ಮುದ್ದಾಪುರ ಹಲ್ಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪಾದಯಾತ್ರೆ

KannadaprabhaNewsNetwork |  
Published : Mar 09, 2026, 02:30 AM IST
ಕಂಪ್ಲಿಯಲ್ಲಿ ಡಿವೈಎಸ್‌ಪಿ ಪ್ರಸಾದ್ ಕೆ. ಗೋಖಲೆಯವರಿಗೆ ದಲಿತ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಕರಿಯಪ್ಪ ಗುಡಿಮನಿ, ವಸಂತರಾಜ ಕಹಳೆ, ಇ. ಧನಂಜಯ, ನೀಲಪ್ಪ ಪೇಂಟರ್, ಯಮುನಾ, ಶೋಭಾ ಸೇರಿದಂತೆ ಇತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಫೆ.11ರಂದು ನಡೆದ ಹಲ್ಲೆ ಪ್ರಕರಣದಲ್ಲಿ ಯುವಕ ರಸಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.

ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಫೆಬ್ರವರಿ 11ರಂದು ರಸಿಕ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ಕರ್ನಾಟಕ ಜನಶಕ್ತಿ ಹಾಗೂ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

ಈ ಸಂಬಂಧ ನಂ.10 ಮುದ್ದಾಪುರ ಗ್ರಾಮದಿಂದ ಕಂಪ್ಲಿವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಸಿದ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಕಂಪ್ಲಿ ಪೊಲೀಸ್ ಠಾಣೆಗೆ ಆಗಮಿಸಿ ಡಿವೈಎಸ್‌ಪಿ ಪ್ರಸಾದ್ ಕೆ. ಗೋಖಲೆಯವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ, ಫೆ.11ರಂದು ನಡೆದ ಹಲ್ಲೆ ಪ್ರಕರಣದಲ್ಲಿ ಯುವಕ ರಸಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಪೊಲೀಸ್ ಸಿಬ್ಬಂದಿ ಕುಮ್ಮಕ್ಕಿನಿಂದ 13 ಜನ ದಲಿತರ ವಿರುದ್ಧ ಕೌಂಟರ್ ಕೇಸ್ ದಾಖಲಿಸಿರುವುದು ಖಂಡನೀಯವಾಗಿದೆ. ಆ ಪ್ರಕರಣವನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.ಹಲ್ಲೆ ಆರೋಪಿತರಿಗೆ ಸಹಕಾರ ನೀಡಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ಸುಳ್ಳು ಪ್ರಕರಣದಲ್ಲಿ ಸಿಲುಕಿದ 13 ದಲಿತರಿಗೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ನೇರ ಸಾಲ ಸೌಲಭ್ಯ ಒದಗಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿಫಾರಸು ಮಾಡಬೇಕು. ಗ್ರಾಮದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ನಂ.10 ಮುದ್ದಾಪುರ ಗ್ರಾಮದಲ್ಲಿ ಶಾಂತಿ ಸಭೆ ನಡೆಸುವ ಮೂಲಕ ಸಮನ್ವಯ ಸಾಧಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಪ್ರಸಾದ್ ಕೆ. ಗೋಖಲೆ ಮಾತನಾಡಿ, ಯುವಕನ ಮೇಲಿನ ಹಲ್ಲೆ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ಕೌಂಟರ್ ಕೇಸ್ ದಾಖಲಾದ ವಿಚಾರವನ್ನು ನಾಗರಿಕ ಹಕ್ಕುಗಳ ಜಾರಿ ಕೋಶ (ಸಿಆರ್‌ಇ ಸೆಲ್) ತನಿಖೆ ನಡೆಸುತ್ತಿದೆ. ಪ್ರಕರಣದ ಪಾರದರ್ಶಕ ತನಿಖೆಗೆ ಅಗತ್ಯ ದಾಖಲೆಗಳು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದ್ದು, ತನಿಖೆಗೆ ಬೇಕಾದ ಮಾಹಿತಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಹಲ್ಲೆ ಪ್ರಕರಣದಲ್ಲಿ ಆರೋಪಿತರಿಗೆ ಸಹಕಾರ ನೀಡಿದರೆಂಬ ಆರೋಪ ಎದುರಿಸುತ್ತಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ತನಿಖೆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಪದಾಧಿಕಾರಿಗಳಾದ ವಸಂತರಾಜ ಕಹಳೆ, ಇ.ಧನಂಜಯ, ನೀಲಪ್ಪ ಪೇಂಟರ್, ಶಾಂತಪ್ಪ ಪೂಜಾರಿ, ಯಮುನಾ, ಶೋಭಾ, ಚನ್ನಮಲ್ಲಮ್ಮ, ಎಮ್ಮಿಗನೂರು ಜಡೆಪ್ಪ, ಮುದ್ದಾಪುರ ರಾಮಚಂದ್ರ, ಕುಮಾರಸ್ವಾಮಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುತ್ತೂಟ್ ಫಿನ್‌ಕಾರ್ಪ್‌ನ ವಡಗಾಂವ ಶಾಖೆಯಲ್ಲಿ ಮಹಿಳಾ ದಿನಾಚರಣೆ
‘ಥ್ಯಾಂಕ್ಸ್‌ ಅಪ್ಪ’ ಕಾದಂಬರಿ ಪ್ರತಿ ಮನೆಯಲ್ಲೂ ಇರಲಿ: ನ್ಯಾ.ಸಂತೋಷ್‌