ಬಸ್ ತಂಗುದಾಣಗಳ ನಿರ್ಮಾಣಕ್ಕೆ ಸಂಸದ ಮಂಜುನಾಥ್ ಗುದ್ದಲಿಪೂಜೆ

KannadaprabhaNewsNetwork | Published : May 20, 2025 11:56 PM
ಸಂಸದರ ಕ್ಷೇತ್ರಾಭಿವೃದ್ಧಿ ಹಾಗೂ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಫಂಡ್ ಗಳಿಂದ ಹಲವು ಜನಪರ ಕೆಲಸ ಮಾಡಲಾಗುತ್ತಿದ್ದು, ಮೊದಲಿಗೆ ಶುದ್ಧ ನೀರಿನ ಘಟಕ ಹಾಗೂ ಬಸ್ ತಂಗುದಾಣಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
Follow Us

ಕನ್ನಡಪ್ರಭ ವಾರ್ತೆ ಕನಕಪುರ

ತಾಲೂಕಿನ ಹಲವು ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಯೋಜನೆಗಳಡಿ ಬಸ್ ತಂಗುದಾಣಗಳ ನಿರ್ಮಾಣಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಸಿ. ಎನ್. ಮಂಜುನಾಥ್ ಮಂಗಳವಾರ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ತಾಲೂಕಿನ ಕಸಬಾ ಹೋಬಳಿಯ ಅರಳಲು ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಇತ್ತೀಚೆಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಕನಕಪುರ ತಾಲೂಕಿನ ಹಲವು ಗ್ರಾಮಗಳ ಐದು ಕಡೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಎರಡು ಕಡೆ ಬಸ್ ತಂಗುದಾಣ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುತ್ತಿದ್ದು, ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಸಂಸದರ ಕ್ಷೇತ್ರಾಭಿವೃದ್ಧಿ ಹಾಗೂ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಫಂಡ್ ಗಳಿಂದ ಹಲವು ಜನಪರ ಕೆಲಸ ಮಾಡಲಾಗುತ್ತಿದ್ದು, ಮೊದಲಿಗೆ ಶುದ್ಧ ನೀರಿನ ಘಟಕ ಹಾಗೂ ಬಸ್ ತಂಗುದಾಣಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಿಎಸ್ಆರ್ ಫಂಡ್ ಮತ್ತು ಸ್ಥಳೀಯ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ಸುಮಾರು 3 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ, ಕುಡಿಯುವ ನೀರಿನ ಸಮಸ್ಯೆಗಳು ಕಂಡು ಬಂದ ಗ್ರಾಮಗಳಿಗೆ ಸುಮಾರು ಹದಿನೆಂಟು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ, ಇತ್ತೀಚೆಗೆ ಉತ್ತಮ ಮಳೆಯಾಗುತ್ತಿದ್ದು ಅಂತರ್ಜಲದ ಮಟ್ಟ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಪೂಜ್ಯ ಕರಿಯಪ್ಪನವರ ರೂರಲ್ ಎಜುಕೇಷನ್ ಸೊಸೈಟಿಗೆ ಕೃಷಿ ಕಾಲೇಜು ಬಂದಿದ್ದು, ಭೇಟಿ ನೀಡಿದ ಸಂದರ್ಭದಲ್ಲಿ ಸಂಸ್ಥೆಗೆ ಸಂಸದರ ನಿಧಿಯಿಂದ ಐವತ್ತು ಲಕ್ಷ ರು.ಗಳನ್ನು ಕಳೆದ ಎರಡು ದಿನಗಳ ಹಿಂದೆ ನೀಡಿರುವುದಾಗಿ ತಿಳಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಿ. ನಾಗರಾಜ್, ಯುವ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಚನ್ನಸ್ವಾಮಿ, ದಿಶಾ ಸಮಿತಿ ಸದಸ್ಯರಾದ ರಾಜೇಶ್, ಜಿ. ಪಿ. ಶೋಭಾ, ಶ್ರೀನಿವಾಸ್, ನಗರಸಭಾ ಸದಸ್ಯ ಸ್ಟುಡಿಯೋ ಚಂದ್ರು, ಕಬ್ಬಾಳೇಗೌಡ, ಸಿದ್ದಮರೀಗೌಡ, ರಾಜೇಂದ್ರ, ತಿಮ್ಮೇಗೌಡ, ಶಾಂತಮೇರಿ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ. ಪಿ. ಕುಮಾರ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಮಂಜುನಾಥ್, ಜೆಡಿಎಸ್ ಮುಖಂಡ, ವಕೀಲ ಜಯರಾಮ್, ಕಾಳೇಗೌಡ ಸೇರಿ ಮೈತ್ರಿ ಪಕ್ಷಗಳ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಈ ವೇಳೆ ಹಾಜರಿದ್ದರು.