ಯುನೆಸ್ಕೋ ಪಟ್ಟಿಗೆ ಸೇರಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಂಸದರು, ಲಕ್ಕುಂಡಿಯನ್ನು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಒತ್ತಾಯಿಸುವೆ ಎಂದರು.
ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ 18ನೇ ದಿನವಾದ ಗುರುವಾರದ ಉತ್ಖನನ ಕಾರ್ಯವನ್ನು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಅವರು ಭೇಟಿ ನೀಡಿ ಪರಿಶೀಲಿಸಿದರು.ನಂತರ ಮಾತನಾಡಿ ಅವರು, ಲಕ್ಕುಂಡಿ ಐತಿಹಾಸಿಕ ಪರಂಪರೆ ಹೊಂದಿರುವ ತಾಣವಾಗಿದೆ. ಇಲ್ಲಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಅರಿಯಲು ವೈಜ್ಞಾನಿಕ ಉತ್ಖನನ ಪೂರಕವಾಗಿದೆ. ಹಿಂದೆ ಇಲ್ಲಿ ಟಂಕಶಾಲೆ ಇತ್ತು ಎನ್ನುವ ಐತಿಹ್ಯಕ್ಕೆ ಈ ಉತ್ಖನನ ಪುಷ್ಟಿ ನೀಡಲಿದೆ. ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.ತಮಗೆ ದೊರೆತ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ರಿತ್ತಿ ಕುಟುಂಬದವರನ್ನು ಭೇಟಿ ಮಾಡಿ ಅಭಿನಂದಿಸಿದರು. ಆಗ ನಿಧಿ ಹಸ್ತಾಂತರಿಸಿದ ಪ್ರಜ್ವಲ್ ರಿತ್ತಿ ಅವರ ಅಜ್ಜಿ ಗಿರಿಜಮ್ಮ ಮಾತನಾಡಿ, ಸರ್ಕಾರದ ನೆರವು ದೊರಕಿಸುವಂತೆ ತಮ್ಮ ಅಳಲು ತೋಡಿಕೊಂಡರು.
ಬಳಿಕ ಸಂಸದರು ಪ್ರತಿಕ್ರಿಯಿಸಿ, ರಿತ್ತಿ ಕುಟುಂಬಕ್ಕೆ ಸರ್ಕಾರದಿಂದ ಸಲ್ಲಬೇಕಾದ ನ್ಯಾಯಯುತ ಪ್ರೋತ್ಸಾಹಧನವನ್ನು ಕೊಡಿಸಲು ಜಿಲ್ಲಾಧಿಕಾರಿಗಳ ಜತೆ ಚರ್ಚಿಸುವೆ. ವೈಯಕ್ತಿಕವಾಗಿ ಹಾಗೂ ಸಂಸದರ ನಿಧಿಯಿಂದಲೂ ಆ ಕುಟುಂಬಕ್ಕೆ ನೆರವು ನೀಡಲಾಗುವುದು ಎಂದರು.ಯುನೆಸ್ಕೋ ಪಟ್ಟಿಗೆ ಸೇರಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಲಕ್ಕುಂಡಿಯನ್ನು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಒತ್ತಾಯಿಸುವೆ. ಐತಿಹಾಸಿಕ ಸ್ಮಾರಕಗಳ ರಕ್ಷಣೆ ಕೇಂದ್ರ ಪುರಾತತ್ವ ಇಲಾಖೆಯ ಆದ್ಯತೆಯಾಗಿದೆ. ಮನೆಗಳ ತೆರವು, ದೇವಸ್ಥಾನದ ಸುತ್ತಮುತ್ತಲಿನ ಸ್ವಚ್ಛತೆ ಇಲಾಖೆಯ ಜವಾಬ್ದಾರಿ ಅಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಈ ವೇಳೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ, ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.