ಜಿ ಸೋಮಶೇಖರ ಕೊಟ್ಟೂರು
ಸತತ 18 ವರ್ಷಗಳಿಂದ ನಡೆಯದ ತಾಲೂಕಿನ ಮೂಗಬಸವೇಶ್ವರ ಸ್ವಾಮಿ ರಥೋತ್ಸವ ಈ ಬಾರಿ ನೆರವೇರಲಿದೆ ಎಂಬ ಭಕ್ತರ ನಿರೀಕ್ಷೆ ಹುಸಿಯಾಗಿದೆ. ಜಿಲ್ಲಾಧಿಕಾರಿಗಳು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಸೋಮವಾರ ನಡೆಯಬೇಕಿದ್ದ ರಥೋತ್ಸವ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.ಈ ಭಾಗದ ಅಸಂಖ್ಯಾತ ಭಕ್ತರ ಆರಾಧ್ಯ ದೈವ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವ 2007ರಂದು ಚಿರಿಬಿ ಮತ್ತು ರಾಂಪುರ ಗ್ರಾಮಗಳ ನಡುವೆ ಉಂಟಾದ ಸಂಘರ್ಷದ ಕಾರಣದಿಂದ ಜಿಲ್ಲಾಡಳಿತ ರಥೋತ್ಸವ ಹಾಗೂ ಜಾತ್ರಾಮಹೋತ್ಸವ ರದ್ದುಗೊಳಿಸುತ್ತಾ ಬಂದಿದೆ.
ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮೂಗಬಸವೇಶ್ವರ ರಥೋತ್ಸವ ನಡೆಸಬೇಕು ಎನ್ನುವ ಮನವಿಗೆ ಸ್ಪಂಧಿಸಿ ಎರಡು ಗ್ರಾಮಗಳ ಜನರನ್ನು ಜಿಲ್ಲಾಡಳಿತಕ್ಕೆ ಕರೆಯಿಸಿಕೊಂಡು ಜಾತ್ರೆ ನಡೆಸಲು ಗ್ರಾಮಸ್ಥರಿಂದ ಅಭಿಪ್ರಾಯ ಪಡೆದುಕೊಳ್ಳುವ ಪ್ರಯತ್ನ ಮಾಡಿದರು.ಜಿಲ್ಲಾಧಿಕಾರಿಗಳ ಈ ಪ್ರಯತ್ನಕ್ಕೆ ಇಂಬು ಕೊಡುವಂತೆ ಉಭಯ ಗ್ರಾಮಸ್ಥರಿಗೆ ಮೊದ ಮೊದಲು ಭರವಸೆ ನೀಡಲು ಆರಂಭಿಸಿದರು. ಈ ಭಾರಿ ಪ್ರತಿ ವರ್ಷದಂತೆ ಕಡೆಯ ಸೋಮವಾರದಂದು ಮೂಗಬಸವೇಶ್ವರ ಸ್ವಾಮಿಯ ರಥೋತ್ಸವ ಜರುಗಿಸಲು ಧಾರ್ಮಿಕ ದತ್ತಿ ಇಲಾಖೆಯವರು ಸಿದ್ಧತೆ ಕೈಗೊಳ್ಳುತ್ತಿದ್ದಂತೆ ಉಭಯ ಗ್ರಾಮಸ್ಥರಲ್ಲಿ ಮತ್ತೆ ಶ್ರೀಸ್ವಾಮಿಯ ಸೇವೆ ಮಾಡುವ ವಿಷಯ ಪ್ರತಿಷ್ಠೆ ಮಾಡಿಕೊಂಡು ತಮ್ಮ ಅಭಿಪ್ರಾಯಗಳಿಗೆ ಮನ್ನಣೆ ನೀಡಿದರೆ ಮಾತ್ರ ರಥೋತ್ಸವ ಹಾಗೂ ಜಾತ್ರಾಮಹೋತ್ಸವ ನಡೆಸಲು ನಾವು ಸಹಕರಿಸುತ್ತೇವೆ ಎನ್ನುವ ಧೋರಣೆ ಮುಂದುವರೆಸಿದ್ದರಿಂದ ಗ್ರಾಮಸ್ಥರಲ್ಲಿ ಸಾಮರಸ್ಯ ಮೂಡದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಚಿರಿಬಿ ಮತ್ತು ರಾಂಪುರ ಗ್ರಾಮಗಳಲ್ಲಿ ಶಾಂತಿ, ಸೌಹಾರ್ಧತೆ ಕಾಪಾಡುವ ದೃಷ್ಠಿಯಿಂದ ಆ.18 ರಿಂದ 20 ರವರೆಗೆ ನಡೆಯಬೇಕಿದ್ದ ಶ್ರೀಮೂಗಬಸವೇಶ್ವರ ರಥೋತ್ಸವ ಜಾತ್ರಾಮಹೋತ್ಸವ, ಮತ್ತಿತರ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿಗಳು ಶನಿವಾರ ಆದೇಶ ಹೊರಡಿಸಿದ್ದಾರೆ.18 ವರ್ಷಗಳಿಂದ ಸ್ಥಗಿತಗೊಂಡಿದ್ದ ಶ್ರೀಮೂಗಬಸವೇಶ್ವರ ಸ್ವಾಮೀಯ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಈ ಬಾರಿ ಎಲ್ಲಾ ಗೊಂದಲಗಳು ದೂರವಾಗಿ ಖಂಡಿತ ನೆರವೇರುತ್ತೆಂಬ ಆಶಯವನ್ನು ಹೊಂದಿದ್ದೇವು .ಈ ವರ್ಷವೂ ರದ್ದುಗೊಂಡಿರುವುದು ಧಾರ್ಮೀಕ ಮತ್ತು ಸಾಂಸ್ಕ್ರತಿಕ ಮಹೋತ್ಸವ ನೋಡಬೇಕು ಎಂಬ ಆಶೆಯ ಕಮರಿ ಹೋಗಿದ್ದು ನಿಜಕ್ಕೂ ದೌರ್ಭಾಗ್ಯ ಎಂದು ಕೊಟ್ಟೂರು ಭಕ್ತ ಅನಿಲ್ ಕುಮಾರ್ ಎಂ ಎಸ್ ಹೇಳಿದ್ದಾರೆ.ಮೂಗಬಸವೇಶ್ವರ ರಥೋತ್ಸವದ ರದ್ದು ಆದೇಶ ಹಿನ್ನೆಲೆ ದೇವಸ್ಥಾನದ ವ್ಯಾಪ್ತಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಆ.18 ರಿಂದ 20 ರವರೆಗೆ ಕೈಗೊಂಡಿದ್ದೇವೆ. ಡಿಎಆರ್ ಪೊಲೀಸ್ ತಂಡವನ್ನು ಹೆಚ್ಚುವರಿಯಾಗಿ ತರಿಸಿಕೊಳ್ಳಲು ಸಿದ್ಧತೆ ನಡೆಸಿದ್ದೇವೆ. ರಾಂಪುರ ಮತ್ತು ಚಿರಿಬಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕಟ್ಟೆಚ್ಚರ ಕ್ರಮ ಕೈಗೊಂಡಿದ್ದೇವೆ ಎಂದು ಕೊಟ್ಟೂರ ಪಿಎಸ್ಐ ಗೀತಾಂಜಲಿ ಸಿಂಧೆ ತಿಳಿಸಿದ್ದಾರೆ.