ಕನ್ನಡಪ್ರಭ ವಾರ್ತೆ ಕೆಜಿಎಫ್
ಹೊರ ಗುತ್ತಿಗೆ ಆಧಾರದ ಮೇರೆಗೆ ದುಡಿಯುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸಬೇಕು, ವೇತನ ಪರಿಷ್ಕರಣೆಗೊಳಿಸಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟು ಅನಿರ್ಧಿಷ್ಟಾವಧಿ ಮುಷ್ಕರ ಬಿಇಎಂಎಲ್ ಹೊರಗುತ್ತಿಗೆ ಕಾರ್ಮಿಕರು ನಗರದ ಪೈಲೈಟ್ಸ್ ವೃತ್ತದಲ್ಲಿ ಹೋರಾಟ ಪ್ರಾರಂಭಿಸಿ ೪ನೇ ದಿನಕ್ಕೆ ಕಾಲಿಟ್ಟಿದ್ದ ಹಿನ್ನಲೆಯಲ್ಲಿ ಸಂಸದ ಮಲ್ಲೇಶಬಾಬು ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರನ್ನು ಸಂತೈಸುವ ಕೆಲಸಕ್ಕೆ ಮುಂದಾದರು.
ಕಾರ್ಮಿಕರ ಅಹವಾಲುಗಳನ್ನು ಆಲಿಸಿದ ಸಂಸದ ಮಲ್ಲೇಶಬಾಬು ಮಾತನಾಡಿ, ನೀವು ಬಿಇಎಂಎಲ್ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಕೆಲಸ ಮಾಡುತ್ತಿದ್ದು, ನಿಮ್ಮನ್ನು ಕಾಯಂಗೊಳಿಸಲು ಸಾಧ್ಯವಾಗುವುದಿಲ್ಲ. ನಿಮ್ಮನ್ನು ಕಾಯಂಗೊಳಿಸಲು ಮುಂದಾದರೆ ಇತರೆ ಸರ್ಕಾರಿ ಕಾರ್ಖಾನೆಗಳಲ್ಲಿ ಗುತ್ತಿಗೆ ಆದಾರದ ಮೇರೆಗೆ ದುಡಿಯುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸಬೇಕಾದ ಪರಿಸ್ಥಿತಿ ಬರಲಿದ್ದು, ಆದು ಸಾಧ್ಯವಾಗದ ಮಾತು. ನಾನು ನಿಮ್ಮಲ್ಲಿ ಸುಳ್ಳು ಆಶ್ವಾಸನೆಗಳನ್ನು ನೀಡಿ ಹೋಗುವುದು ನನಗೆ ಇಷ್ಟವಾಗುವುದಿಲ್ಲ. ಕಾರ್ಮಿಕರ ವೇತನ ಪರಿಷ್ಕರಣೆಗೊಳಿಸಬೇಕಿದ್ದು ಹೊರ ಗುತ್ತಿಗೆ ಪಡೆದಿರುವ ಕಂಪನಿಯ ಅಧಿಕಾರಿಗಳು ಹಾಗೂ ಬೆಮೆಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಮತ್ತು ಇದೇ ತಿಂಗಳ ೧೩ ರಂದು ಉಪ ಚುನಾವಣೆ ಇರುವುದರಿಂದ ಚುನಾವಣೆ ನಂತರ ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ, ರಕ್ಷಣಾ ಸಚಿವರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ, ಅದು ೧ ತಿಂಗಳು ಅಥವಾ ಇನ್ನೂ ಹೆಚ್ಚು ದಿನಗಳಾಗಹುದು. ಆದ್ದರಿಂದ ಪ್ರತಿಭಟನೆ ಕೈಬಿಡುವುದು ಅಥವಾ ಮುಂದುವರೆಸುವುದರ ಬಗ್ಗೆ ನೀವು ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.ಸಿಎಂಡಿಯೊಂದಿಗೆ ನೀವು ಮಾತುಕತೆ ನಡೆಸಿ, ನಿಮ್ಮ ಉತ್ತರಕ್ಕಾಗಿ ನಾವು ಕಾಯುತ್ತೇವೆ ಎಂದು ಕಾರ್ಮಿಕರು ದೃಢವಾಗಿ ನಾವು ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.