ಕೊಪ್ಪಳ: ಕಾರ್ಖಾನೆ ತ್ಯಾಜ್ಯದಿಂದ ಜನರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮದ ಕುರಿತು ಶೀಘ್ರದಲ್ಲಿಯೇ ಬಾಧಿತ ಗ್ರಾಮವೊಂದರಲ್ಲಿರುವ ಜನರ ಆರೋಗ್ಯ ತಪಾಸಣೆ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಘಟನೆಯಿಂದ ಆರೋಗ್ಯ ತಪಾಸಣೆ ಮಾಡುವಂತೆ ಈ ಹಿಂದೆಯೇ ಬೇಡಿಕೆ ಇರಿಸಲಾಗಿತ್ತು. ಈ ಕುರಿತು ಸರ್ಕಾರ ನಿರ್ಣಯ ಕೈಗೊಳ್ಳುತ್ತದೆ. ಆದರೆ, ಸ್ಥಳೀಯ ಆರೋಗ್ಯ ಇಲಾಖೆಯ ವೈದ್ಯರ ಮೂಲಕ ಆರೋಗ್ಯ ತಪಾಸಣೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಹಿಂದೆಯೂ ಈ ಕುರಿತು ಆರೋಗ್ಯ ತಪಾಸಣೆ ಮತ್ತು ಕೃಷಿ ಬೆಳೆ ಹಾನಿಯ ಕುರಿತು ಸರ್ವೆಯಾಗಿರುವ ಮಾಹಿತಿ ಇದ್ದು, ಅದರ ವರದಿ ಸಹ ಪರಿಗಣಿಸಲಾಗುವುದು ಎಂದರು.ಈಗಾಗಲೇ ಕೇಂದ್ರ ಪರಿಸರ ಇಲಾಖೆ ಮತ್ತು ರಾಜ್ಯ ಪರಿಸರ ಇಲಾಖೆ ಜಂಟಿಯಾಗಿ ಕಾರ್ಖಾನೆಯ ತ್ಯಾಜ್ಯದಿಂದಾಗ ಹಾನಿಯ ಕುರಿತು ಅಧ್ಯಯನ ಮಾಡಿ ವರದಿ ನೀಡಿದೆ. ಅವರ ವರದಿ ಅನ್ವಯ ಮಾಡಿರುವ ಶಿಫಾರಸುಗಳನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಕುರಿತು ಕ್ರಮ ವಹಿಸಲಾಗುತ್ತಿದೆ. ಈಗಾಗಲೇ ಕೆಲವೊಂದು ಕಾರ್ಖಾನೆಯ ಮಾಲೀಕರು ಜಾರಿ ಮಾಡಿದ್ದರೆ, ಇನ್ನೊಂದಿಷ್ಟು ಮಾಡಬೇಕಾಗಿದೆ ಎಂದರು.
ಬಿಎಸ್‌ಪಿಎಲ್ ವಿಸ್ತರಣೆ ಕಾರ್ಯ ನಡೆದಿಲ್ಲ: ಬಿಎಸ್‌ಪಿಎಲ್ ಕಾರ್ಖಾನೆಯ ವಿಸ್ತರಣೆ ಮಾಡದಂತೆ ಮುಖ್ಯಮಂತ್ರಿ ಅವರು ಮೌಖಿಕವಾಗಿ ಸೂಚನೆ ನಡೆದ ಬಳಿಕ ಮತ್ಯಾವುದೇ ಬೆಳವಣಿಗೆ ನಡೆದಿಲ್ಲ. ಈ ಕುರಿತು ಸದನದಲ್ಲಿಯೇ ಕೈಗಾರಿಕಾ ಸಚಿವರೇ ಉತ್ತರಿಸಿದ್ದಾರೆ. ಇನ್ನು ಕಾರ್ಖಾನೆಯ ಕೆಲಸ ನಡೆದಿರುವ ಆರೋಪ ಇದ್ದರೆ ಖಂಡಿತವಾಗಿಯೂ ಅಧಿಕಾರಿಗಳ ತಂಡದ ವರದಿ ತರಿಸಿಕೊಳ್ಳಲಾಗುವುದು ಎಂದರು.ಬಸಾಪುರ ಕೆರೆಯನ್ನು ಸಾರ್ವಜನಿಕವಾಗಿ ಮುಕ್ತ ಮಾಡಬೇಕು ಎನ್ನುವ ಬೇಡಿಕೆಯ ಕುರಿತು ಪರಿಶೀಲನೆ ನಡೆಸಲಾಗಿದ್ದು, ಈಗಾಗಲೇ ಅದನ್ನು ಸರ್ಕಾರವೇ ಸ್ವಾಧೀನ ಮಾಡಿಕೊಂಡು ನೀಡಿದೆ. ಹೀಗಾಗಿ, ಅಲ್ಲಿ ಯಾವ ರೀತಿ ಕ್ರಮವಹಿಸಬೇಕು ಎಂದು ಸರ್ಕಾರಕ್ಕೆ ಕೇಳಿದ್ದು, ಸರ್ಕಾರದ ಸೂಚನೆಯನ್ನಾಧರಿಸಿ ಮುಂದಿನ ಕ್ರಮವಹಿಸಲಾಗುವುದು ಎಂದರು.
ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕಾರ್ಖಾನೆಯ ತ್ಯಾಜ್ಯದಿಂದ 20 ಗ್ರಾಮಗಳ ಜನರ ಆರೋಗ್ಯ ಹಾಳಾಗಿದೆ. ಅಲ್ಲಿಯ ಕೃಷಿಗೆ ಪೆಟ್ಟುಬಿದ್ದಿದೆ. ಈಗ ಬಿಎಸ್‌ಪಿಎಲ್ ಕಾರ್ಖಾನೆ ಪ್ರಾರಂಭವಾದರೆ ಕೊಪ್ಪಳ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದು ಲಕ್ಷಕ್ಕೂ ಅಧಿಕ ಜನರ ಉಳಿವಿನ ಪ್ರಶ್ನೆಯಾಗಿದೆ. ಆದ್ದರಿಂದ ಈಗಿರುವ ಕಾರ್ಖಾನೆಗಳ ವಿಸ್ತರಣೆಯೂ ಬೇಡ ಮತ್ತು ಮತ್ತೊದು ಕಾರ್ಖಾನೆಯ ಬೇಡ ಎಂದು ಆಗ್ರಹಿಸಿದರು.ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತವಾಗಿಡಲೇಬೇಕು. ಕೆರೆಯನ್ನು ಮಾರಿಕೊಳ್ಳುವುದಕ್ಕೆ ಸರ್ಕಾರಕ್ಕೂ ಅಧಿಕಾರ ಇಲ್ಲ. ಧಾರವಾಡ ಹೈಕೋರ್ಟ್ ನಿರ್ದೇಶನವನ್ನು ಜಿಲ್ಲಾಡಲಿತ ಪಾಲಿಸುವಂತೆ ಆಗ್ರಹಿಸಿದರು.
ಹೋರಾಟಗಾರ ಕೆ.ಬಿ. ಗೋನಾಳ ಮಾತನಾಡಿ, ಜಿಲ್ಲಾಡಳಿತಕ್ಕೆ ಕೆರೆಯ ಕುರಿತು ಸಾಕಷ್ಟು ಬಾರಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೂ ಧಾರವಾಡ ಹೈಕೋರ್ಟ್ ನಿರ್ದೇಶನ ಪಾಲಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.ಹೋರಾಟಗಾರ ಮಂಜುನಾಥ ಗೊಂಡಬಾಳ ಮಾತನಾಡಿ, ಈಗಿರುವ ಕೈಗಾರಿಕೆಗಳಿಂದಲೇ ಸಾಕುಬೇಕಾಗಿದೆ. ಈಗ ಮತ್ತೊಂದು ಕಾರ್ಖಾನೆ ಬೇಡವೇ ಬೇಡ. ಇರುವ ಕಾರ್ಖಾನೆಗಳಿಗೆ ಬಫರ್ ಜೋನ್ ಸಹ ಇಲ್ಲ. ಇದು ಕಾನೂನುಬಾಹಿರ, ಕೇಂದ್ರ ಮತ್ತು ರಾಜ್ಯ ಪರಿಸರ ಇಲಾಖೆಯ ಅಧಿಕಾರಿಗಳು ಮಾಡಿರುವ ಶಿಫಾರಸು ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ, ಜಿಪಂ ಸಿಇಒ ವರ್ಣಿತ್ ನೇಗಿ ಸಹ ಭೇಟಿ ನೀಡಿದ್ದರು.ಚಂದ್ರ ಕವಲೂರು ಅವರು, ಮಂಜುನಾಥ ಅಂಗಡಿ, ಶಿವಕುಮಾರ ಕುಕುನೂರು, ಎ.ಎಂ. ಮದರಿ, ರಮೇಶ ತುಪ್ಪದ, ಸಂತೋಷ ದೇಶಪಾಂಡೆ, ಶರಣು ಶೆಟ್ಟರ, ಕಾಶಪ್ಪ ಚಲುವಾದಿ, ಬಿ.ಜಿ. ಕರಿಗಾರ, ಸಿ.ಬಿ. ಪಾಟೀಲ್, ಗಂಗಾಧರ ಖಾನಾಪುರ, ಪುಷ್ಪಲತಾ ಏಳುಭಾವಿ, ಜ್ಯೋತಿ ಎಂ. ಗೊಂಡಬಾಳ, ಎಸ್. ಬಿ. ರಾಜೂರು, ಯಮನೂರಪ್ಪ ಹಾಲಳ್ಳಿ ಇದ್ದರು.