ಮಹೇಶ ಛಬ್ಬಿ
ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಶ್ರೀ ಗ್ರಾಮ ದೇವತೆಯ ಟೋಪ ಜಾತ್ರಾ ಮಹೋತ್ಸವ ಜೂ. 3ರಿಂದ ಜೂ. 6ರ ವರೆಗೆ ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ.
ಈಗಾಗಲೇ ಪಟ್ಟಣದ ಜನತೆ ಟೋಪ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಊರಿನ ಪ್ರಮುಖ ಬೀದಿಗಳು, ದೇವಸ್ಥಾನಗಳು ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದೆ. ವೇದಿಕೆ ಕಾರ್ಯಕ್ರಮಕ್ಕೆ ಪಟ್ಟಣದ ಎಸ್.ಜೆ.ಜೆ.ಎಂ. ಸಂಯುಕ್ತ ಪಪೂ ಕಾಲೇಜು ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ.ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರ ಆರಾಧ್ಯ ದೇವಿಯೂ ಗ್ರಾಮದ ರಕ್ಷಣೆ ಜತೆಗೆ ರೈತರ ಬೆಳೆಗಳಿಗೆ ರಕ್ಷಣೆ ನೀಡುವ ಮಹಾತಾಯಿ. ಜಾತಿ, ಮತ, ಭೇದವಿಲ್ಲದೆ ಸರ್ವ ಜನಾಂಗಕ್ಕೂ ಆಧಿಶಕ್ತಿಯಾಗಿ ನೆಲೆಸಿ ಎರಗಿ ಬಂದ ಕಷ್ಟಗಳಿಗೆ ಪರಿಹಾರ ಕಲ್ಪಿಸುವ ದೈವಿ ಶಕ್ತಿಯಾಗಿದ್ದಾಳೆ.
ಉತ್ತರ ಕರ್ನಾಟಕದಲ್ಲಿ ಅನಾದಿ ಕಾಲದಿಂದಲೂ ಪ್ರತಿ ಗ್ರಾಮಗಳಲ್ಲಿ ಗ್ರಾಮದೇವತೆಯ ದೇವಸ್ಥಾನವಿರುವುದು ಪ್ರತೀತಿ. ವಿಶೇಷವಾಗಿ ರೈತರು ಮೊದಲ ಪೂಜೆ ದೇವಿಗೆ ಸಲ್ಲಿಸಿ, ಆನಂತರ ಭೂಮಿಪೂಜೆ ನೆರವೇರಿಸಿ, ತಮ್ಮ ಹೊಲಗಳಿಗೆ ಬಿತ್ತನೆ ಹಾಗೂ ರಾಶಿ ಮಾಡುವ ಕೆಲಸ ಮಾಡುತ್ತಾರೆ. ಇತರ ಶುಭ ಕಾರ್ಯಗಳಿಗೆ ದೇವಿಯರಿಗೆ ಉಡಿ ತುಂಬುವ ಕಾರ್ಯ ಮೊದಲು ನೆರವೇರಿಸಿ ಆನಂತರ ಮುಂದಿನ ಕಾರ್ಯ ನೆರವೇರಿಸುವರು.ಪ್ರತಿ 12 ವರ್ಷಗಳಿಗೊಮ್ಮೆ ಈ ಜಾತ್ರೆ ವೈಭವದಿಂದ ನಡೆಯುತ್ತ ಬಂದಿದೆ. 200 ವರ್ಷಗಳ ಹಿಂದೆ ತಯಾರಿಸಲಾಗಿದ್ದ ದ್ಯಾಮವ್ವ ಹಾಗೂ ದುರ್ಗಮ್ಮನ ಮೂರ್ತಿ ಹೊಂದಿದ್ದು, ಪ್ರಸ್ತುತ ನೂತನ ಮೂರ್ತಿಗಳನ್ನು ದಿ. ಆರ್.ಎನ್. ದೇಶಪಾಂಡೆ ಅವರ ಸ್ಮರಣಾರ್ಥ ಅವರ ಪುತ್ರ, ಪಪಂ ಸದಸ್ಯ ನಾಗರಾಜ ದೇಶಪಾಂಡೆ ಅವರು ₹12 ಲಕ್ಷ ಸ್ವಂತ ಖರ್ಚಿನಲ್ಲಿ ಮಾಡಿಸಿದ್ದಾರೆ.
ಮೊದಲ 3 ದಿನ ದೇವಿಯು ಊರಿನ 5 ಕಟ್ಟೆ ಮನೆಗಳಿಗೆ (ಗ್ರಾಮದ ಪ್ರಮುಖರ) ಭೇಟಿ ನೀಡಿ, ಆನಂತರ ಚೌತಮನೆಯ ಕಟ್ಟೆಗೆ ಆಗಮಿಸಿ ವಾಸ್ತವ್ಯ ಹೂಡುವಳು. ಈ ವೇಳೆ ಭಕ್ತರ ಮನೆ ಮನೆಗೆ ತೆರಳಿ ಉಡಿ ತುಂಬಿಸಿಕೊಳ್ಳುವ ಕಾರ್ಯ ಜರುಗುವುದು. ಪ್ರತಿದಿನ ಬೆಳಗ್ಗೆಯಿಂದ ಸಂಜೆ ವರೆಗೆ ದೇವಿಯ ಮೂರ್ತಿ ಮೆರವಣಿಗೆ ನಡೆಯುವುದು. ಕೊನೆಯ ದಿನ ರಾತ್ರಿಯಿಂದ ಬೆಳಗ್ಗೆ ವರೆಗೆ ದೇವಿಯ ವೈಭವದ ಮೆರವಣಿಗೆ ಸಕಲ ವಾದ್ಯ ಮೇಳಗಳೊಂದಿಗೆ ಜರುಗುವುದು.ಮನೆ ಹೆಣ್ಣು ಮಕ್ಕಳ ಆಗಮನ: ಈ ಗ್ರಾಮದೇವಿಯ ಜಾತ್ರಾ ಮಹೋತ್ಸವಕ್ಕೆ ಪಟ್ಟಣದಲ್ಲಿ ಜನಿಸಿದ ಪ್ರತಿ ಹೆಣ್ಣು ಮಕ್ಕಳು ಆಗಮಿಸುತ್ತಾರೆ. ತವರಿನ ಸಿರಿ ಹೆಚ್ಚಿಸುವ ಜತೆಗೆ ಗಂಡನ ಮನೆಗೆ ಸಕಲ ಸಮೃದ್ಧಿ ಹೆಚ್ಚಾಗುವುದು ಎಂಬ ಬಲವಾದ ನಂಬಿಕೆ ಅವರಲ್ಲಿದೆ.
ಮಾಂಸಾಹಾರವಿಲ್ಲ: ಈ ಜಾತ್ರೆಯಲ್ಲಿ ಜಾತಿ, ಮತ, ಭೇದ ಭಾವವಿಲ್ಲದೇ ಎಲ್ಲ ಜನಾಂಗದವರು ದೇವಿಗೆ ಉಡಿ ತುಂಬುವ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಈ ಜಾತ್ರಾ ಮಹೋತ್ಸವದಲ್ಲಿ ಮಾಂಸಾಹಾರ ಸೇವನೆ ಸಹ ಮಾಡುವುದಿಲ್ಲ.32 ಸಿಸಿ ಕ್ಯಾಮೆರಾ: ಟೋಪ ಜಾತ್ರಾ ಮಹೋತ್ಸವವು ಯಾವುದೇ ಅಡೆತಡೆಯಾಗದಂತೆ ನೆರವೇರಲು, ಬಂದ ಭಕ್ತಾದಿಗಳ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪಟ್ಟಣದಾದ್ಯಂತ 32 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ವಿಶೇಷವಾಗಿ ರೈತರ ಮೊದಲ ಪೂಜೆ ದೇವಿಗೆ ಸಲ್ಲಿಸಿ ಆನಂತರ ಭೂಮಿಪೂಜೆ ನೆರವೇರಿಸಿ ಹೊಲಗಳಿಗೆ ಬಿತ್ತನೆ ಹಾಗೂ ರಾಶಿ ಮಾಡುವ ಕೆಲಸ ಮಾಡಲಾಗುತ್ತದೆ. ಪ್ರತಿವರ್ಷವು ದೇವಿಯರಿಗೆ ಉಡಿ ತುಂಬಿದ ನಂತರವೇ ಬಿತ್ತನೆ ಕಾರ್ಯ ಪ್ರಾರಂಭಿಸಲಾಗುವುದು. ಪ್ರಸಕ್ತ ವರ್ಷ 12 ವರ್ಷಗೊಳಿಗೊಮ್ಮೆ ನಡೆಯುವ ಗ್ರಾಮದೇವತೆಯರ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ವಿಶೇಷವಾಗಿ ರೈತರ ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ ಎಂದು ರೈತ ಸಂಘದ ಕಾರ್ಯದರ್ಶಿ ಮಹಾಂತೇಶ ಗುಂಜಳ ಹೇಳಿದರು.12 ವರ್ಷಗಳಿಗೊಮ್ಮೆ ನಡೆಯುವ ಶ್ರೀ ಗ್ರಾಮದೇವತಾ ಜಾತ್ರಾ ಮಹೋತ್ಸವ ಪ್ರಸಕ್ತ ವರ್ಷ ಅತ್ಯಂತ ಅದ್ಧೂರಿ, ಅರ್ಥಪೂರ್ಣವಾಗಿ ಜರುಗಲಿದೆ. ಜಾತ್ರಾಮಹೋತ್ಸವದ ಯಶಸ್ಸಿಗೆ ಯುವಕರ ಸಹಕಾರ ಬಹಳ ಮುಖ್ಯವಾಗಿದೆ ಎಂದು ಯುವ ಮುಖಂಡರು ಅಶೋಕ ಹುಣಸಿಮರದ ಹೇಳಿದರು.