ಶಿರಹಟ್ಟಿ: ಮೊಹರಂ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಪ್ರಮುಖವಾದದ್ದು ಎಂದು ಶ್ರೀ ಜಗದ್ಗುರು ಫಕೀರೇಶ್ವರ ಮಠದ ೧೩ನೇ ಪೀಠಾಧ್ಯಕ್ಷ ಶ್ರೀ ಜ. ಫಕೀರ ಸಿದ್ದರಾಮ ಸ್ವಾಮೀಜಿ ಹೇಳಿದರು.
ಯಾವುದೇ ತಾರತಮ್ಯವಿಲ್ಲದಂತೆ ಈ ಹಬ್ಬದಲ್ಲಿ ಹಿಂದೂಗಳು ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೊಹರಂ ಹಬ್ಬದಂದು ಭೇದ-ಭಾವವಿಲ್ಲದೆ ಎಲ್ಲರೂ ಭಾಗವಹಿಸಿ, ಸಡಗರ-ಸಂಭ್ರಮದಿಂದ ಆಚರಣೆ ಮಾಡುತ್ತಾರೆ ಎಂದು ಹೇಳಿದರು. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ನಾಡಿನಲ್ಲಿ ಹೆಸರಾಗಿರುವ ಫಕೀರೇಶ್ವರ ಮಠದ ಭಕ್ತರು ಜಾತಿ ಎಣಿಸುವುದಿಲ್ಲ. ಪ್ರೀತಿ ಬಿಡುವುದಿಲ್ಲ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ. ನಿತ್ಯ ಕೋಮು ಗಲಭೆಗಳಿಂದ ಘರ್ಷಣೆಗಳಾಗುತ್ತಿರುವುದನ್ನು ಕೇಳುತ್ತಿದ್ದೇವೆ. ಹಿಂದೂ ಮುಸ್ಲಿಂ ಭಕ್ತರೇ ನಮ್ಮ ಮಠಕ್ಕೆ ನಡೆದುಕೊಳ್ಳುತ್ತಿರುವುದರಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ ಎಂದರು.
ಈ ಹಬ್ಬದಲ್ಲಿ ಹೆಜ್ಜೆ ಕುಣಿತ, ಮಟಕಿ ಹೆಜ್ಜೆ ಕುಣಿತ, ಮರಗಾಲು ಕುಣಿತ ಮುಂತಾದ ಪ್ರಕಾರಗಳನ್ನು ಪ್ರದರ್ಶಿಸಲಾಗುತ್ತದೆ. ಹಳ್ಳಿಗಳಲ್ಲಿ ಈ ಕುಣಿತಕ್ಕೆ ಅಲಾಯಿ ಹೆಜ್ಜೆ ಕುಣಿತ ಎಂದು ಕರೆಯುತ್ತಾರೆ. ತಾಲೂಕಿನ ಮಾಚೇನಹಳ್ಳಿ, ಛಬ್ಬಿ, ಕುಸ್ಲಾಪುರ ಗ್ರಾಮಗಳು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮುಸ್ಲಿಮೇತರರೇ ಹೆಚ್ಚಾಗಿ ಭಾಗವಹಿಸುತ್ತಾರೆ ಎಂದು ಹೇಳಿದರು.ಈ ವೇಳೆ ಮುಖಂಡ ಹುಮಾಯೂನ್ ಮಾಗಡಿ ಬನ್ನಿಕೊಪ್ಪ, ಗ್ರಾಮದ ಅಣ್ಣಪ್ಪ ಕುಸ್ತಿ, ಪ್ರವೀಣ ಕಾಲವಾಡ, ಹಾಲೇಶ ತಳವಾರ, ಹೊನ್ನಪ್ಪ ಕುಸ್ತಿ, ದೇವಪ್ಪ ಬಡೆಮ್ಮನವರ, ಕೆಂಚಪ್ಪ ಭೋವಿ, ನಾಗಪ್ಪ ಕಟ್ಟಿಮನಿ, ಭೀಮಪ್ಪ ಬಡೆಮ್ಮನವರ, ಫಕ್ರುಸಾಬ ನದಾಫ್, ನೀಲಪ್ಪ ಕಳಸಾಪುರ, ರಾಜಾಭಕ್ಷಿ ಚಿಂಚಲಿ, ಅಲ್ಲಾಭಕ್ಷಿ ನದಾಫ್, ಹನುಮಂತ ಕುಸ್ತಿ, ಮಂಜುನಾಥ ತಳವಾರ, ದಾವಲಸಾಬ ನದಾಫ್ ಇದ್ದರು.