ಸಿದ್ದಾಪುರ: ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಏಳಿಗೆಯನ್ನು ಕೆಲವರಿಂದ ಸಹಿಸಲಾಗುತ್ತಿಲ್ಲ. ಹಾಗಾಗಿಯೇ ಈ ಷಡ್ಯಂತ್ರ ಹೂಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
ಅವರು ಸ್ಥಳೀಯ ಬಿಜೆಪಿ ಮಂಡಲ ಆಯೋಜಿಸಿದ ಧರ್ಮಸ್ಥಳ ಕ್ಷೇತ್ರದ ಕುರಿತು ನಡೆದ ಷಡ್ಯಂತ್ರ ವಿರೋಧಿಸಿ ಹಾಗೂ ಅದರ ತನಿಖೆಗೆ ಆಗ್ರಹಿಸಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ, ರಾಜ್ಯದ ಪ್ರತಿ ಮಂಡಲದಲ್ಲಿ ಬಿಜೆಪಿಯಿಂದ ಈ ರೀತಿ ಪ್ರತಿಭಟನೆಗಳು ನಡೆದಿವೆ. ಕ್ಷೇತ್ರದ ಕುರಿತು ನಡೆದದ್ದು ಅಂತರಾಷ್ಟ್ರೀಯ ಷಡ್ಯಂತ್ರದ ಒಂದು ಭಾಗ. ನಮ್ಮ ಸನಾತನ ಹಿಂದೂಗಳ ಶಕ್ತಿಯನ್ನು ಅಂತ್ಯಗೊಳಿಸಲು ಹಣದ ರೂಪದಲ್ಲಿ ಷಡ್ಯಂತ್ರ ನಾವು ನೋಡುತ್ತೇವೆ. ಜಾತಿಯ ಹೆಸರಿನಲ್ಲಿ, ಭಾಷಾ ಹೆಸರಿನಲ್ಲಿ ನೀರಿನ ಹೆಸರಿನಲ್ಲಿ ಇನ್ನಿಲ್ಲದ ಭಾವನೆ ಕೆರಳಿಸಿ ಸಮಾಜ ಒಡೆದು ನಮ್ಮ ಭಾರತೀಯರಲ್ಲೇ ಭಿನ್ನಾಭಿಪ್ರಾಯ ಮೂಡಿಸುವಂತಹ ಷಡ್ಯಂತ್ರ ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಕೇರಳದ ಟಿವಿ, ಯುಟ್ಯೂಬ್ ಚಾನೆಲ್‌ಗಳಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಬಹಳ ನಡೆದಿದೆ. ನಾವು ಪ್ರಾರಂಭದಲ್ಲಿ ಸತ್ಯ ಬರಲಿ ಎಂದು ನಿರೀಕ್ಷಿಸಿದ್ದು ಸತ್ಯ. ಯಾರೋ ಒಬ್ಬರು ಫಾರ್ವರ್ಡ್ ಮಾಡಿದ ಮೆಸೇಜನ್ನು ಒಬ್ಬ ವ್ಯಕ್ತಿ ಫಾರ್ವರ್ಡ್ ಮಾಡಿದರೆ ಅವರನ್ನು ಪೊಲೀಸರು ಭಯೋತ್ಪಾದಕರಂತೆ ತನಿಖೆ ಮಾಡುತ್ತಾರೆ. ನಾವೆಲ್ಲ ಒಗ್ಗಟ್ಟಾಗಿ ಎಂತಹ ಪರಿಸ್ಥಿತಿ ಬಂದರೂ ಎದುರಿಸಬೇಕು. ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ಕೊಡಬೇಕೆಂದು ಈಗಾಗಲೇ ಹೇಳಿದ್ದೇವೆ ಎಂದರು.ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಕರೆದಿರುವುದು ಮತ್ತೊಮ್ಮೆ ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನ. ಅವರಿಗೆ ಬೂಕರ್ ಪ್ರಶಸ್ತಿ ದೊರೆತಿರುವುದಕ್ಕೆ ತುಂಬ ಖುಷಿಯಿದೆ. ಸಿದ್ದರಾಮಯ್ಯನವರ ಆಹ್ವಾನವನ್ನು ಬಾನು ಮುಷ್ತಾಕ್ ತಿರಸ್ಕರಿಸಬೇಕು. ಬಾನು ತಮ್ಮ ಮುತ್ಸದ್ಧಿ ಹಾಗೂ ಹಿರಿತನವನ್ನು ತೋರಿಸಬೇಕು ಎಂದರು.
ಜೆಡಿಎಸ್ ಪ್ರಮುಖ ಉಪೇಂದ್ರ ಪೈ ಮಾತನಾಡಿ, ಧರ್ಮದ ಮೇಲೆ ಅಪಪ್ರಚಾರವಾಗುತ್ತಿರುವ ಈ ಸಂದರ್ಭದಲ್ಲಿ ನಾವು ಹಿಂದೂಗಳೆಲ್ಲ ಒಟ್ಟಾಗಬೇಕು. ಧಾರ್ಮಿಕ ಕ್ಷೇತ್ರದಲ್ಲಿ ಹೊರತುಪಡಿಸಿ ಶಿಕ್ಷಣ ಕ್ಷೇತ್ರದಲ್ಲೂ ಶ್ರೀಕ್ಷೇತ್ರ ಧರ್ಮಸ್ಥಳದ ಕೊಡುಗೆ ಅಪಾರವಾಗಿದೆ. ಕಮ್ಯುನಿಸ್ಟ್, ಎಡಪಂಥೀಯ ಮತ್ತು ಅಪಪ್ರಚಾರದಿಂದಾಗಿ ನಮ್ಮಲ್ಲಿ ಒಗ್ಗಟ್ಟು ಇಲ್ಲವಾಗಿದೆ ಎಂದರು.ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯ ಕೆ.ಜಿ. ನಾಯ್ಕ ಮಾತನಾಡಿ, ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳನ್ನು ಅಪವಿತ್ರ ಮಾಡಲು ಅನೇಕ ದುಷ್ಟ ಶಕ್ತಿಗಳು ತೊಡಗಿಕೊಂಡಿವೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ಮಾತನಾಡಿ, ನಾವೆಲ್ಲ ಒಟ್ಟಾಗುವಂತಹ ಪರಿಸ್ಥಿತಿ ಈಗ ಬಂದಿದೆ. ಧರ್ಮಸ್ಥಳದ ಪವಿತ್ರತೆಗೆ ಧಕ್ಕೆ ತರುವ ಹಾಗೂ ಹಿಂದೂಗಳನ್ನು ಒಡೆಯುವ ನಿಟ್ಟಿನಲ್ಲಿ ಷಡ್ಯಂತ್ರ ನಡೆಯುತ್ತಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಕೆಲವು ನೀಚ ರಾಜಕಾರಣಿಗಳಿಂದ ಈ ಕೃತ್ಯ ನಡೆಯಿತು ಎಂದರು.ಪಟ್ಟಣದ ರವೀಂದ್ರನಗರದ ಗಂಗಾಂಬಿಕಾ ದೇವಾಲಯದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ತಹಸೀಲದಾರ ಕಚೇರಿಯೆದುರು ಸಮಾವೇಶಗೊಂಡಿತು. ಪ್ರತಿಭಟನೆಯಲ್ಲಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಧರ್ಮಸ್ಥಳದ ಅಪಾರ ಭಕ್ತರು ಪಾಲ್ಗೊಂಡಿದ್ದರು.