ಚೆನ್ನೈ-ಶಿವಮೊಗ್ಗ ನಡುವೆ ಸಾಪ್ತಾಹಿಕ ರೈಲು ಸಂಚಾರಕ್ಕೆ ಶನಿವಾರ ಸಂಜೆ ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಹಸಿರು ನಿಶಾನೆ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಹು ನಿರೀಕ್ಷಿತ ಚೆನ್ನೈ- ಶಿವಮೊಗ್ಗ ನಡುವೆ ಸಾಪ್ತಾಹಿಕ ರೈಲು ಸಂಚಾರಕ್ಕೆ ಶನಿವಾರ ಸಂಜೆ ನಗರದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಹಸಿರು ನಿಶಾನೆ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ಪಕ್ಷಗಳ ಪ್ರಮುಖರು ಪಾಲ್ಗೊಂಡಿದ್ದರು.ವೇಳಾಪಟ್ಟಿ: ಚೆನ್ನೈ ಮತ್ತು ಸತ್ಯಸಾಯಿ ಪ್ರಶಾಂತಿ ನಿಲಯಂ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12691/2 ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಚೆನ್ನೈ-ಶಿವಮೊಗ್ಗ ನಡುವೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.ಈ ರೈಲು ಶುಕ್ರವಾರ ರಾತ್ರಿ 11.30 ಗಂಟೆಗೆ ಚೆನ್ನೈನ ಎಂಜಿಆರ್ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಹೊರಡಲಿದೆ. 12.23ಕ್ಕೆ ಅರಕೋಣಂ, 12.43ಕ್ಕೆ ಶೋಲಿಂಘುರ್ 1.23ಕ್ಕೆ ಕಾಟ್ಟಾಡಿ, 2.54ಕ್ಕೆ ಜೋಲರ್ ಪೆಟ್ಟೈ ಜಂಕ್ಷನ್, 3.45ಕ್ಕೆ ಬಂಗಾರಪೇಟೆ, ಬೆಳಗಿನ ಜಾವ 4.39ಕ್ಕೆ ಕೃಷ್ಣರಾಜಪುರಂ, 5.20ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್, ಬೆಳಗ್ಗೆ 7.38ಕ್ಕೆ ತುಮಕೂರು, 9ಕ್ಕೆ ತಿಪಟೂರು, 9.30ಕ್ಕೆ ಅರಸೀಕೆರೆ, 10ಕ್ಕೆ ಬೀರೂರು, 10.20ಕ್ಕೆ ಕಡೂರು, 10.47ಕ್ಕೆ ತರೀಕೆರೆ, 11. 33ಕ್ಕೆ ಭದ್ರಾವತಿ, ಮಧ್ಯಾಹ್ನ 12.20ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.ಶಿವಮೊಗ್ಗ ಮುಖ್ಯ ರೈಲ್ವೆ ನಿಲ್ದಾಣದಿಂದ ಶನಿವಾರ ಸಂಜೆ 5.15ಕ್ಕೆ ಹೊರಡಲಿರುವ ರೈಲು 5.33ಕ್ಕೆ ಭದ್ರಾವತಿ, 5.53ಕ್ಕೆ ತರೀಕೆರೆ, 6.23ಕ್ಕೆ ಕಡೂರು, 6.34ಕ್ಕೆ ಬೀರೂರು, ರಾತ್ರಿ 7.10ಕ್ಕೆ ಅರಸೀಕೆರೆ, 7.36ಕ್ಕೆ ತಿಪಟೂರು, 8.28ಕ್ಕೆ ತುಮಕೂರು, 10.20ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, 11.10ಕ್ಕೆ ಕೃಷ್ಣರಾಜಪುರಂ, 11.22ಕ್ಕೆ ಬಂಗಾರಪೇಟೆ, 12.27ಕ್ಕೆ ಜೋಲಾರ್ ಪೆಟ್ಟೈ ಜಂಕ್ಷನ್, 1.23ಕ್ಕೆ ಕಾಟ್ಪಾಡಿ, 2.33ಕ್ಕೆ ಶೋಲಿಂಘುರ್, 3.3ಕ್ಕೆ ಅರಕೋಣಂ, ಬೆಳಗಿನ ಜಾವ 4.13ಕ್ಕೆ ಪೆರಂಬೂರು, 4.55ಕ್ಕೆ ಚೆನ್ನೈನ ಎಂಜಿಆರ್ ಸೆಂಟ್ರಲ್ ರೈಲ್ವೆ ನಿಲ್ದಾಣ ತಲುಪಲಿದೆ. ಚೆನ್ನೈ-ಶಿವಮೊಗ್ಗ ನಡುವಿನ ಅಂತರ 631 ಕಿಮೀ ಇದೆ. ಸುಮಾರು 12 ಗಂಟೆ 50 ನಿಮಿಷ ಪ್ರಯಾಣದ ಅವಧಿಯಾಗಿರಲಿದೆ. ಚೆನ್ನೈ- ಶಿವಮೊಗ್ಗ ನಡುವೆ ಸಂಚರಿಸುತ್ತಿರುವ ರೈಲಿನಲ್ಲಿ 22 ಬೋಗಿಗಳು ಇರಲಿವೆ. ಈ ಪೈಕಿ 1 ಎಸಿ ಬೋಗಿ, 2 ಟೈರ ಎಸಿ ಬೋಗಿ, 6 ಮೂರು ಟೈರ್ ಎಸಿ ಬೋಗಿ, 6 ಸ್ಲೀಪರ್ ಬೋಗಿ, 2 ಸೆಕೆಂಡ್ ಸಿಟ್ಟಿಂಗ್ ಬೋಗಿ, 1 ಎಸ್‍ಎಲ್‍ಆರ್ ಹಾಗೂ 1 ಪವರ್ ಕಾರ್ ಬೋಗಿ ಇರಲಿದೆ.ಭವಿಷ್ಯದಲ್ಲಿ ಭದ್ರಾವತಿ ಮಾದರಿ ನಗರ: ಸಂಸದ ಬಿ.ವೈ.ರಾಘವೇಂದ್ರ ಭರವಸೆ
ಭದ್ರಾವತಿ: ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗುವಂತೆ ಮೂಲ ಸೌಕರ್ಯಗಳನ್ನು ಸಹ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡುವ ಮೂಲಕ ಭವಿಷ್ಯದಲ್ಲಿ ಭದ್ರಾವತಿ ನಗರವನ್ನು ಜಿಲ್ಲೆಯಲ್ಲಿಯೇ ಮಾದರಿ ನಗರವನ್ನಾಗಿ ರೂಪಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಶನಿವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಸೌತ್ ವೆಸ್ಟರನ್ ರೈಲ್ವೆ ಮೈಸೂರು ವಿಭಾಗದ ವತಿಯಿಂದ ನೂತನವಾಗಿ ಆರಂಭಗೊಂಡಿರುವ ಶಿವಮೊಗ್ಗ ಟೌನ್ ಟು ಎಂಜಿಆರ್ ಚೆನ್ನೈ ವೀಕ್ಲಿ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.ಸಂಸದನಾಗಿ ೪ ಬಾರಿ ಆಯ್ಕೆಯಾಗಲು ಇಲ್ಲಿನ ಮತದಾರರು ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ ವಾಗಿದೆ. ಕೇವಲ ಕೈಗಾರಿಕೆಗಳಿಗೆ ಮಾತ್ರ ಈ ನಗರ ಸೀಮಿತವಾಗಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಗೊಳಿಸುವ ಮೂಲಕ ಮೂಲ ಸೌಕರ್ಯಗಳಾದ ರಸ್ತೆ, ರೈಲ್ವೆ ಸಂಪರ್ಕಗಳನ್ನು ಉನ್ನತೀಕರಿಸುವ ಮೂಲಕ ಭವಿಷ್ಯದಲ್ಲಿ ಮಾದರಿ ನಗರವನ್ನಾಗಿಸುವ ಗುರಿ ಹೊಂದಿದ್ದೇನೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಆರಂಭ ಗೊಂಡಿರುವ ರೈಲು ಸಂಚಾರಕ್ಕೆ ಇಲ್ಲಿಂದಲೂ ಸಹ ಚಾಲನೆ ನೀಡಲಾಯಿತು ಎಂದರು.
ರೈಲ್ವೆ ಮೈಸೂರು ವಿಭಾಗದ ಅಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಭದ್ರಾವತಿ ರೈಲ್ವೆ ನಿಲ್ದಾಣವನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ನಿಟ್ಟಿನಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.ವಿಧಾನಪರಿಷತ್ ಸದಸ್ಯರಾದ ಡಿ.ಎಸ್ ಅರುಣ್, ಡಾ. ಧನಂಜಯ ಸರ್ಜಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಪ್ರಮುಖರಾದ ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಎನ್. ವಿಶ್ವನಾಥರಾವ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ವಿ. ಕದಿರೇಶ್, ಆರ್. ಕರುಣಾಮೂರ್ತಿ, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಕೆ. ಮಂಜುನಾಥ್, ಚನ್ನೇಶ್, ಅಣ್ಣಪ್ಪ, ಕಾ.ರಾ ನಾಗರಾಜ್, ರಾಜಶೇಖರ್ ಉಪ್ಪಾರ, ಬಾರಂದೂರು ಪ್ರಸನ್ನ, ಹೇಮಾವತಿ ವಿಶ್ವನಾಥ್, ಕವಿತಾರಾವ್ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ, ಶಕ್ತಿ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.