ಮೃತನ ಹೆಸರಲ್ಲಿ ಮುಡಾ ಜಾಗ ಡಿನೋಟಿಫೈ: ಎಚ್‌.ಡಿ.ಕುಮಾರಸ್ವಾಮಿ

KannadaprabhaNewsNetwork | Updated : Jul 14 2024, 12:48 PM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತಾಗಿದ್ದು, ಮೃತಪಟ್ಟವರ ಹೆಸರಲ್ಲಿ ಜಮೀನು ಡಿ-ನೋಟಿಫಿಕೇಷನ್‌ ಆಗಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

 ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತಾಗಿದ್ದು, ಮೃತಪಟ್ಟವರ ಹೆಸರಲ್ಲಿ ಜಮೀನು ಡಿ-ನೋಟಿಫಿಕೇಷನ್‌ ಆಗಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಜೆಡಿಎಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಗರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಅವರು ಪ್ರದರ್ಶಿಸಿದರು. ಈ ವೇಳೆ ಮಾತನಾಡಿ, ಮುಡಾ ಹಗರಣವನ್ನು ನ್ಯಾಯಾಲಯದ ಮುಂದೆ ಕೊಂಡೊಯ್ಯುವ ಮೂಲಕ ತಾರ್ಕಿಕ ಅಂತ್ಯ ಕಾಣಿಸಬೇಕಿದೆ. ಜಮೀನು ಡಿ-ನೋಟಿಫಿಕೇಷನ್‌ ಬಳಿಕ ನಾಲ್ಕು ವರ್ಷ ಯಾವುದೇ ಬೆಳವಣಿಗೆಯೇ ನಡೆದಿಲ್ಲ. ಮೈಸೂರಿನ ಕೆಸರೆ ಬಳಿಯ ಜಮೀನಿಗೆ ಮುಡಾ ಭೂಸ್ವಾಧೀನ ಮಾಡಿ ಪರಿಹಾರ ನೀಡಿದೆ. ಮುಡಾಗೆ ಸೇರಿದ ಜಮೀನನ್ನು ಡಿನೋಟಿಫಿಕೇಷನ್‌ ಮಾಡಿ ಖರೀದಿಸಿರುವ ಹಿನ್ನೆಲೆಯಲ್ಲಿ ಇದು ಕಾನೂನು ಬಾಹಿರವಾಗಿದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಪತ್ನಿಗೆ ದಾನ ಮಾಡಿದಾಗ ಕೃಷಿ ಭೂಮಿ ಎಂದು ತೋರಿಸಲಾಗುತ್ತದೆ. ಆದರೆ, ಆ ಜಾಗವನ್ನು ಭೂ ಪರಿವರ್ತನೆ ಮಾಡಲಾಗಿತ್ತು. ಜಮೀನಿನ ಹಿನ್ನೆಲೆಯನ್ನು ಯಾರೂ ಪರಿಶೀಲಿಸಿಲ್ಲ. ಭೂಮಿ ಬದಲಾವಣೆಯಾದಾಗ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದರು? ಜಮೀನಿನ ಮೂಲದಾರರು ಲಿಂಗ ಅಲಿಯಾಸ್ ಜವರ ಎಂದಿದ್ದು, ಜಮೀನನ್ನು 1992ರಲ್ಲಿ ಮುಡಾ ತನ್ನ ವಶಕ್ಕೆ ಪಡೆಯುವ ನೋಟಿಫಿಕೇಷನ್ ಹೊರಡಿಸಿತ್ತು. 1995ರಲ್ಲಿ ಜಮೀನಿನ ಅಂತಿಮ ಭೂಸ್ವಾಧೀನದ ನೋಟಿಫಿಕೇಷನ್ ಆಗಿದೆ. ಆದರೂ 1998ರಲ್ಲಿ ಲಿಂಗನ ಹೆಸರು ಬಂದು ಡಿ-ನೋಟಿಫಿಕೇಷನ್ ಮಾಡಲಾಗಿದೆ. ಈ ಜಮೀನು ಡಿ-ನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿಯಾಗಿದ್ದರು ಎಂದು ಹೇಳಿದರು.

ಸರ್ಕಾರದಿಂದಲೇ ಚಂದಶೇಖರ್ ಜೀವ ಹರಣ:  ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣ ವಿಚಾರವಾಗಿ ಮಾತನಾಡಿದ ಅವರು, ನಿಗಮದ ಅಧಿಕಾರಿ ಚಂದ್ರಶೇಖರ್ ಅವರದ್ದು ಆತ್ಮಹತ್ಯೆಯಲ್ಲ. ಬದಲಿಗೆ ಅದು ಕಾಂಗ್ರೆಸ್‌ ಸರ್ಕಾರವೇ ಮಾಡಿರುವ ಕೊಲೆಯಾಗಿದೆ. ಆಡಳಿತದಲ್ಲಿ ಬಿಗಿ ಇದ್ದಿದ್ದರೆ ಇದು ಆಗುತ್ತಿರಲಿಲ್ಲ. ಚುನಾವಣಾ ನೀತಿ ಸಂಹಿತೆ ಇರುವ ಸಂದರ್ಭದಲ್ಲಿಯೇ 94 ಕೋಟಿ ರು. ವರ್ಗಾವಣೆಯಾಗಿದೆ. ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಡೆತ್‌ನೋಟ್ ಇಲ್ಲದಿದ್ದರೆ ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕುತ್ತಿತ್ತು ಎಂದು ಟೀಕಾಪ್ರಹಾರ ನಡೆಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಸುಮಾರು 20 ಬ್ಯಾಂಕ್ ಖಾತೆಗಳಿಗೆ ಕೋಟಿ ಕೋಟಿ ಹಣ ಹೋಗಿದೆ. ಅವೆಲ್ಲವು ಬೇನಾಮಿ ಖಾತೆಗಳಾಗಿವೆ. ಲೋಕಸಭಾ ಚುನಾವಣೆ ನೀತಿ ಜಾರಿಯಾದ ಸಂದರ್ಭದಲ್ಲಿ ಹಣ ವರ್ಗಾವಣೆಯಾಗಿದೆ. ಪರಿಶಿಷ್ಟ ಸಮಾಜದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ದರೋಡೆ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಟಿ.ಎ.ಶರವಣ, ಶಾಸಕ ಶರಣಗೌಡ ಕಂದಕೂರ ಇತರರು ಉಪಸ್ಥಿತರಿದ್ದರು.

Share this article