ಬೆಳ್ತಂಗಡಿ: ಜನರ ಬೇಡಿಕೆ ಮೇರೆಗೆ ಶೀಘ್ರದಲ್ಲಿ 7 ಕೋಟಿ ರು.ಗೂ ಅಧಿಕ ಮೌಲ್ಯದ ಎಂಆರ್ ಐ ಸ್ಕ್ಯಾನಿಂಗ್ ಮೆಷಿನ್ ನ್ನು ಅಳವಡಿಸಲಾಗುವುದು ಎಂದು ಉಜಿರೆ ಎಸ್ ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಹೇಳಿದರು.
ಲಾಭದ ದೃಷ್ಟಿ ಇಲ್ಲದೆ ಗ್ರಾಮೀಣ ಜನರಿಗೆ ಸೇವೆ ನೀಡಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರು ಉಜಿರೆಯಲ್ಲಿ ಆರಂಭಿಸಿರುವ ಆಸ್ಪತ್ರೆ ವತಿಯಿಂದ ಪ್ರಸಕ್ತ ವರ್ಷ 5 ಕೋಟಿ ರು.ಗೂ ಅಧಿಕ ಮೊತ್ತದ ಉಚಿತ ಔಷಧ ಹಾಗೂ ಚಿಕಿತ್ಸೆ, ಉಚಿತ ಶಿಬಿರ ಇತ್ಯಾದಿ ವೈದ್ಯಕೀಯ ಸೇವೆಗಳನ್ನು ಬಡ ರೋಗಿಗಳಿಗೆ ನೀಡಲಾಗಿದೆ ಎಂದರು.
ಸತತ ಎರಡನೇ ಬಾರಿ ಆಸ್ಪತ್ರೆಗೆ ಎನ್ ಎಬಿಎಚ್ ಮಾನ್ಯತೆ ದೊರೆತಿದೆ. 2025 ಜ.1ರಿಂದ ಉಚಿತ ಡಯಾಲಿಸಿಸ್ ಯೋಜನೆಯನ್ನು ಪ್ರಾರಂಭಿಸಿದ್ದು, ಪ್ರತಿ ರೋಗಿಗೆ ತಿಂಗಳಿಗೆ 24 ಸಾವಿರ ರು.ಗೂ ಅಧಿಕ ಉಳಿತಾಯವಾಗುತ್ತದೆ. ನವೆಂಬರ್ವರೆಗೆ 6,834 ಉಚಿತ ಡಯಾಲಿಸಿಸ್ ನೀಡಲಾಗಿದ್ದು, ಇದಕ್ಕೆ ಒಂದು ಕೋಟಿ ರು.ಗಿಂತ ಅಧಿಕ ವೆಚ್ಚವಾಗಿದೆ.ಆಸ್ಪತ್ರೆ ವತಿಯಿಂದ ವಿಮಾ ಸೌಲಭ್ಯಗಳು, ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ಉಚಿತ ವೈದ್ಯಕೀಯ ಸೇವೆ ಇತ್ಯಾದಿ ನೀಡಲಾಗುತ್ತಿದೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ ವಿಶ್ವದಲ್ಲೇ ಮೊದಲ ಬೆನ್ನುಮೂಳೆ ಗಡ್ಡೆ ಮತ್ತು ಡ್ಯೂರಲ್ ದುರಸ್ತಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಇದರ ಜತೆ ವಕ್ರಪಾದ, ಲ್ಯಾಪ್ರೋಸ್ಕೋಪಿಕ್, ಮಕ್ಕಳಿಗೆ ಲಾಪ್ರೊಸ್ಕೋಪಿಕ್ ಅಪೆಂಡಿಸೈಟಿಸ್, ಕ್ಯಾನ್ಸರ್ ಸರ್ಜರಿ ಮೊದಲಾದ ವಿಶಿಷ್ಟ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂದರು.
ವೈದ್ಯಕೀಯ ಅಧಿಕ ದೇವೇಂದ್ರ ಕುಮಾರ್ ಪಿ., ಮುಖ್ಯ ವೈದ್ಯಾಧಿಕಾರಿ ಸಾತ್ವಿಕ್ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಫೈನಾನ್ಸ್ ಆಫೀಸರ್ ನಾರಾಯಣ ಬಿ. ನಿರೂಪಿಸಿದರು.