ಮುದ್ದೇಬಿಹಾಳ ಬಂದ್‌ ಸಂಪೂರ್ಣ ಯಶಸ್ವಿ

KannadaprabhaNewsNetwork |  
Published : Nov 01, 2025, 03:15 AM IST
ಮುದ್ದೇಬಿಹಾಳ ಪಟ್ಟಣದ ವಿವಿಧ ದಲಿತಪರ ಹಾಗೂ ಇತರೆ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ವಿವಿಧ ದಲಿತಪರ ಹಾಗೂ ಇತರೆ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಮುದ್ದೇಬಿಹಾಳ ಬಂದ್‌ ಸಂಪೂರ್ಣ ಯಶಸ್ಸು ಕಂಡಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿರುವುದು, ತಾಲೂಕಿನ ಬನೋಶಿ ಗ್ರಾಮದ ಅಪ್ರಾಪ್ತೆಯ ಆತ್ಮ ಹತ್ಯೆ ಘಟನೆ ಸೇರಿದಂತೆ ಮೈಸೂರು ಹಾಗೂ ಚಾಮರಾಜನಗರದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಮೂರ್ತಿಗಳಿಗೆ ಅವಮಾನ ಮಾಡಿದ ಘಟನೆಗಳನ್ನು ಖಂಡಿಸಿ ವಿವಿಧ ದಲಿತಪರ ಹಾಗೂ ಇತರೆ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಮುದ್ದೇಬಿಹಾಳ ಬಂದ್‌ ಸಂಪೂರ್ಣ ಯಶಸ್ಸು ಕಂಡಿದೆ.

ಪಟ್ಟಣದ ಡಾ.ಅಂಬೇಡ್ಕರ್‌ ವೃತ್ತದಿಂದ ಬೆಳಗ್ಗೆ 9 ಗಂಟೆಗೆ ಮೆರವಣಿಗೆ ಪ್ರಾರಂಭಿಸಿದ ಪ್ರತಿಭಟನಾಕಾರರು, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ದಲಿತ ಮುಖಂಡರಾದ ಹರೀಶ ನಾಟಿಕಾರ, ಚನ್ನಪ್ಪ ವಿಜಯಕರ, ಶಾಂತಗೌಡ ಪಾಟೀಲ(ನಡಹಳ್ಳಿ) ಮಲ್ಲಣ್ಣ ತಂಗಡಗಿ, ಪರುಶುರಾಮ ಕೊಣ್ಣೂರ ಆಕ್ರೋಶ ವ್ಯಕ್ತಪಡಿಸಿದರು.

ಕಲಾಪ ನಡೆಯುತ್ತಿದ್ದಾಗ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಹಿರಿಯ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿರುವುದು ಖಂಡನೀಯ. ವಕೀಲನ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ಇತ್ತೀಚಿಗೆ ತಾಲೂಕಿನ ಬನೋಶಿ ಗ್ರಾಮದ ದಲಿತ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದು ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಾಗಿದೆ. ಬುದ್ಧ ಹಾಗೂ ಅಂಬೇಡ್ಕರ್ ಮೂರ್ತಿಗಳಿಗೆ ಅವಮಾನ ಮಾಡಿರುವುದು ಸಂವಿಧಾನದ ತತ್ವಗಳಿಗೆ ವಿರೋಧವಾಗಿದೆ. ಈ ಮೂರು ಘಟನೆಗಳು ಸಮಾಜದ ಶಾಂತಿ, ನ್ಯಾಯ ಮತ್ತು ಸಮಾನತೆಯ ತತ್ವಗಳ ಮೇಲೆ ದಾಳಿ ಮಾಡಿದಂತಿವೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ವ್ಯಕ್ತಿಗಳು ದೇಶದ ಜನರು ಶಾಂತವಾಗಿ ಬದುಕುವುದನ್ನು ಸಹಿಸಲ್ಲವೆನ್ನುಸುತ್ತದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದಲಿತರ ಮೇಲೆ ನಿರಂತರ ದೌರ್ಜನ್ಯದಂತ ಪ್ರಕರಣಗಳು ನಡೆಯುತ್ತಿರುವುದು ನೋವಿನ ಸಂಗತಿ. ಈ ಕುರಿತು ಸಮಾಜಘಾತುಕ ಕೆಲಸದಲ್ಲಿ ತೊಡಿಗಿಕೊಳ್ಳುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಹೋರಾಟ ಯಾವ ರಾಜಕೀಯ ವ್ಯಕ್ತಿಯ ವಿರುದ್ಧವಾಗಲಿ ಅಥವಾ ಪಕ್ಷದ ವಿರುದ್ಧವಾಗಲಿ ಅಲ್ಲ, ಸಾಮಾಜಿಕವಾಗಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಜಾತ್ಯಾತೀತ, ಪಕ್ಷಾತೀತವಾಗಿ ಹೋರಾಟ ನಡೆಸಲಾಗುತ್ತಿದೆ. ಈ ಹೋರಾಟಕ್ಕೆ ಕೈ ಜೋಡಿಸಿದ ಪಟ್ಟಣದ ಎಲ್ಲ ನಾಗರಿಕರಿಗೆ, ಹಿರಿಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಬಂದ್‌ಗೆ ಸಹಕರಿಸಿದ ವ್ಯಾಪಾರಸ್ಥರು:

ಬಂದ್‌ ಹಿನ್ನೆಲೆಯಲ್ಲಿ ದಲಿತ ಮುಖಂಡ ಹರೀಶ ನಾಟಿಕಾರ ಹಾಗೂ ವಿವಿಧ ಮುಖಂಡರು ಗುರುವಾರ ಪಟ್ಟಣದ ಬಹುತೇಕ ಎಲ್ಲ ಅಂಗಡಿಗಳಿಗೆ ತೆರಳಿ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಗುಲಾಬಿ ಹೂ ಕೊಟ್ಟು ಮುದ್ದೇಬಿಹಾಳ ಬಂದ್‌ಗೆ ಸಹಕರಿಸುವಂತೆ ಕರೆ ನೀಡಿದ್ದ ಹಿನ್ನೆಲೆ ಶುಕ್ರವಾರ ಬೆಳಗ್ಗೆಯಿಂದ ಕಿರಾಣಿ ವ್ಯಾಪಾರಸ್ಥರು, ವಿವಿಧ ಅಂಗಡಿ ಮಾಲೀಕರು, ಎಪಿಎಂಸಿ ವರ್ತಕರು ಸೇರಿದಂತೆ ಎಲ್ಲ ಮುಖಂಡರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಬಂದ್‌ಗೆ ಸಹಕರಿಸಿದರು.

ಕೆಎಸ್‌ಆರ್‌ಟಿಸಿ ವಾಹನಗಳು ಸೇರಿದಂತೆ ಖಾಸಗಿ ವಾಹಾನಗಳ ಓಡಾಟವಿಲ್ಲದೇ ಪ್ರಯಾಣಿಕರು ಪರದಾಡುವಂತಾಯಿತು. ಬಸ್ ನಿಲ್ದಾಣಗಳಲ್ಲಿ ಬಸ್‌ ಓಡಾಟವಿಲ್ಲದೇ, ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿತ್ತು. ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಹಾಗೂ ಸಿಪಿಐ ಮಹಮ್ಮದ ಫಸಿವುದ್ದಿನ, ಪಿಎಸೈ ಸಂಜಯಕುಮಾರ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ಒದಗಿಸಲಾಗಿತ್ತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡಡ್‌ ಅಳವಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.

ಮುಖಂಡರಾದ ಪ್ರಶಾಂತ ಕಾಳೆ, ಪ್ರಕಾಶ ಸರೂರ, ಬಲಬೀಮ ನಾಯಕಮಕ್ಕಳ, ವಿರೇಶ ಭಜಂತ್ರಿ, ಮಲ್ಲು ತಳವಾರ, ಗುಂಡಪ್ಪ ನಾಲತವಾಡ, ಮಂಜು ಕಟ್ಟಿಮನಿ, ರಾಜು ಗುಬ್ಬೇವಾಡ, ಸಂಗಮೇಶ ನಾಲತವಾಡ, ಸಂಗಮೇಶ ಚಲವಾದಿ, ಮುತ್ತು ಚಲವಾದಿ, ಆನಂದ ದೇವೂರ, ಆನಂದ ಗಂಗೂರ, ಬಸವರಾಜ ಸರೂರ, ಹೋಳೆಪ್ಪ ಮಾದರ, ಶಿವು ಕನ್ನೋಳ್ಳಿ, ಪರುಶುರಾಮ ಬಸರಕೋಡ, ದೇವೇಂದ್ರ ಡೊಂಕಮಡು, ಅರವಿಂದ ತಿಳಗೋಳ, ಯಮ್ಮನಪ್ಪ ಹಂಗರಗಿ, ರೇವಣೇಪ್ಪ ಅಜಮನಿ ಸೇರಿದಂತೆ ಹಲವರಿದ್ದರು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!