ಹರಪನಹಳ್ಳಿ: ಜೈನ ಧರ್ಮ ಹಾಗೂ ಧರ್ಮಸ್ಥಳದ ಡಾ.ವೀರೇಂದ್ರ ಹೆಗಡೆಯವರ ಬಗ್ಗೆ ಅವಹೇಳನಕಾರಿ ಮತ್ತು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ದಿಗಂಬರ ಜೈನ್ ಸಮಾಜದವರು ಪ್ರತಿಭಟನೆ ನಡೆಸಿ ಶನಿವಾರ ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಈಗಾಗಲೇ ಧರ್ಮಸ್ಥಳದಲ್ಲಿ ಆಗಿರುವ ಕೊಲೆ, ಅತ್ಯಾಚಾರದಂತಹ ಆರೋಪಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ಎಸ್ ಐಟಿ ರಚನೆ ಮಾಡಿದೆ, ಸತ್ಯ ಸತ್ಯತೆ ಕುರಿತು ತನಿಖೆ ನಡೆಯುತ್ತಲಿದ್ದು, ತನಿಖೆಗೆ ಡಾ. ವಿರೇಂದ್ರ ಹೆಗಡೆ ಸಹ ಸಹಕಾರ ಕೊಡುತ್ತಲಿದ್ದಾರೆ ಆದ್ದರಿಂದ ಈ ಸಂಬಂಧ ವೀರೇಂದ್ರ ಹೆಗಡೆಯವರ ಹಾಗೂ ಕ್ಷೇತ್ರದ ಕುರಿತು ಯಾವುದೇ ರೀತಿಯ ವಿಡಿಯೋ ಹಾಗೂ ಸುಳ್ಳು ಸುದ್ದಿಗಳನ್ನು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜೈನ ಧರ್ಮದ ಹಾಗೂ ಡಾ. ವಿರೇಂದ್ರ ಹೆಗಡೆ ಕುರಿತು ಏಕವಚನದಲ್ಲಿ ಮಾತನಾಡುತ್ತಿರುವ ಗಿರೀಶ ಮಟ್ಟೆಣ್ಣನವರ್, ಮಹೇಶ ಶೆಟ್ಟಿ ತಿಮರೋಡಿ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರಗೆ ನೀಡಿದ ಮನವಿಯಲ್ಲಿ ಕೋರಿದ್ದಾರೆ.