಾಗಬೇಕು ಎಂದು ಒತ್ತಾಯಿಸಿದರು.
ಕುವೆಂಪು ಹೇಳಿದಂತೆ ರೈತ ದೇಶದ ಬೆನ್ನೆಲುಬು. ಆದರೆ, ಇಂದು ರಿಪೇರಿ ಆಗದ ಮಟ್ಟಿಗೆ ರೈತನ ಬೆನ್ನೆಲುಬು ಹಾಳಾಗಿದೆ. ರೈತ ಸರ್ಕಾರ ನಂಬದೆ ಸ್ವಂತ ಕಾಲ ಮೇಲೆ ನಿಲ್ಲಬೇಕು. ಈ ಸಬ್ಸಿಡಿ ಹೆಚ್ಚು ದಿನ ಮುಂದುವರೆಯುವುದು ಇಲ್ಲ. ಅದರ ಬದಲಿಗೆ ರೈತ ಸ್ವಾವಲಂಬಿ ಯಾಗಬೇಕು ಎಂದರು.ಕಾರ್ಯಕ್ರಮದಲ್ಲಿ ರೈತ ಸಂಘದ ಪ್ರಮುಖರಾದ ಎಚ್.ಕೆ.ರವಿಶಂಕರ್, ಬಹುಮುಖಿಯ ಡಾ.ಕೆ.ಜಿ.ವೆಂಕಟೇಶ್ ಮತ್ತಿತರರಿದ್ದರು.