ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮುಂಗಾರು ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಪರಿಶೀಲಿಸಲು ಜೆಡಿಎಸ್‌ನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ಜೆಡಿಎಸ್ ಶಾಸಕರು ಬುಧವಾರ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಬರದಿಂದ ಸಂಭವಿಸಿರುವ ಹಾನಿಯನ್ನು ವೀಕ್ಷಿಸಿ ರೈತರೊಂದಿಗೆ ಚರ್ಚೆ ನಡೆಸಿದರು.ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕರುಗಳಾದ ಎಚ್.ಡಿ.ರೇವಣ್ಣ, ಸಿ.ಎನ್. ಬಾಲಕೃಷ್ಣ ,ಎ.ಮಂಜು, ಎಚ್.ಪಿ.ಸ್ವರೂಪ್, ನೇತೃತ್ವದ ತಂಡವು ತಾಲೂಕಿನ ಕಸಬಾ ಹೋಬಳಿ ಗೌಡಗೆರೆ ಗ್ರಾಮಕ್ಕೆ ಭೇಟಿ ನೀಡಿತ್ತು. ಗೌಡಗೆರೆ ಗ್ರಾಮದ ರೈತ ಸರೋಜಮ್ಮ ಎಂಬುವರ ಜಮೀನಿಗೆ ಭೇಟಿ ನೀಡಿ, ೧.೧೩ ಎಕರೆ ಪ್ರದೇಶದಲ್ಲಿ ಬೆಳೆದ ರಾಗಿ ಬೆಳೆ ಮತ್ತು ಸುತ್ತಮುತ್ತಲಿನ ರೈತರ ಜಮೀನಿನಲ್ಲಿ ಮಳೆ ಇಲ್ಲದೇ ಒಣಗಿ ನಿಂತ ಜೋಳ, ರಾಗಿ, ಮುಸುಕಿನ ಜೋಳ ಹಾನಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಿದರು. ಮಳೆ, ಬೆಳೆ ಇಲ್ಲದೆ ರೈತರ ಸಂಕಷ್ಟದ ವಾಸ್ತವ ಸ್ಥಿತಿಯ ಪ್ರತ್ಯಕ್ಷ ದರ್ಶನವೂ ಜನಪ್ರತಿನಿಧಿಗಳಿಗೆ ಎದುರಾಯಿತು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ರೈತರು ಸಂಕಷ್ಟ್ಟದಲ್ಲಿರುವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿ, ದರ ನಿಗದಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಇದರಿಂದ ರೈತ ಸಮುದಾಯಕ್ಕೆ ತೊಂದರೆಯಾಗಲಿದ್ದು, ಅಕ್ಟೋಬರ್ ೨೨ರಂದು ಹೊಸ ನೋಟಿಫಿಕೇಷನ್ ಜಾರಿ ತಂದಿದ್ದು, ಕೃಷಿಭೂಮಿಗೆ ವಿದ್ಯುತ್ ಸಂಪರ್ಕ ಪಡೆಯಲು ರೈತರು ಟಿ.ಸಿ ಅಳವಡಿಕೆಗೆ ಹಣ ಪಾವತಿಸಬೇಕು ಮತ್ತು ಕೊಳವೆಬಾವಿ ನಿರ್ಮಿಸಲು ಸರಾಸರಿ ೭ ಲಕ್ಷ ರು.ಗಳ ಹೊರೆ ರೈತನ ತಲೆ ಮೇಲೆ ಬಂದಿದ್ದು, ರೈತರು ಭೂಮಿ ಮಾರಿಕೊಂಡು ಒಕ್ಕಲೆಬ್ಬಿಸುವ ಕುತಂತ್ರವಾಗಿದೆ ಎಂದು ಕಿಡಿಕಾರಿದರು.ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ರಾಜ್ಯದಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ರೈತರ ಬದುಕು ಆತಂತ್ರ ಸ್ಥಿತಿ ತಲುಪಿದೆ, ಈ ಭಾಗದಲ್ಲಿ ಬಿತ್ತಿದ ಬೆಳೆಗಳೆಲ್ಲಾ ಸಂಪೂರ್ಣ ಹಾಳಾಗಿವೆ. ರೈತರು ಬೆಳೆ ಕಳೆದುಕೊಂಡು ಮೇವು ದೊರೆಯದೆ ಸಂಕಷ್ಟ ಸ್ಥಿತಿಯಲ್ಲಿ ಇದ್ದಾರೆ, ಅದರೆ ಇಲ್ಲಿಯವರೆಗೂ ರಾಜ್ಯ ಸರ್ಕಾರದ ಯಾವುದೇ ಮಂತ್ರಿಗಳು ರೈತರ ಜಮೀನಿಗೆ ಭೇಟಿ ಕೊಟ್ಟಲ್ಲ, ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ, ತಾಲೂಕಿನಾದ್ಯಂತ ೨೫.೫೦೦ ಹೆಕ್ಟೇರ್‌ನಲ್ಲಿ ರಾಗಿ ಮತ್ತು ಹೈಬ್ರೀಡ್ ಮುಸುಕಿನ ಜೋಳ ಬಿತ್ತನೆಯಾಗಿದ್ದು ಸಂಪೂರ್ಣ ಬೆಳೆ ಹಾನಿಯಾಗಿ ನಷ್ಟ ಉಂಟಾಗಿದೆ. ಎನ್‌ಡಿಆರ್‌ಎಫ್ ನಿಯಮದಂತೆ ಶೇ. ೫ರಷ್ಟು ಪರಿಹಾರ ನೀಡಿದರು ೨೧.೪೩ ಕೋಟಿ ರು. ಪರಿಹಾರ ನೀಡಬೇಕಾಗುತ್ತದೆ ಎಂದರು.
ಮಾಜಿ ಸಚಿವ ಎಚ್ ಡಿ ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ ೧.೫೪.೭೯೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿ ೧೩೧ ಕೋಟಿ ರು. ನಷ್ಟವಾಗಿದೆ. ಎನ್‌ಡಿಆರ್‌ಎಫ್ ನಿಯಮಾನುಸಾರ ಪರಿಹಾರ ನೀಡಿದರೆ ರೈತರು ಖರ್ಚು ಮಾಡಿದ ಶೇ.೫ರಷ್ಟು ಹಣ ನೀಡಿದಂತಾಗುತ್ತದೆ. ರಾಜ್ಯದವರು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿ, ತಮ್ಮ ಪಾಡಿಗೆ ತಾವು ಚುನಾವಣೆ ನಡೆಸಲು ಹೋಗಿದ್ದಾರೆ. ೧೩೬ ಶಾಸಕರು ತೆಲಂಗಾಣದಲ್ಲಿ ಎಲೆಕ್ಷನ್ ಮಾಡಲು ಹೋಗಿದ್ದಾರೆ. ಇಲ್ಲಿ ಆಪರೇಷನ್ ಹಸ್ತ ಮಾಡುತ್ತಿದ್ದಾರೆ. ನೀವು ಏನಾದರೂ ಮಾಡಿಕೊಳ್ಳಿ ರಾಜ್ಯದ ರೈತರನ್ನು ಉಳಿಸಿ ಎಂದ ಆಗ್ರಹ ಮಾಡಿ, ಈ ಸರ್ಕಾರ ಪಾಪರ್ ಬಿದ್ದಿದೆ. ಪರಿಹಾರ ಕೊಡಲು ಆಗಲ್ಲ ಅಂತ ಹೇಳಿ, ನಾವು ತಿರುಪತಿ ವೆಂಕಟರಮಣಸ್ವಾಮಿ ಗೋವಿಂದ ಹಾಕ್ತಿವಿ ಅಷ್ಟೆ ಎಂದು ಲೇವಡಿ ಮಾಡಿದರು.ಸಿದ್ದರಾಮಯ್ಯ ಹಾಸನ ಜಿಲ್ಲೆಗೆ ಬಂದಾಗ ೧೨ ಕೋಟಿ ಕೊಟ್ಟಿದ್ದೇವೆ ಎಂದೇಳಿ ಹೋದರು, ಗೈಡ್‌ಲೈನ್ಸ್ ಪ್ರಕಾರ ಒಂದು ಬಿಡಿಗಾಸು ಖರ್ಚು ಮಾಡಲು ಆಗಲ್ಲ, ಎಲ್ಲಾ ತಾಲೂಕುಗಳಿಗೂ ಸೇರಿ ೪ ಕೋಟಿ ರು. ಕೊಟ್ಟಿದ್ದಾರೆ, ೮ ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿ ಇದೆ. ಜಿಲ್ಲಾಧಿಕಾರಿ ೮ಕೋಟಿ ಹಣವನ್ನು ಟ್ರಂಕ್‌ನಲ್ಲಿ ಇಟ್ಟುಕೊಂಡು ದಿನ ಅದಕ್ಕೆ ಪೂಜೆ ಮಾಡುತ್ತಾವರೆ. ಶಾಸಕರು ದಿನ ತಹಸೀಲ್ದಾರ್ ಆಫೀಸ್ ತಿರುಗಬೇಕಾದ ದರ್ದು ಬಂದಿದೆ ಎಂದರು. ಶಾಸಕ ಎ.ಮಂಜು ಮಾತನಾಡಿದರು, ಸ್ವರೂಪ್ ಪ್ರಕಾಶ್ ಸೇರಿದಂತೆ ತಹಸೀಲ್ದಾರ್ ಬಿಎಮ್ ಗೋವಿಂದರಾಜ, ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಆರ್ ಹರೀಶ್ ಕೃಷಿ ಇಲಾಖೆ, ಉಪ ನಿರ್ದೇಶಕ ಜನಾರ್ದನ್ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
* ಹೇಳಿಕೆ-1:ಸಾಮಾಜಿಕ ನ್ಯಾಯದಡಿ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಬೇಕು. ಈಗೀನ ಜಾತಿಗಣತಿ, ಸಮೀಕ್ಷೆ ಅವೈಜ್ಞಾನಿಕವಾಗಿದೆ. ಈಗಾಗಲೇ ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ಸಭೆ ನಡೆಸಿದ್ದಾರೆ. ವರದಿ ವಿರೋಧಿಸಿ ಸರ್ಕಾರದ ಉಪಮುಖ್ಯಮಂತ್ರಿಗಳು, ದೇವೇಗೌಡರು, ಎಸ್.ಎಂ.ಕೃಷ್ಣ ಸೇರಿದಂತೆ ಎಲ್ಲರೂ ಸಹಿ ಹಾಕಿರುವ ಪತ್ರ ತಲುಪಿಸಲಾಗಿದೆ. ಸಮೀಕ್ಷೆ ನೈಜವಾಗಿರಬೇಕು ಹಾಗಾಗಿ ಗ್ರಾ.ಪಂ.ಯಿಂದ ಸಮೀಕ್ಷೆ ನಡೆಸಬೇಕು. ಪೂರ್ಣ ವರದಿಯೊಂದಿಗೆ ಘೋಷಣೆ ಮಾಡಬೇಕು, ಈ ಮೂಲಕ ಎಲ್ಲಾ ವರ್ಗದವರಿಗೂ ನ್ಯಾಯ ಸಿಗಬೇಕು, ಅವೈಜ್ಞಾನಿಕ ವರದಿ ಅನುಷ್ಠಾನ ಮಾಡಬಾರದು, ಒಳ್ಳೆಯ ದೃಷ್ಟಿಯಲ್ಲಿ, ಪಾರದರ್ಶಕವಾದ ಜನಗಣತಿ ಘೋಷಣೆ ಮಾಡಲಿ.
- ಸಿ.ಎನ್.ಬಾಲಕೃಷ್ಣ, ಶಾಸಕ