ಸ್ಥಳೀಯ ಕೆಪಿಎಸ್ ಶಾಲಾ ಮೈದಾನದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಚೀಯಕಪೂವಂಡ ಕುಟುಂಬದವರು ಆಯೋಜಿಸಿರುವ 5ನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಅಂತಿಮವಾಗಿ ಮುಕ್ಕಾಟಿರ ಹರಿಹರ ತಂಡ ಚೀಯಕಪೂವಂಡ ಕಪ್ ಮುಡಿಗೇರಿಸಿಕೊಂಡಿತು. ಮಹಿಳಾ ವಿಭಾಗದಲ್ಲಿ ಕಾಂಡಂಡ ತಂಡ ಚಾಂಪಿಯನ್ ಆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸ್ಥಳೀಯ ಕೆಪಿಎಸ್ ಶಾಲಾ ಮೈದಾನದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಚೀಯಕಪೂವಂಡ ಕುಟುಂಬದವರು ಆಯೋಜಿಸಿರುವ 5ನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಅಂತಿಮವಾಗಿ ಮುಕ್ಕಾಟಿರ ಹರಿಹರ ತಂಡ ಚೀಯಕಪೂವಂಡ ಕಪ್ ಮುಡಿಗೇರಿಸಿಕೊಂಡಿತು. ಮಹಿಳಾ ವಿಭಾಗದಲ್ಲಿ ಕಾಂಡಂಡ ತಂಡ ಚಾಂಪಿಯನ್ ಆಯಿತು.
ವಿಜೇತ ಎರಡೂ ತಂಡಗಳಿಗೆ ಒಂದು ಲಕ್ಷ ರು. ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ಪುರುಷರ ವಿಭಾಗದ ರನ್ನರ್ಸ್ ಚೀಯಕಪೂವಂಡ ತಂಡಕ್ಕೆ75 ಸಾವಿರ ರು. ಹಾಗೂ ಟ್ರೋಫಿ ಮತ್ತು ಮಹಿಳಾ ವಿಭಾಗದ ರನ್ನರ್ಸ್ ತಂಡ ಪುದಿಯೋಕ್ಕಡ ತಂಡಕ್ಕೆ75 ಸಾವಿರ ರು. ಮತ್ತು16 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಅಜ್ಜ ಮಾಡ ಕುಟುಂಬ ಚಾಂಪಿಯನ್ ಆಗಿ ಗೆಲವು ಸಾಧಿಸಿ 20 ಸಾವಿರ ರು. ನಗದು ಹಾಗೂ ಟ್ರೋಫಿ , ರನ್ನರ್ಸ್ ಆಗಿ ಮುಕ್ಕಾಟಿರ ದೊಡ್ಡಪುಲಿಕೋಟು ಕುಟುಂಬ 15 ಸಾವಿರ ರು. ನಗದು, ಟ್ರೋಫಿ ಪಡೆದುಕೊಂಡವು.ಪಂದ್ಯಾವಳಿಯಲ್ಲಿ 295 ಕುಟುಂಬಗಳು ಪಾಲ್ಗೊಂಡಿದ್ದು, 24 ತಂಡಗಳು ಭಾನುವಾರ ಪ್ರಶಸ್ತಿಗಾಗಿ ಸೆಣೆಸಾಡಿ. ಅಂತಿಮ ಪಂದ್ಯದಲ್ಲಿ ಮುಕ್ಕಾಟಿರ ಹರಿಹರ, ಕಾಂಡಂಡ ತಂಡಗಳು ಜಯಭೇರಿ ಬಾರಿಸಿದವು.ಅಂತಿಮ ಪಂದ್ಯಾಟ ಉದ್ಘಾಟಿಸಿದ ಬಳಿಕ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಕ್ರೀಡೆ ಕೊಡವ ಸಂಸ್ಕೃತಿಯ ಒಂದು ಭಾಗವಾಗಿದೆ. ಕೊಡಗು ಪುಟ್ಟ ಜಿಲ್ಲೆಯಾದರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿದ ಕೀರ್ತಿಗೆ ಪಾತ್ರವಾಗಿದೆ. ಯುವ ಜನರ ಪ್ರತಿಭೆಯನ್ನು ಬೆಳೆಸಲು ಕ್ರೀಡಾಕೂಟಗಳು ವೇದಿಕೆ ಆಗಬೇಕು ಎಂದರು.
ಕೊಡವ ಜನಾಂಗಕ್ಕೆ 1963ರಿಂದ 1919ರವರೆಗೆ ಕೋವಿಯ ಹಕ್ಕು ಇತ್ತು. ಇದನ್ನು ಉಳಿಸಿಕೊಳ್ಳಲು ಕಾರಣಕರ್ತರಾದವರು ಚೀಯಕಪೂವಂಡ ಕುಟುಂಬಸ್ಥರು. ಇಂದು ಅದೇ ಕುಟುಂಬ ಕೇರ್ಬಲಿ ನಮ್ಮೆಯನ್ನು ಉತ್ತಮ ಕ್ರೀಡಾಕೂಟವನ್ನಾಗಿಸಿ ಹೆಸರು ಮಾಡಿದೆ ಎಂದರು. ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ರೈತ ಸಂಘದ ಅಧ್ಯಕ್ಷ ಕಾಡ್ಯಮಡ ಮನು ಸೋಮಯ್ಯ, ರಾಷ್ಟೀಯ ಮಹಿಳಾ ಕೌನ್ಸಿಲ್ ನ ಮುಖ್ಯಸ್ಥ ಶರತ್ ಪರಕೋತ್ ಇಲ್ಲಿಯ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ, ಚೀಯಕಪೂವಂಡ ಹಗ್ಗ ಜಗ್ಗಾಟ ಉತ್ಸವದ ಅಧ್ಯಕ್ಷ ಸಿ.ಕೆ. ಬೋಪಣ್ಣ ಮಾತನಾಡಿದರು.ಟಗ್ ಅಪ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನಲತಂಡ ಕಿರಣ್ ಪೊನ್ನಪ್ಪ ಮಾತನಾಡಿ, ಇದುವರೆಗೆ ಹಗ್ಗಜಗ್ಗಾಟ ಕ್ರೀಡಾಕೂಟ ಐದು ಬಾರಿ ನಡೆದಿದ್ದು, ಈ ಬಾರಿ 195 ಕುಟುಂಬಗಳನ್ನು ಸೇರಿಸಿ ನಡೆಸಿದ ಕ್ರೀಡಾಕೂಟ ಭಾರತೀಯ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ ಎಂದರು.ಸಮಾರೋಪ:
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಚೀಯಕಪೂವಂಡ ಕುಟುಂಬದ ಅಧ್ಯಕ್ಷ ಸಿ.ಎಂ. ಅಪ್ಪಚ್ಚು ವಹಿಸಿದ್ದರು. ಮುಂಡ್ಯೋಳಂಡ ಕುಟುಂಬದ ಅಧ್ಯಕ್ಷ ಎಂ.ಟಿ. ತಿಮ್ಮಯ್ಯ, ಚೀಯಕಪೂವಂಡ ಕುಟುಂಬದ ಹಿರಿಯ ಸಿ.ಎ. ಚಿಟ್ಟಿಯಪ್ಪ ಸೇರಿದಂತೆ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಮುಂದಿನ ವರ್ಷ ಕೇರ್ಬಲಿ ನಮ್ಮೆಯನ್ನು ಮುಂಡ್ಯೋಳಂಡ ಕುಟುಂಬ ವಿರಾಜಪೇಟೆಯಲ್ಲಿ ಆಯೋಜಿಸಲಿದ್ದು, ಇದರ ಧ್ವಜವನ್ನು ಈ ಸಂದರ್ಭ ಮುಂಡ್ಯೋಳಂಡ ಕುಟುಂಬದ ಅಧ್ಯಕ್ಷ ಎಂ.ಟಿ. ತಿಮ್ಮಯ್ಯ ಹಾಗೂ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.ಪಂದ್ಯಗಳ ವೀಕ್ಷಕ ವಿವರಣೆಗಾರರಾಗಿ ಮಾಲೇಟಿರ ಶ್ರೀನಿವಾಸ್, ಬಾಳೆಯಡ ದಿವ್ಯ ಮಂದಪ್ಪ, ಕೊಟ್ಟಂಗಡ ರಾಜಾ ಸುಬ್ಬಯ್ಯ, ಪೊನ್ನೊಲತಂಡ ಕಿರಣ್ ಪೊನ್ನಪ್ಪ ಕಾರ್‍ಯನಿರ್ವಹಿಸಿದರು.ಪಂದ್ಯಾಟದ ನಿರ್ದೇಶಕರಾಗಿ ಚಟ್ಟಂಗಡ ರವಿ ಸುಬ್ಬಯ್ಯ, ತೀರ್ಪುಗಾರರಾಗಿ ಚಟ್ಟಂಗಡ ಕಂಬ ಕಾರ್ಯಪ್ಪ, ಜಮ್ಮಡ ಗಿಲ್, ಕೊಣಿಯಂಡ ಮಂಜು ಮಾದಯ್ಯ, ಮುಂಡಚಾಡಿರ ಭರತ್, ಪೊನ್ನೊಲತಂಡ ಹರೀಶ್ , ಪೊನ್ನೊಲತಂಡ ಯಶು, ಪೊನ್ನೊಲತಂಡ ಆರ್ಯನ್ ಸೋಮಯ್ಯ, ಪೊನ್ನೊಲತಂಡ ಆಯುಷ್ ಪೊನ್ನಣ್ಣ, ಬಾಳೆಕುಟ್ಟಿರ ಬೋಪಣ್ಣ, ಬೊಟ್ಟೋಳಂಡ ಪವಿನ್, ಕೊಣಿಯಂಡ ದೀಕ್ಷಿತ್ ಕಾರ್‍ಯನಿರ್ವಹಿಸಿದರು. 2022ರಲ್ಲಿ ಪೊನ್ನೋಲತಂಡ ಕುಟುಂಬಸ್ಥರು ಆಯೋಜಿಸಿದ್ದ ಕೇರ್ ಬಲಿ ನಮ್ಮೆಯಲ್ಲಿ 40 ಕುಟುಂಬ ಪಾಲ್ಗೊಂಡಿದ್ದರೆ 2023ರಲ್ಲಿ ಟಿ. ಶೆಟ್ಟಿಗೇರಿಯಲ್ಲಿ ನಡೆದ ಚೆಟ್ಟಂಗಡ ನಮ್ಮೆಯಲ್ಲಿ 171, 2024ರಲ್ಲಿ ನಾಪೋಕ್ಲುವಿನಲ್ಲಿ ನಡೆದ ಬೊಟ್ಟೋಳಂಡ ಕೇರ್ ಬಲಿ ನಮ್ಮೆಯಲ್ಲಿ 230, 2025 ರಲ್ಲಿ ನಡೆದ ಬಾಳೆಕುಟ್ಟೀರ ಕಪ್ ಕ್ರೀಡೆಯಲ್ಲಿ 282 ಹಾಗೂ 2026ರಲ್ಲಿ ಚೀಯಕಪೂವಂಡ ಕುಟುಂಬದವರು ಆಯೋಜಿಸಿದ್ದ ಕೊಡವ ಕೌಟುಂಬಿಕ ಹಗ್ಗಜಗ್ಗಾಟಪಂದ್ಯಾವಳಿಯಲ್ಲಿ ಈ ಬಾರಿ 295 ಕುಟುಂಬಗಳನ್ನು ಸೇರಿಸಿ ನಡೆಸಿದ ಕ್ರೀಡಾಕೂಟ ಭಾರತೀಯಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಲಾಯಿತು. ಇದನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯಬುಕ್ ಆಫ್ ರೆಕಾರ್ಡ್ ಸಿಇಒ ಸಮೀಮ್ ರಜಾಕ್ ಘೋಷಿಸಿ (ಅರ್ಹತಾ ಪತ್ರ) ದಾಖಲಾತಿ ವನ್ನು ಕುಟುಂಬದ ಪ್ರಮುಖರಿಗೆ ಹಸ್ತಾಂತರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.