ಮಲೆನಾಡು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಈ ಬಾರಿ ಸುರಿದ ಭಾರಿ ಮಳೆಯಿಂದಾಗಿ ಅಡಕೆ ಬೆಳೆಗೆ ಇನ್ನಿಲ್ಲದ ಕೊಳೆ ರೋಗ ಕಾಣಿಸಿಕೊಂಡಿದ್ದು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶೇ.50ಕ್ಕೂ ಅಧಿಕ ಫಸಲು ನಷ್ಟವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಬೇಕಿದ್ದ ಸರ್ಕಾರ, ಜಿಲ್ಲೆಯ ಶಾಸಕರು, ಸಂಸದರು ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಲೆನಾಡು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್ ಆರೋಪಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಏಪ್ರಿಲ್‌ನಿಂದ ಆರಂಭಗೊಂಡ ಮಳೆ ಅಕ್ಟೋಬರ್‌ವರೆಗೂ ಮುಂದುವರಿದಿರುವ ಕಾರಣ ನೆಲ ತೇವಗೊಂಡು ಅಡಕೆಗೆ ಎಲೆಚುಕ್ಕಿ ರೋಗ ಹರಡಿರುವುದು ಅತಂಕಕ್ಕೆ ಕಾರಣವಾಗಿದೆ. ಜೊತೆಗೆ ಕೊಳೆ ರೋಗ ದಿಂದ ಫಸಲು ತುಂಬಿದ್ದ ಕೊನೆಗಳು ಬರಿದಾಗಿದೆ. ಅತೀ ಹೆಚ್ಚು ಮಳೆ ಬೀಳುವ ಬಸರೀಕಟ್ಟೆ, ಹೆದ್ಸೆ ಮುಂತಾದ ಕಡೆಗಳಲ್ಲಿರುವ ತೋಟದಲ್ಲಿರುವ ಅಡಕೆ ಮರದಲ್ಲಿ ಕೊನೆಗಳೇ ಇಲ್ಲದಂತಾಗಿದೆ. ಅಡಕೆಗೆ ಉತ್ತಮ ಧಾರಣೆ ಇದ್ದರೂ ಫಸಲು ಇಲ್ಲದೆ ನಷ್ಟ ಅನುಭವಿಸುವಂತಾಗಿದೆ. ಎರಡು ವರ್ಷಗಳ ಹಿಂದೆ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಬೆಂಗಳೂರಿನಲ್ಲಿ ಸಂಘಟನೆಯಿಂದ ಭೇಟಿ ಮಾಡಿ ಎಲೆಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿಯಲು ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ ಪರಿಣಾಮ ₹೪೩ ಲಕ್ಷ ಬಿಡುಗಡೆಗೊಳಿಸಿತ್ತು. ಅಂದಿನಿಂದ ಇಲ್ಲಿವರೆಗೆ ಕೈಗೊಂಡ ಸಂಶೋಧನೆ ಫಲಿತಾಂಶದ ಬಗ್ಗೆ ವಿಜ್ಞಾನಿಗಳೂ ಯಾವುದೇ ಮಾಹಿತಿ ನೀಡಿಲ್ಲ. ಪರಿಣಾಮ ರೈತರು ವಿಜ್ಞಾನಿಗಳ ಮೇಲಿಟ್ಟಿದ್ದ ಭರವಸೆ ಕಳೆದುಕೊಂಡಿದ್ದಾರೆ. ಸಂಘಟನೆಯಿಂದ ಶಾಸಕ ರಾಜೇಗೌಡರ ಮೂಲಕ ತೋಟಗಾರಿಕೆ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಗಂಭೀರತೆ ಕುರಿತು ಚರ್ಚಿಸಲು ಕಳೆದ 2 ವರ್ಷಗಳಿಂದ ಪ್ರಯತ್ನಿಸಿದರೂ ಶಾಸಕರು ಸ್ಪಂದಿಸದೆ ಅಡಕೆ ಬೆಳೆಗಾರರ ಸಂಕಷ್ಟದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಂಘಟನೆಯಿಂದ ಅಡಕೆ ಸಮಸ್ಯೆ ಕುರಿತು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ಗಮನ ನಾಲ್ಕಾರು ಬಾರಿ ಸೆಳೆಯಲಾಗಿತ್ತು. ಅವರು ವಾರದಲ್ಲೇ ರೈತರೊಂದಿಗೆ ಅಧಿಕಾರಿಗಳು, ವಿಜ್ಞಾನಿಗಳ ಸಭೆ ಕರೆಯುವ ಆಶ್ವಾಸನೆ ನೀಡಿದ್ದರೂ ಇದೂವರೆಗೂ ಯಾವುದೂ ಕಾರ್ಯಗತವಾಗಿಲ್ಲ.ಕೇಂದ್ರ ಸರ್ಕಾರ ಎಲೆಚುಕ್ಕಿ ರೋಗದ ರೈತರಿಗೆ ಪರಿಹಾರ ವಿತರಿಸಲು ₹೬೦ ಕೋಟಿ ಬಿಡುಗಡೆ ಮಾಡಿದ್ದರೂ ರೈತರಿಗೆ ಹಂಚಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಳೆದ ವರ್ಷ ಕೂಡ ಸರ್ಕಾರ ಅತಿವೃಷ್ಟಿಗೆ ಯಾವುದೇ ಪರಿಹಾರ ನೀಡದೆ ಕಡೆಗಣಿಸಿದೆ. ತಕ್ಷಣ ಜಿಲ್ಲೆ ಶಾಸಕರು ತೋಟಗಾರಿಕೆ ಸಚಿವರ ಗಮನ ಸೆಳೆದು ರೈತರಿಗೆ ಪರಿಹಾರ ಕಲ್ಪಿಸುವಂತೆ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.(ಬಾಕ್ಸ್)ಎರಡು ತಾಲೂಕುಗಳಲ್ಲಿ ಅಂದಾಜು ನಷ್ಟ ₹28 ಕೋಟಿ
ಗ್ರಾಮ ಸಹಾಯಕರು, ತೋಟಗಾರಿಕೆ ಇಲಾಖೆ ಸಾಂಬಾರು ಮಂಡಳಿ ಜಂಟಿಯಾಗಿ ಸಮೀಕ್ಷೆ ನಡೆಸಿದ್ದು ಈ ಬಾರಿ ಸುರಿದ ಬಾರಿ ಮಳೆಯಿಂದ ಕೊಪ್ಪ ತಾಲೂಕಿನಲ್ಲಿ 100070 ರೈತರ ಸುಮಾರು ₹11.5 ಕೋಟಿ ಮೌಲ್ಯದ 5107 ಹೆಕ್ಟೇರ್ ಅಡಕೆ ಹಾಗೂ 6480 ರೈತರ ಸುಮಾರು ₹7 ಕೋಟಿ ಮೌಲ್ಯದ 3065 ಹೆಕ್ಟೇರ್ ಕಾಳುಮೆಣಸು ಬೆಳೆಗೆ ಹಾನಿಯಾಗಿದೆ. ನರಸಿಂಹರಾಜ ಪುರ ತಾಲೂಕಿನಲ್ಲಿ ಸುಮಾರು 7500 ಹೆಕ್ಟೇರ್‌ನಲ್ಲಿ ₹17 ಕೋಟಿ ಮೌಲ್ಯದ ಅಡಕೆ ಹಾಗೂ ಕಾಳುಮೆಣಸು ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ವರದಿ ಸಲ್ಲಿಸಿದೆ. ಆದರೆ ಪ್ರಕೃತಿ ವಿಕೋಪದ ಅಡಿ ಅಡಕೆ ಕೊಳೆ ರೋಗಕ್ಕೆ ಪರಿಹಾರ ನೀಡುವುದು ಅಸಾದ್ಯ ಎನ್ನುವುದು ಅಧಿಕಾರಿಗಳ ಹೇಳಿಕೆಯಾಗಿದೆ.೧೧ಬಿಎಚ್‌ಆರ್ ೧: ತಲವಾನೆ ಪ್ರಕಾಶ್