ಕೊಬ್ಬರಿ ಖರೀದಿಯಲ್ಲಿ ಅಕ್ರಮ: ತನಿಖೆಗೆ ಸಂಸದ ಪಜ್ವಲ್‌ ರೇವಣ್ಣ ಆಗ್ರಹ

KannadaprabhaNewsNetwork | Published : Feb 16, 2024 1:46 AM

ಸಾರಾಂಶ

ನಾಫೆಡ್‌ ಮೂಲಕ ಕೇವಲ ಮೂರು ದಿನಗಳಲ್ಲಿ ೧೫,೫೦೦ ಜನರನ್ನು ನೋಂದಣಿ ಮಾಡಲಾಗಿದೆ. ಇಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಹೆಚ್ಚು ಕೇಳಿಬರುತ್ತಿದ್ದು, ಕೂಡಲೇ ತನಿಖೆಯಾಗಬೇಕು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಆರೋಪಿಸಿದರು. ಗುರುವಾರ ನಡೆದ ದಿಶಾ ಸಭೆಯಲ್ಲಿ ಕೊಬ್ಬರಿ ಖರೀದಿ ಕುರಿತು ಪರಿಶೀಲಿಸಿ ಮಾತನಾಡಿದರು.

3 ದಿನದಲ್ಲಿ 15,500 ಜನರ ನೋಂದಣಿ ಮಾಡಿದ ಅಧಿಕಾರಿಗಳು । ರೈತ ಬದಲಿಗೆ ವರ್ತಕರ ನೇಮಕ । ರೈತರ ಪಟ್ಟಿ ಬಿಡುಗಡೆಗೆ ಒತ್ತಾಯ ಕನ್ನಡಪ್ರಭ ವಾರ್ತೆ ಹಾಸನ

ನಾಫೆಡ್‌ ಮೂಲಕ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಯಲ್ಲಿ ರೈತರ ಬದಲಾಗಿ ವರ್ತಕರನ್ನು ಹೆಚ್ಚು ನೋಂದಣಿ ಮಾಡಲಾಗಿದೆ. ಕೇವಲ ಮೂರು ದಿನಗಳಲ್ಲಿ ೧೫,೫೦೦ ಜನರನ್ನು ನೋಂದಣಿ ಮಾಡಲಾಗಿದೆ. ಇಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಹೆಚ್ಚು ಕೇಳಿಬರುತ್ತಿದ್ದು, ಕೂಡಲೇ ತನಿಖೆಯಾಗಬೇಕು. ಮುಂದಿನ ಸಭೆಯಲ್ಲಿ ಫಲಾನುಭವಿ ರೈತರ ಪಟ್ಟಿಯನ್ನು ನೀಡಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಸೂಚಿಸಿದರು.

ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ನಡೆದ ದಿಶಾ ಸಭೆಯಲ್ಲಿ ಕೊಬ್ಬರಿ ಖರೀದಿ ಕುರಿತು ಪರಿಶೀಲಿಸಿ ಮಾತನಾಡಿದರು. ಈಗಾಗಲೇ ಹಾಸನ ಜಿಲ್ಲೆಯಲ್ಲಿ ಕೊಬ್ಬರಿ ಖರೀದಿ ಕೇಂದ್ರ ತೆರೆದು ನೋಂದಾವಣಿ ಕಾರ್ಯ ನಡೆಯುತ್ತಿದೆ. ಆದರೆ ಇಲ್ಲಿ ಅಕ್ರಮ ನಡೆಸಲಾಗಿದೆ. ವರ್ತಕರಿಂದ ಕೊಬ್ಬರಿ ಖರೀದಿ ನಡೆಸಲಾಗಿದೆ ಎಂದು ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿದ್ದ ಎಪಿಎಂಸಿ ಅಧಿಕಾರಿ ಶ್ರೀಹರಿ ಅವರಿಗೆ ಪ್ರಶ್ನೆ ಮಾಡಿದರಲ್ಲದೆ ಯಾರಿಂದ ಕೊಬ್ಬರಿ ಖರೀದಿ ಮಾಡಲಾಗಿದೆ ಎಂಬ ಬಗ್ಗೆ ಫೆ.16 ರಂದು ನಡೆಯುವ ಸಭೆಯಲ್ಲಿ ಫಲಾನುಭವಿಗಳ ಪಟ್ಟಿ ಕೊಡಬೇಕು. ರೈತರ ಹೆಸರಿನಲ್ಲಿ ಬೇರೆ ಯಾರಿಂದಲಾದರೂ ಕೊಬ್ಬರಿ ಖರೀದಿ ಆಗಿದ್ದರೆ ತನಿಖೆ ಮಾಡಿ ಅವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

‘ಕೊಬ್ಬರಿ ಖರೀದಿ ಹಗರಣದ ಬಗ್ಗೆ ನಾನೇ ದೂರು ನೀಡುತ್ತೇನೆ. ಕೇಸ್ ದಾಖಲು ಮಾಡಿ, ಇಲ್ಲವೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಿ’ ಎಂದು ಸಭೆಯಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಹಗರಣದಲ್ಲಿ ಅಧಿಕಾರಿಗಳೇ ಭಾಗಿ ಆಗಿದ್ದಾರೆ. ಹಣ ಪಡೆದು ನಕಲಿ ಕಾರ್ಡ್ ನೀಡಿದ್ದಾರೆ. ನಾಫೆಡ್ ಖರೀದಿ ಕೇಂದ್ರದವರು ಫೋನ್ ಮಾಡಿದ ಕೂಡಲೇ ಏಕೆ ಪೊಲೀಸರನ್ನು ಹಿಂದಕ್ಕೆ ಕಳುಹಿಸುತ್ತಾರೆ. ಹಿಂದೆ ಮುಂದೆ ಯೋಚನೆ ಮಾಡುವುದಿಲ್ಲ ಎಂದು ಸಿಡಿಮಿಡಿಗೊಂಡರು.

ಸಕಲೇಶಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬಿಎಸ್‌ಎನ್‌ಎಲ್ ಟವರ್ ಅಳವಡಿಸುವ ನಿಟ್ಟಿನಲ್ಲಿ ಅನುಮತಿಗಾಗಿ ಅರಣ್ಯ ಇಲಾಖೆಗೆ ಆನ್‌ಲೈನ್ ಮುಖಾಂತರ ಮನವಿ ಸಲ್ಲಿಸುವಂತೆ ನಿರ್ದೇಶನ ನೀಡಿದರು. ಅಂಚೆ ಇಲಾಖೆಯಲ್ಲಿರುವ ಸವಲತ್ತುಗಳ ಕುರಿತು ಗ್ರಾಮೀಣ ಜನತೆಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ರೈಲ್ವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನದ ಅವಶ್ಯಕತೆ ಇದ್ದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದರು. ಹಂಗರಹಳ್ಳಿ ರೈಲ್ವೆ ಬ್ರಿಡ್ಜ್ ಬಳಿ ರೈತರಿಗೆ ತೊಂದರೆಯಾಗದಂತೆ ಪೈಪ್‌ಲೈನ್ ದುರಸ್ತಿಪಡಿಸಲು ಸೂಚಿಸಿದರು. ಆಲೂರಿನಲ್ಲಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಲು ಹೆಚ್ಚಿನ ಪ್ರಚಾರ ನೀಡುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ದಿಶಾ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಡಿಎಫ್‌ಒ ಸೌರಭ್ ಕುಮಾರ್, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಪರಪ್ಪಸ್ವಾಮಿ ಇದ್ದರು.ಹಾಸನದಲ್ಲಿ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅಧ್ಯಕ್ಷತೆಯಲ್ಲಿ ದಿಶಾ ಸಭೆ ನಡೆಯಿತು.

Share this article