ಬಾಗಲಕೋಟೆ : ನವೆಂಬರ್ ಕ್ರಾಂತಿ ಏನೂ ಇಲ್ಲ. ಓನ್ಲಿ ಶಾಂತಿ. ನಮ್ಮ ಪಕ್ಷ, ಸರ್ಕಾರಕ್ಕೆ ಒಳ್ಳೆಯದನ್ನು ಬಯಸಿ ಇನ್ನೂ ಮಾಡಬೇಕಿರುವ ಕೆಲಸ ಬಹಳಷ್ಟಿದೆ. ಅದರ ಬಗ್ಗ ಚರ್ಚೆ ಮಾಡೋಣ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಪಕ್ಷದ ಆಂತರಿಕ ವಿಚಾರ, ಆ ಜವಾಬ್ದಾರಿ ಜಾಗದಲ್ಲಿ ನಾನಿಲ್ಲ. ಅದರ ಬಗ್ಗೆ ಉತ್ತರ ಕೋಡೋದು ಸಮಂಜಸವಲ್ಲ. ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ ಎಂಬ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿ, ಯತ್ನಾಳಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ಯತ್ನಾಳ ಅವರು ನನಗೆ ಆತ್ಮೀಯರು ಕೂಡ. ಯತ್ನಾಳ ಅವರಿಗೆ ಈ ಮೊದಲೂ ಹೇಳಿದ್ದೇನೆ. ವಿಧಾನಸಭೆಯಲ್ಲೂ ಹೇಳಿದ್ದೇನೆ. ಯತ್ನಾಳ, ಯತ್ನಾಳ ಆಗಿಯೇ ಇರಬೇಕು. ಕಿತ್ನಾಳ ಆಗಬಾರದು ಎಂದರು.
ನೀವು ಸಹ ಸಚಿವ ಸ್ಥಾನದ ಆಕಾಂಕ್ಷಿನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಿಮಗೆ ಮನವಿ ಮಾಡುತ್ತೇನೆ. ಇಲ್ಲಿ ಬಂದಿರುವ ಉದ್ದೇಶಕ್ಕೆ ಸೀಮಿತ ಆಗುತ್ತೇನೆ. ನಾನು ಪಕ್ಷದ ಅಧ್ಯಕ್ಷನೂ ಅಲ್ಲ, ಸಚಿವನೂ ಅಲ್ಲ. ಅವರು (ಜೆ.ಟಿ.ಪಾಟೀಲ) ನನ್ನ ಹಿರಿಯರು, ನನ್ನ ಬಗ್ಗೆ ಆತ್ಮೀಯ ವಿಶ್ವಾಸ ಇದೆ. ನರೇಂದ್ರಸ್ವಾಮಿ ಅವರು ಸಚಿವರಾಗುವ ಸೂಚನೆ ಇದೆ ಎಂದಿದ್ದಾರಷ್ಟೇ ಎಂದು ತಿಳಿಸಿದರು.
ದೆಹಲಿಗೆ ಹೋಗಿ ರಾಹುಲ್ ಗಾಂಧಿ ಭೇಟಿ ಮಾಡಿರುವ ವಿಚಾರ ಪ್ರಸ್ತಾಪಿಸಿ, ಗುರುವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಈ ಕಾರ್ಯಕ್ರಮಕ್ಕೆ ಆಹ್ವಾನ ಕೋಡಲು ಹೋಗಿದ್ದೆ. ಅಲ್ಲಿಯೂ ರಾಜಕಾರಣ ಮಾತನಾಡಿಲ್ಲ. ನೀವೂ ಯಾವ ರೀತಿ ಊಹೆ ಮಾಡ್ಕೊಂಡರೂ ಚಿಂತೆ ಇಲ್ಲ. ಐದು ನಿಮಿಷ ಮಾತಾಡಿದೆ. ನಾನು ಮಾಡುತ್ತಿರುವ ಕಾರ್ಯದ ಬಗ್ಗೆ ಮಾತನಾಡಿದೆ. ನಮ್ಮ ಮಂಡಳಿಯ ಜವಾಬ್ದಾರಿ ಹೇಗೆ ಹೆಚ್ಚಿಸಿದ್ದೇನೆ ಎಂಬುದರ ಬಗ್ಗೆ ಮಾಹಿತಿ ಕೊಟ್ಟೆ, ಬೇರೆ ಏನೂ ಮಾತಾಡಿಲ್ಲ, ಅವರೂ (ರಾಗಾ) ಸಹ ರಾಜಕೀಯವಾಗಿ ಏನೂ ಕೇಳಿಲ್ಲ ಎಂದರು.