ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದನಗಳ ದೊಡ್ಡಿಯಲ್ಲಿ ಹುಟ್ಟಿದ ಏಸುಕ್ರಿಸ್ತರು ಸಕಲ ಜೀವಿಗಳ ಒಳಿತಿಗಾಗಿ ತಮ್ಮ ಜೀವನ ಮುಡಿಪಿಟ್ಟರು. ಸ್ವತಃ ತನ್ನನ್ನು ಚಿತ್ರಹಿಂಸೆ ಕೊಟ್ಟು ಶಿಲುಬೆಗೇರಿಸುತ್ತಿದ್ದ ಜನರಿಗಾಗಿ ಓ ದೇವರೇ, ಇವರು ಏನು ಮಾಡುತ್ತಿದ್ದಾರೆ ಎಂದು ಇವರಿಗೇ ತಿಳಿದಿಲ್ಲ. ದಯವಿಟ್ಟು ಇವರನ್ನು ಕ್ಷಮಿಸು ಎಂದು ಏಸು ಕ್ರಿಸ್ತ ಪ್ರಾರ್ಥಿಸಿದರು. ಅಂದಿನ ದಿನಗಳಲ್ಲಿಯೇ ಮನುಷ್ಯ ಮನುಷ್ಯರ ನಡುವೆ ಕ್ರೌರ್ಯ ಇತ್ತು. ಅದು ಇಂದಿಗೂ ಮುಂದುವರಿದಿರುವುದು ವಿಷಾಧನೀಯ ಎಂದರು.
ಇಂದಿನ ದಿನಗಳಲ್ಲಿ ನಾವು ಬಡವರ ಬಗ್ಗೆ ಕೀಳಾಗಿ ನೋಡುವ ಮನೋಭಾವ ಬೆಳೆಸಿಕೊಳ್ಳುತ್ತಿರುವುದು ಸರಿಯಲ್ಲ, ದೇವರು ನಮಗೆ ಐಶ್ವರ್ಯ ನೀಡಿದ್ದು, ಅದರಲ್ಲೊಂದು ಭಾಗ ಸಮಾಜದ ಹಿಂದುಳಿದವರಿಗೆ ಹಂಚಿಕೊಳ್ಳಲು ಎಂಬುದನ್ನು ಅರಿತುಕೊಳ್ಳಬೇಕಿದೆ. ಏಸುವಿನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಮಾನವ ಸೇವೆಯೇ ಮಾಧವ ಸೇವೆ ಎಂಬ ಭಾವನೆಯೊಂದಿಗೆ ಬದುಕಬೇಕು. ಮಾನವ ಸೇವೆ ಎಂದರೆ ಕೇವಲ ಹಣಕಾಸಿನ ಸಹಾಯವಲ್ಲ, ಪ್ರೀತಿ, ಸಹಾನುಭೂತಿ ಮತ್ತು ಗೌರವವನ್ನು ಹಂಚಿಕೊಳ್ಳುವುದೂ ಅದರ ಭಾಗವೇ ಎಂದು ಅಭಿಪ್ರಾಯಪಟ್ಟರು.ಸಿಎಸ್ಐ ಚರ್ಚ್ ನ ಫಾದರ್ ರೆವರೆಂಡ್ ಪ್ರವೀಣ್ ಮಾತನಾಡಿ, ಏಸು ಕ್ರಿಸ್ತ ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯ ಸಂದೇಶ ಸಾರಿದರು. ಈ ಹಬ್ಬವು ಸಾಮರಸ್ಯ, ಪ್ರೀತಿ ಮತ್ತು ಸಹಾನುಭೂತಿಯ ಸಂದೇಶವನ್ನು ಸಾರುತ್ತದೆ. ನಾವು ಏಸುಕ್ರಿಸ್ತನ ಬೋಧನೆಗಳನ್ನು ನೆನಪಿಸೋಣ. ಎಲ್ಲರ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವ ಸಂಕಲ್ಪ ಮಾಡೋಣ. ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಏಸು ಕ್ರಿಸ್ತನು ಎಲ್ಲರ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೀಡಲೆಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಚರ್ಚ್ ಮುಂಭಾಗದಲ್ಲಿ ಹಡಗಿನ ಮಾದರಿಯಲ್ಲಿ ನಿರ್ಮಿಸಿದ್ದ ಗೋದಲಿಯಲ್ಲಿ ಸಂಸದ ಡಾ. ಕೆ.ಸುಧಾಕರ್ ಬಾಲ ಏಸು ಕ್ರಿಸ್ತನ ಪ್ರತಿರೂಪ ಪವಡಿಸಿದರು. ನಂತರ ಚರ್ಚ್ ವತಿಯಿಂದ ಸಂಸದರಿಗೆ ಸನ್ಮಾನ ಮಾಡಿ ಗೌರವ ಸಮರ್ಪಿಸಿ, ಕೇಕ್ ನೀಡಿದರು.ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ, ಅರುಣ್, ಶ್ರೀನಿವಾಸ್, ಹೆನ್ರಿ ಪ್ರಸನ್ನ, ಮಂಜಣ್ಣ, ಗೋಪಾಲ್, ದಾಸ್, ಅರಳಪ್ಪ, ಮತ್ತಿತರರು ಇದ್ದರು.