ಹೂವಿನಹಡಗಲಿ: ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ. ಪ್ರಕಾಶ ಜಾತಿ ರಾಜಕೀಯ, ಮಠಗಳ ಸ್ವಾಮೀಜಿಗಳ ದುರುಪಯೋಗ ಪಡಿಸಿಕೊಂಡಿದ್ದರೆ ಅವರು ರಾಜಕೀಯದಲ್ಲಿ ಬಹಳ ಎತ್ತರಕ್ಕೆ ಬೆಳೆಯುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರಕಾಶರು ನನಗೆ ಸ್ನೇಹಿತರು ಅಷ್ಟೇ ಅಲ್ಲ ಆತ್ಮೀಯರೂ ಆಗಿದ್ದರು. ನನಗಿಂತ 6 ವರ್ಷ ದೊಡ್ಡವರು. ಅವರ ಕಂಚಿನ ಪುತ್ಥಳಿ ಅನಾವರಣ ನನ್ನ ಸೌಭಾಗ್ಯ. ರಾಜಕಾರಣದಲ್ಲಿ ಓದಿದವರ ಸಂಖ್ಯೆ ಕಡಿಮೆ. ಎಲ್ಲ ರಂಗದಲ್ಲಿ ನೈಪುಣ್ಯ ಹೊಂದಿದ್ದರು. ಈ ಸಜ್ಜನ ರಾಜಕಾರಣಿ ಸಮಯ ಸಿಕ್ಕಾಗೆಲ್ಲ ಕೈಯಲ್ಲಿ ಪುಸ್ತಕ ಹಿಡಿದು ಓದುವ ಹವ್ಯಾಸವಿತ್ತು. ವೈಚಾರಿಕ, ವೈಜ್ಞಾನಿಕತೆ ಹೊಂದಿದ್ದರು. ಇಂತಹ ವ್ಯಕ್ತಿಯನ್ನು ನಾವು ಕಳೆದುಕೊಂಡು ಅವರ ಕುಟುಂಬಕ್ಕೆ ಅಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.
ನನ್ನ ಜನ್ಮ ದಿನವನ್ನು ಹೆಡ್ ಮಾಸ್ಟರ್ ಬರೆದಿದ್ದಾರೆ. ನನ್ನ ಅಪ್ಪ, ಅಮ್ಮ ಇಬ್ಬರೂ ಅನಕ್ಷರಸ್ಥರಾಗಿದ್ದರು. ಸ್ವಾತಂತ್ರ್ಯ ಬರುವ ಮುನ್ನವೇ ಹುಟ್ಟಿದ್ದ ಎಂದು ನಮ್ಮಪ್ಪ ಹೇಳಿದ್ದರು. ಅದನ್ನೇ ಮಾಸ್ಟರ್ ಬರೆದಿದ್ದಾರೆಂದು ನಗು ನಗುತ್ತಲೇ ಮಾತನಾಡಿದರು.ಅಜಾತ ಶತ್ರುವಾಗಿದ್ದ ಪ್ರಕಾಶರು ನನಗಿಂತ ಮೊದಲು ಶಾಸಕರಾಗಿ ಸಚಿವರಾಗಿದ್ದರು. ಇಬ್ಬರೂ ಸೋಷಿಯಲಿಸ್ಟ್ ಪಾರ್ಟಿಯಲ್ಲಿ ಇದ್ದೆವು. ಇಂದಿನ ರಾಜಕೀಯದಲ್ಲಿ ಪ್ರಾಮಾಣಿಕ ರಾಜಕಾರಣಿಯಾಗಿ ಉಳಿಯುವುದು ಬಹಳ ಕಷ್ಟ. ಪ್ರಕಾಶರಷ್ಟು ಬುದ್ಧಿವಂತ ನಾನಲ್ಲ. ಆದರೆ ಅವರಿಗಿಂತ ಮೊದಲು ನಾನು ಉಪ ಮುಖ್ಯಮಂತ್ರಿಯಾಗಿದ್ದೇನೆಂದು ಭಾವುಕವಾಗಿ ಮಾತನಾಡಿದರು.
ರೆಡ್ಡಿಯಿಂದ ಇಲ್ಲಸಲ್ಲದ ಹೇಳಿಕೆ:
ಪರಿಶುದ್ಧ ರಾಜಕಾರಣಿ ಎಂ.ಪಿ.ಪ್ರಕಾಶರು ಮುಖ್ಯಮಂತ್ರಿಯಾಗಿಬೇಕಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಅವರು, ಮೈಸೂರ ದಸರಾ ಉತ್ಸವ ರೀತಿಯಲ್ಲಿ ಹಂಪಿ ಉತ್ಸವ ಮಾಡಬೇಕೆಂಬ ಅವರ ಆಶಯ ಈಡೇರಿಸಿದ್ದರು. ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಎಂ.ಪಿ.ಪ್ರಕಾಶರ ಹೆಸರಿಡಬೇಕೆಂದು ನಾನು ಕೂಡ ಸರ್ಕಾರಕ್ಕೆ ಪತ್ರ ಬರೆಯುತ್ತೇನೆಂದು ಹೇಳಿದರು.