ಕಾರ್ಮಿಕರಿಗಾಗಿ ರಾಜಿ ರಹಿತ ಹೋರಾಟ ನಡೆಸಿದ ಮುಧೋಳ

KannadaprabhaNewsNetwork |  
Published : Apr 02, 2026, 02:00 AM IST
ಹಳೇ ಹುಬ್ಬಳ್ಳಿಯಲ್ಲಿರುವ ಮುಧೋಳ ಭವನದಲ್ಲಿ ಕಾರ್ಮಿಕ ಮುಖಂಡ ಎ.ಜೆ. ಮುಧೋಳ ಅವರ 25ನೇ ವರ್ಷದ ಸ್ಮರಣೋತ್ಸವ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಅಸಂಖ್ಯಾತ ಅಸಂಘಟಿತ, ಸಂಘಟಿತ ಕಾರ್ಮಿಕರ ಬದುಕನ್ನು ಉತ್ತಮ ಪಡಿಸಲು 5 ದಶಕಗಳ ಕಾಲ ನಿರಂತರ ರಾಜಿ ರಹಿತ ಹೋರಾಟ ನಡೆಸಿದ ಕಾಮ್ರೇಡ್ ಎ.ಜೆ. ಮುಧೋಳ ಅವರು ಕಾರ್ಮಿಕ ವರ್ಗದ ಧ್ರುವತಾರೆಯಾಗಿದ್ದರು.

ಹುಬ್ಬಳ್ಳಿ:

ಹಿರಿಯ ಕಮ್ಯೂನಿಸ್ಟ್ ನಾಯಕ, ಕಾರ್ಮಿಕ ಮುಖಂಡ ಎ.ಜೆ. ಮುಧೋಳ ಅವರ 25ನೇ ವರ್ಷದ ಸ್ಮರಣೋತ್ಸವ ಇಲ್ಲಿನ ಹಳೇ ಹುಬ್ಬಳ್ಳಿಯ ಮುಧೋಳ ಭವನದಲ್ಲಿ ಬುಧವಾರ ನಡೆಯಿತು. ಈ ವೇಳೆ ಹಲವು ಗಣ್ಯರು ಮುಧೋಳ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮುಖಂಡರು, ಅಸಂಖ್ಯಾತ ಅಸಂಘಟಿತ, ಸಂಘಟಿತ ಕಾರ್ಮಿಕರ ಬದುಕನ್ನು ಉತ್ತಮ ಪಡಿಸಲು 5 ದಶಕಗಳ ಕಾಲ ನಿರಂತರ ರಾಜಿ ರಹಿತ ಹೋರಾಟ ನಡೆಸಿದ ಕಾಮ್ರೇಡ್ ಎ.ಜೆ. ಮುಧೋಳ ಅವರು ಕಾರ್ಮಿಕ ವರ್ಗದ ಧ್ರುವತಾರೆಯಾಗಿದ್ದರು. ಕಾರ್ಮಿಕರ ಕೂಲಿ, ಸಾಮಾಜಿಕ ಭದ್ರತೆ ಒದಗಿಸುವ ಹಾಗೂ ಬೀಡಿ ಕಾರ್ಮಿಕರಿಗೆ ವಸತಿ ಯೋಜನೆ ಜಾರಿಮಾಡಿಸುವಂತ ಯಶಸ್ವಿ ಹೋರಾಟಗಳನ್ನು ನಡೆಸಿದ್ದರು. ಹುಬ್ಬಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ, ಎ.ಕೆ. ಇಂಡಸ್ಟ್ರೀಜ್, ಬಿಡಿಕೆ, ಕಿರ್ಲೋಸ್ಕರ್, ಮಹಾದೇವ ಜವಳಿ ಗಿರಣಿ, ಸುಂದತ್ತಾ ಮಿಲ್ಲ, ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿ, ನರಗುಂದದ ನಂದಿ ಮಿಲ್, ರೈಲ್ವೆ ವಲಯ ಹುಬ್ಬಳ್ಳಿಯಲ್ಲಿ ಸ್ಥಾಪನೆಯಾಗಬೇಕೆಂದು ಪಾಟೀಲ ಪುಟ್ಟಪ್ಪ ಜತೆಗೆ ನಿರಂತರವಾಗಿ ಹೋರಾಟ ಮಾಡಿ ಯಶಸ್ವಿಯಾದವರು ಎಂದು ಸ್ಮರಿಸಿದರು.

ನಾಡಿನ ಹಿರಿಯ ಕಮ್ಯೂನಿಸ್ಟ್ ನಾಯಕರಾಗಿದ್ದ ಮುಧೋಳರು ಕರ್ನಾಟಕ ಏಕೀಕರಣ ಹೋರಾಟ, ಗೋವಾ ವಿಮೋಚನಾ ಹೋರಾಟ, ನರಗುಂದ ರೈತ ಬಂಡಾಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗ ಅವರು ನಡೆಸಿದ ನೈಯಾಪೈಸೆ ಹೋರಾಟ ಜನಸಾಮಾನ್ಯರ ಗಮನ ಸೆಳೆದಿತ್ತು. ಪ್ರಭಾವಿ ಭಾಷಣಕಾರರಾಗಿದ್ದ ಅವರ ವಿಧ್ವತ್ತು ಸಾಮಾಜಿಕ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಮಹಾನಗರ ಪಾಲಿಕೆ ಸದಸ್ಯರಾಗಿ ಜನಪರ ಹೋರಾಟ ಆದರ್ಶವಾಗಿತ್ತು. ಇಂತಹ ಹೋರಾಟಗಾರರನ್ನು ನೆನಪಿಸಿಕೊಳ್ಳಲು ಹುಬ್ಬಳ್ಳಿ ನಗರದಲ್ಲಿ ಅವರ ಪ್ರತಿಮೆ ನಿರ್ಮಿಸಬೇಕು ಎಂದು ಒತ್ತಾಯಿಸಲಾಯಿತು. ಮುಧೋಳ ಅವರ ಹೋರಾಟ ಬದುಕಿನ ನೆನಪುಗಳನ್ನು ಸ್ಮರಿಸಲಾಯಿತು.

ಈ ವೇಳೆ 25 ಬೀಡಿ ಕಾರ್ಮಿಕರಿಗೆ ಸೀರೆ ವಿತರಿಸಲಾಯಿತು. ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಬಿ.ಎಸ್. ಸೊಪ್ಪಿನ, ಸನತಕುಮಾರ ಬೆಳಗಲಿ, ಮಹೇಶ ಪತ್ತಾರ, ಮಹೇಂದ್ರ ಸಿಂಘಿ, ಮೋಹನ ಲಿಂಬಿಕಾಯಿ, ಬಾಬಾಜಾನ ಮುಧೋಳ, ಬಸೀರ ಮುಧೋಳ, ಇಸೂಫ್ ಬಳ್ಳಾರಿ, ರಮೇಶ ಬೂಸ್ಲೆ, ನಜೀರ್ ಕೋಲ್ಕಾರ, ಮೌಲಾಸಾಬ ನದಾಫ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಸಂಘಟಿತ ಕಾರ್ಮಿಕರಿಗೂ ಸರ್ಕಾರಿ ಸೌಲಭ್ಯ ಕಲ್ಪಿಸಿ: ಕಾಮಾಕ್ಷಿ ರೇವಣಕರ
ಮೈಲಾರ ಮಹಾದೇವಪ್ಪನವರ ರಾಷ್ಟ್ರಪ್ರೇಮ ಎಲ್ಲರಿಗೂ ಆದರ್ಶ: ಡಾ. ವಿಜಯಮಹಾಂತೇಶ ದಾನಮ್ಮನವರ